ಎಚ್.ಡಿ.ಕೋಟೆ: ಮಹಿಳೆಗೆ ಗೌರವ ನೀಡದ ಯಾವ ದೇಶವಾಗಲಿ ಸಮಾಜವಾಗಲಿ ಉದ್ಧಾರ ಆಗಲ್ಲ, ಮಹಿಳೆಯರ ಹಕ್ಕುಗಳ ರಕ್ಷಣೆಗೆ ಪುರುಷರು ಕೈಜೋಡಿಸಿದರೆ ಸಮಾನ ಹಕ್ಕಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಪಟ್ಟಣ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಸರ್ಪರಾಜ್ ಹುಸೇನ್ ಕಿತ್ತೂರು ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಇಂದಿನ ಪುರುಷ ಸಮಾಜದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ತನ್ನ ಕುಟುಂಬದ ಜವಾಬ್ದಾರಿಯನ್ನು ನಿಬಾಯಿಸುವುದರ ಜೊತೆಗೆ ದೇಶದ ಪ್ರಧಾನಿಯಂತಹ ಅನೇಕ ದೊಡ್ಡ ಹುದ್ದೆಗಳನ್ನು ಪುರುಷನಿಗೆ ಸಮಾನವಾಗಿ ನಿರ್ವಹಣೆ ಮಾಡುವ ಮೂಲಕ ಇಂದು ಎಲ್ಲ ರಂಗದಲ್ಲೂ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನುಡಿದರು.
ದೌರ್ಜನ್ಯ ತಡೆಗಟ್ಟಿ: ಇಂದಿಗೂ ಕುಟುಂಬದ ಮತ್ತು ದುಡಿಯುವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ, ಆಸ್ತಿಯ ಹಕ್ಕು ವಂಚನೆ ನಡೆಯುತ್ತಿದ್ದು, ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಾದರೆ ಹಾಗೂ ಮಹಿಳೆ ತನ್ನ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಅವಶ್ಯ ಎಂದರು. ಕಾರ್ಯಕ್ರಮದಲ್ಲಿ ವಿಶೇಷ ಚೇತನರಾದ ಸರಗೂರು ದೇವರಾಜ್ ಪ್ರಾರ್ಥಿಸಿ, ಮಹದೇವಸ್ವಾಮಿ ಸ್ವಾಗತಿಸಿ, ಶಿಕ್ಷಣ ಇಲಾಖೆಯ ಬಿಆರ್‌ಪಿ ಮಹದೇವಯ್ಯ ನಿರೂಪಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಚಂದ್ರಶೇಖರ್, ವಕೀಲರಾದ ಶ್ರೀಮತಿ ಶಾಚಿತಾ, ಸರಸ್ವತಿ, ಉಮೇಶ್, ಕೃಷ್ಣಯ್ಯ, ಕೀರಣ್, ಸೋಮೇಶ್, ರಮೇಶ್, ಮಂಜುನಾಥ್, ತಹಶೀಲ್ದಾರ್ ಕೆ.ಕೃಷ್ಣ, ತಾಪಂ ಇಒ ಶ್ರೀಕಂಠೇರಾಜ್ ಅರಸ್, ಉಪತಹಶೀಲ್ದಾರ್ ಆನಚಿದ್, ಬಿಇಒ ಸುಂದರ್, ಸಿಡಿಪಿಓ ಶೇಷಾದ್ರಿ, ಸೇರಿದಂತೆ ಅಂಗನವಾಡಿ ಕಾರ್ಯ ಕರ್ತೆಯರು ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಇದ್ದರು.