ಹೊಸದಿಲ್ಲಿ : ಭಾರತೀಯ ದಂಡ ಸಂಹಿತೆಯ ಅತ್ಯಾಚಾರಕ್ಕೆ ಸಂಬಂಧಿಸಿದ ಸೆ.375 ಮತ್ತು ಸೆ.376 ಮಹಿಳೆಯರ ಪಕ್ಷಪಾತಿಯಾಗಿದೆ ಮತ್ತು ಮಹಿಳೆಯರು ಪುರುಷರ ಮೇಲೆ ನಡೆಸಬಹುದಾದ ಅತ್ಯಾಚಾರವನ್ನು ಒಳಗೊಳ್ಳುವುದಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದಿಲ್ಲಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದೆ.
ದಿಲ್ಲಿ ಹೈಕೋರ್ಟಿನ ಪ್ರಭಾರ ಮುಖ್ಯ ನ್ಯಾಯಾಧೀಶೆಯಾಗಿರುವ ಗೀತಾ ಮಿತ್ತಲ್ ಮತ್ತು ಜಸ್ಟಿಸ್ ಸಿ ಹರಿ ಶಂಕರ್ ಅವರನ್ನು ಒಳಗೊಂಡ ಪೀಠವು ಈ ಪಿಐಎಲ್ ಗೆ ಸಂಬಂಧಿಸಿ ಕೇಂದ್ರ ಸರಕಾರದ ಉತ್ತರಕ್ಕಾಗಿ ನೊಟೀಸ್ ಜಾರಿ ಮಾಡಿದೆ.
‘ಪುರುಷರ ಮೇಲೆ ಮಹಿಳೆಯರೂ ರೇಪ್ ಎಸಗಬಹುದು’ ಎಂದು ವಾದಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವ ಸಂಜೀವ್ ಕುಮಾರ್ , ಐಪಿಸಿಯ ಸೆ.375 ಮತ್ತು 376 ಮಹಿಳೆಯರನ್ನು ರೇಪ್ ಸಂತ್ರಸ್ತರನ್ನಾಗಿ ಮಾತ್ರವೇ ಕಾಣುತ್ತದೆ ವಿನಾ ಪುರುಷರನ್ನು ರೇಪ್ ಸಂತ್ರಸ್ತರನ್ನಾಗಿ ಕಾಣುವುದಿಲ್ಲ; ಆದುದರಿಂದ ಈ ಸೆಕ್ಷನ್‌ಗಳು ಮಹಿಳಾ ಪಕ್ಷಪಾತಿಯಾಗಿವೆ ಎಂದು ವಾದಿಸಿದ್ದಾರೆ.
”ಲೈಂಗಿಕ ಹಿಂಸೆ ಹೇಗೆ ಮತ್ತು ಏಕೆ ನಡೆಯುತ್ತದೆ ಎಂಬುದನ್ನು ತಿಳಿಯುವುದು ಲಿಂಗ ಕೇಂದ್ರೀಕೃತವಾಗಿದೆ. ಐಪಿಸಿ ಸೆ.375 ಮತ್ತು 376 ಪುರುಷರನ್ನು ಅತ್ಯಾಚಾರಿಗಳನ್ನಾಗಿಯೂ ಮಹಿಳೆಯರನ್ನು ಅತ್ಯಾಚಾರ ಸಂತ್ರಸ್ತೆಯರನ್ನಾಗಿಯೂ ಕಾಣತ್ತದೆ ವಿನಾ ಪುರುಷರನ್ನು ಅತ್ಯಾಚಾರ ಸಂತ್ರಸ್ತರನ್ನಾಗಿ ಕಾಣವುದಿಲ್ಲ; ಇದರಿಂದಾಗಿ ಕಾನೂನಿನ ಪ್ರಕಾರವೇ ಲಿಂಗ ಅಸಮಾನತೆಯನ್ನು ಪೋಷಿಸಿದಂಗಾತ್ತದೆ” ಎಂದು ಅರ್ಜಿದಾರ ಸಂಜೀವ್ ಕುಮಾರ್ ತಮ್ಮ ಪಿಐಎಲ್‌ನಲ್ಲಿ ವಾದಿಸಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
‘ಸಂವಿಧಾನದಡಿಯ ಸಮಾನತೆಯ ಹಕ್ಕು (14ನೇ ವಿಧಿ) ಮತ್ತು ಲಿಂಗಾಧಾರಿತ ತಾರತಮ್ಯ ನಿಷೇಧಿಸುವ (15ನೇ ವಿಧಿ) ಅವಕಾಶಗಳಿಗೆ ಐಪಿಸಿ ಸೆ.375 ಮತ್ತು ಸೆ.376 ವಿರುದ್ಧವಾಗಿದೆ’ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ಈ ಪಿಐಎಲ್‌ನ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಅ.23ರಂದು ಕೈಗೆತ್ತಿಕೊಳ್ಳಲಿದೆ.