ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹನೀಯರ ಜನ್ಮದಿನ, ಜಯಂತಿಗಳಿಗೆಲ್ಲ ಸರ್ಕಾರಿ ರಜೆ ಘೋಷಿಸಿ ರುಚಿ ಹತ್ತಿಸಿ ಬಿಟ್ಟಿದ್ದಾರೆ. ಯಾರಾದರು ಮಹನೀಯರು ಹುಟ್ಟಲಿ ಅಥವಾ ಸಾಯಲಿ ಎಂದು ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ(ಚಂಪಾ) ಕಳವಳ ವ್ಯಕ್ತಪಡಿಸಿದರು.
ಕುವೆಂಪು ಅವರ 114ನೇ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಸಂಘರ್ಷ ಸಮಿತಿ ಮಂಗಳವಾರ ಕಸಾಪ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ “ಅನಿಕೇತನ ಪ್ರಶಸ್ತಿ’ ಹಾಗೂ “ಕುವೆಂಪು ಯುವಕವಿ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಜನ್ಮದಿನವನ್ನು ವಿಶ್ವಮಾನವ ದಿನವಾಗಿ ರಾಜ್ಯ ಸರ್ಕಾರ ಘೋಷಿಸಿರುವುದು ಅಭಿನಂದನಾರ್ಹ. ವಿಶೇಷವೆಂದರೆ ಕುವೆಂಪು ಅವರ ಜನ್ಮದಿನದಂದು ಸರ್ಕಾರಿ ರಜೆ ಕೊಟ್ಟಿಲ್ಲ. ಬದಲಾಗಿ ಅವರ ಚಿಂತನೆ, ವಿಚಾರಧಾರೆಯನ್ನು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಮಾತನಾಡಿ, ವೈಚಾರಿಕತೆಯನ್ನು ಪರಂಪರೆ ಎಂದು ಬಿಂಬಿಸುವ ದೊಡ್ಡ ಗುಂಪೇ ಹುಟ್ಟಿಕೊಂಡಿದೆ. ಸಂಸ್ಕೃತಿಯ ಅರ್ಥತಿಳಿಸಲು ಹೋದವರ ತಲೆ ತೆಗೆಯಲು ಸಿದ್ಧವಾಗಿರುವ ಪರಂಪರೆ ಬೆಳೆಯುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷ ತಪ್ಪಿಸಲು ಕುವೆಂಪು ಸಾಹಿತ್ಯದ ವಿಚಾರಧಾರೆಗಳನ್ನು ಜನರಿಗೆ ತಲುಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಗುಡಿ, ಮಸೀದಿ, ಚರ್ಚ್‌ಗಳನ್ನು ಬಿಟ್ಟು ಹೊರಬನ್ನಿ ಎಂದಿದ್ದ ಕುವೆಂಪು ಅವರ ವಿಚಾರ ಇಂದಿಗೂ ಪ್ರಸ್ತುತವಾಗಿದೆ. ಹಿಂದೂ ಧರ್ಮದ ಅವೈಜ್ಞಾನಿಕತೆಯನ್ನು ಕುವೆಂಪು ಒಪ್ಪುತ್ತಿರಲಿಲ್ಲ. ಮಾನವೀಯತೆ ಮರೆತ ಕಾವ್ಯ, ನಾಟಕ, ಕಾದಂಬರಿಗಳು ನಮ್ಮ ಸಮಾಜಕ್ಕೆ ಅಗತ್ಯವಿಲ್ಲದ್ದು ಎಂಬುದು ಕುವೆಂಪುಗೆ ಸ್ಪಷ್ಟವಾಗಿತ್ತು. ಹೀಗಾಗಿಯೇ ಅವರು ಮಾನವೀಯತೆಯನ್ನು ಬೋಧಿಸುವ ಕಾವ್ಯದ ವಾರಸುದಾರರು ಎಂದು ಬಣ್ಣಿಸಿದರು.
ಸಾಹಿತಿ ಸಿ.ಎಚ್.ಜಾಕೋಬ್ ಲೋಬೋರಿಗೆ ಅನಿಕೇತನ ಪ್ರಶಸ್ತಿ ಹಾಗೂ ಯುವ ಕವಿ ಎಚ್.ಲಕ್ಷ್ಮೀನಾರಾಯಣಸ್ವಾಮಿಗೆ ಕುವೆಂಪು ಯುವಕವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಸಾಪ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಸಾಹಿತಿ ಡಾ.ವಿಜಯಾ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ತರರು ಇದ್ದರು. ಸಮಾರಂಭದಲ್ಲಿ ಸಾಹಿತಿ ಸಿ.ಎಚ್.ಜಾಕೋಬ್ ಲೋಬೋರಿಗೆ ಅನಿಕೇತನ ಪ್ರಶಸ್ತಿ ಹಾಗೂ ಯುವ ಕವಿ ಎಚ್.ಲಕ್ಷ್ಮೀನಾರಾಯಣಸ್ವಾಮಿಗೆ ಕುವೆಂಪು ಯುವಕವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.