Advertisement

ಮುಟ್ಟಿನ ಕಪ್‌ ಬಳಕೆ ಸುಲಭ, ಕಿರಿಕಿರಿಯೂ ಇಲ್ಲ

05:07 PM May 28, 2023 | Team Udayavani |

ಬೆಂಗಳೂರು: ಹೆಣ್ಣುಮಕ್ಕಳು ಋತುಮತಿಯಾದಾಗ ಬಟ್ಟೆ, ಸ್ಯಾನಿಟರಿ ಪ್ಯಾಡ್‌ ಬಳಸುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಮುಟ್ಟಿನ ಕಪ್‌ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಹೌದು, ಮುಟ್ಟಿನ ನೈರ್ಮಲ್ಯದ ಬಗ್ಗೆ ಹೆಚ್ಚಿನ ತಿಳಿವಳಿಕೆ ಹಾಗೂ ವಿದ್ಯಾವಂತ ಯುವತಿಯರು ಮುಟ್ಟಿನ ಕಪ್‌ಗ್ಳನ್ನು ಬಳಸಲು ಮುಂದಾಗಿದ್ದು, ಇದಕ್ಕೆ ಬೆಂಗಳೂರು ನಗರ ಪೊಲೀಸ್‌ ಮತ್ತು ವನಿತಾ ಸಹಾಯವಾಣಿ ಸಾಥ್‌ ನೀಡಿದೆ. ನಗರದ ಮಹಿಳಾ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಗೆ ಉಚಿತ ಮೆನ್‌ಸ್ಟ್ರೆವಲ್‌ (ಮುಟ್ಟಿನ) ಕಪ್‌ ವಿತರಿಸಲಾಗಿದೆ.

ಮಹಿಳೆಯ ಮುಟ್ಟಿನ ಚಕ್ರವು 28 ದಿನಗಳಿಗೊಮ್ಮೆ ಹಾಗೂ ತಿಂಗಳಲ್ಲಿ ಸಾಮನ್ಯವಾಗಿ ಐದು ದಿನಗಳ ಕಾಲ ರಕ್ತಸ್ರಾವ ಉಂಟಾಗುವುದರಿಂದ ಪ್ರತಿ ವರ್ಷ ಮೇ 28ರಂದು “ಮುಟ್ಟಿನ ನೈರ್ಮಲ್ಯ ದಿನ’ವನ್ನಾಗಿ ಆಚರಿಸಲಾಗುತ್ತದೆ.

ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸುಮಾರು ಆರು ವರ್ಷಗಳಷ್ಟು ಅವಧಿ ಋತುಚಕ್ರದಲ್ಲಿಯೇ ಕಳೆಯುತ್ತಾಳೆ. ಮಹಿಳೆಯರು ಋತುಮತಿಯಾದಾಗ ಕಡಿಮೆ ಎಂದರೂ ದಿನಕ್ಕೆ ಮೂರು ಪ್ಯಾಡ್‌ಗಳನ್ನು ಉಪಯೋಗಿಸುವುದರಿಂದ ತನ್ನ ಜೀವಿತಾವಧಿಯಲ್ಲಿ 10 ರಿಂದ 12 ಸಾವಿರ ಪ್ಯಾಡ್‌ಗಳನ್ನು ಬಳಸುತ್ತಾಳೆ. ಸಾಮಾನ್ಯವಾಗಿ ಪ್ಯಾಡ್‌ಗಳಲ್ಲಿ ಶೇ.90ರಷ್ಟು ಪ್ಲಾಸ್ಟಿಕ್‌ ಬಳಸಿರುತ್ತಾರೆ. ಇದರಿಂದಾಗಿ ನೂರಾರು ವರ್ಷಗಳಾದರೂ ಮಣ್ಣಿನಲ್ಲಿ ಕೊಳೆಯುವುದಿಲ್ಲ ಹಾಗೂ ಪ್ಯಾಡ್‌ಗಳನ್ನು ಸುಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಜತೆಗೆ ಪ್ಯಾಡ್‌ಗಳಲ್ಲಿ ಹೆಚ್ಚು ರಕ್ತವನ್ನು ಹೀರಿಕೊಳ್ಳಲು ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಾರೆ. ಇದರಿಂದ ಶಿಲೀಂದ್ರಗಳ ಸೋಂಕು, ಬಂಜೆತನ, ಮೂತ್ರದ ಸೋಂಕು, ಕ್ಯಾನ್ಸರ್‌ ಬರುವ ಸಾಧ್ಯತೆಗಳೂ ಇವೆ ಎಂದು ಸ್ತ್ರೀರೋಗ ತಜ್ಞೆ ಡಾ. ಹೇಮಾವತಿ ತಿಳಿಸುತ್ತಾರೆ.

ಮುಟ್ಟಿನ ಕಪ್‌ ತಯಾರಿಕೆ, ಉಪಯೋಗ: ಮೊದಲು ಮುಟ್ಟಿನ ಕಪ್‌ ಅನ್ನು ರಬ್ಬರ್‌ನಿಂದ ಮಾಡಲಾಗುತ್ತಿತ್ತು. ಆದರೆ, ಈಗ ‘ಮೆಡಿಕಲ್‌ ಗ್ರೇಡ್‌ ಸಿಲಿಕಾನ್‌’ ಎಂಬ ಪ್ರಮಾಣೀಕರಿಸಿದ ಅಂಶದಿಂದ ತಯಾರಿಸಲಾಗಿದ್ದು, ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಗರ್ಭಕೋಶದಿಂದ ಬರುವ ರಕ್ತವನ್ನು ನೇರವಾಗಿ ಕಪ್‌ನಲ್ಲಿ ಸಂಗ್ರಹವಾಗುತ್ತದೆ. 12 ಗಂಟೆಗೊಂದು ಸಲದಂತೆ ದಿನಕ್ಕೆ ಎರಡು ಬಾರಿ ತೊಳೆದರೆ ಮತ್ತೆ ಪುನರ್‌ಬಳಕೆ ಮಾಡಬಹುದು. ಇದರಂತೆ ಒಂದು ಕಪ್‌ ಅನ್ನು ಸುಮಾರು ಹತ್ತು ವರ್ಷಗಳ ಕಾಲ ಬಳಸಬಹುದು. ಈ ಕಪ್‌ನಲ್ಲಿ ಸ್ಮಾಲ್‌, ಮೀಡಿಯಂ ಮತ್ತು ಲಾರ್ಜ್‌ ಅಳತೆಯ ಕಪ್‌ ಗಳನ್ನು ನಾವು ಕಾಣಬಹುದು. 180 ರೂ.ನಿಂದ 4,000 ರೂ.ವರೆಗೂ ಸಿಗುತ್ತವೆ. ಉತ್ತಮ ಗುಣಮಟ್ಟದ ಕಪ್‌ ಬಳಸುವುದರಿಂದ ಪೀರಿಯಡ್ಸ್‌ ಆಗಿರುವುದು ಭಾಸವಾಗುವುದಿಲ್ಲ. ಜತೆಗೆ ಬೀಚ್‌ ಹಾಗೂ ನೀರಿನ ಪ್ರದೇಶಗಳಲ್ಲಿಯೂ ಬಳಕೆ ಮಾಡಬಹುದು ಎಂದು ಮುಟ್ಟಿನ ಕಪ್‌ ತಯಾರಿಕಾ ಸಂಸ್ಥೆಯ ಸಂಸ್ಥಾಪಕಿ ದಿವ್ಯಾ ತಿಳಿಸುತ್ತಾರೆ.

Advertisement

ಉಪಯೋಗಗಳು: ನೈರ್ಮಲ್ಯ, ಪರಿಸರ ಸ್ನೇಹಿ, ಶೂನ್ಯ ತ್ಯಾಜ್ಯ, 10 ವರ್ಷಗಳ ಕಾಲ ಮರುಬಳಕೆ, ವ್ಯಾಯಾಮ ಮತ್ತು ಈಜುವಾಗಲೂ ಧರಿಸಬಹುದು, ಅಲರ್ಜಿ ಮುಕ್ತ, ವೆಜಿನಾದಲ್ಲಿನ ಪಿಎಚ್‌ ಅಂಶದ ಸಮತೋಲನವನ್ನು ಕಾಪಾಡುತ್ತದೆ.

ನಾನು ಮೂರು ವರ್ಷಗಳಿಂದ ಮುಟ್ಟಿನ ಕಪ್‌ ಬಳಸುತ್ತಿದ್ದು, ತುಂಬಾ ಉಪಯುಕ್ತವಾಗಿದೆ.  ಮೊದಲು ಪ್ಯಾಡ್‌ ಬಳಸುತ್ತಿರುವಾಗ ಬದಲಾಯಿಸಲು 15ರಿಂದ 20 ನಿಮಿಷ ಹೆಚ್ಚು ಕಡಿಮೆಯಾದರೂ, ಎಲ್ಲಿ ಲೀಕ್‌ ಆಗಿದೆ ಎಂದು ಕಿರಿಕಿರಿ ಆಗುತ್ತಿತ್ತು. ನಿದ್ದೆಯಲ್ಲಿ ಪದೇ ಪದೆ ಎಚ್ಚರಗೊಂಡು ಬಟ್ಟೆಗೆ ತಗುಲಿದೆಯಾ ಎಂದು ನೋಡಿಕೊಳ್ಳಬೇಕಿತ್ತು. ಆದರೆ, ಕಪ್‌ ಬಳಸಲು ಪ್ರಾರಂಭಿಸಿದಾಗಿನಿಂದಲೂ ಪಿರಿಯಡ್ಸ್‌ ಆಗಿರುವುದೇ ಗೊತ್ತಾಗುವುದಿಲ್ಲ. ಸವಿತಾ

ಪೊಲೀಸ್‌ ಸಿಬ್ಬಂದಿಗೆ ನಿಗದಿತ ಸಮಯ ಇರುವುದಿಲ್ಲ. ಟ್ರಾಫಿಕ್‌ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಪೀರಿಯಡ್ಸ್‌ ಆದರೆ ಕಷ್ಟವಾಗುತ್ತದೆ. ಆದರೆ ಕಪ್‌ ಬಳಸುವುದರಿಂದ ಕಿರಿಕಿರಿ ಇರುವುದಿಲ್ಲ. 8ರಿಂದ 10 ಗಂಟೆಗಳ ವರೆಗೆ ಸಲೀಸಾಗಿ ಬಳಸಬಹುದು. ಎರಡು ವರ್ಷಗಳಿಂದ ಉಪಯೋಗಿಸಲಾಗಿದ್ದು, ಯಾವುದೇ ರೀತಿಯ ರ್ಯಾಶಸ್‌, ಹೊಟ್ಟೆ ನೋವು, ದುರ್ವಾಸನೆ ಇಲ್ಲ. ಅನಿತಾ, ಪಿಎಸ್‌

ಒಮ್ಮೊಮ್ಮೆ ಕಚೇರಿಗಳಲ್ಲಿ ಡಸ್ಟ್‌ಬಿನ್‌ಗಳೇ ಸರಿಯಾಗಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಹಾಕಲಾಗು ವುದಿಲ್ಲ. ಆದರೆ, ಕಪ್‌ ಬಳಸಲು ಆರಂಭಿಸಿದಾಗಿನಿಂದ ತೊಂದರೆ ಆಗಿಲ್ಲ. ಆರಾಮಾಗಿ ಕಚೇರಿಗೆ ಹೋಗಿಬಂದು ಮನೆಯಲ್ಲಿ ಸ್ವತ್ಛಗೊಳಿಸುತ್ತೇನೆ. ವಿದ್ಯಾ

ಭಾರತಿ ಸಜ್ಜನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next