Advertisement

ಮನೆ ಮನದೊಳಗೂ ರಾಮನಾಮ ಸ್ಮರಣೆ

12:18 PM Apr 21, 2021 | Team Udayavani |

ನಕಾರಾತ್ಮಕತೆಯನ್ನು ತೊಡೆದು ಹಾಕಿ ಸಕಾರಾತ್ಮಕತೆಯನ್ನು ನಮ್ಮೊಳಗೆ ತುಂಬಿಕೊಳ್ಳಲು ರಾಮ ನವಮಿ ಒಂದು ವಿಶೇಷ ಪರ್ವ. ಈ ಬಾರಿ ಎ. 21ರಂದು ಆಚರಿಸಲಾಗುತ್ತದೆ. ಯುಗಾದಿಯ ಅನಂತರ ಬರುವ ಮೊದಲ ಹಬ್ಬ ರಾಮನವಮಿ. ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಅಂದರೆ ಯುಗಾದಿಯ 9ನೇ ದಿನ ಮಹಾವಿಷ್ಣುವಿನ ಏಳನೇ ಅವತಾರವೆಂದೇ ಕರೆಯಲ್ಪಡುವ ರಾಮಚಂದ್ರನ ಜನ್ಮದಿನ ಹಾಗೂ ರಾಮ, ಸೀತೆಯರ ವಿವಾಹದ ದಿನವನ್ನು ಆಚರಿಸಲಾಗುತ್ತದೆ.

Advertisement

ಸೂರ್ಯನನ್ನು ರಾಮನ ಪೂರ್ವಜ ಎನ್ನಲಾಗುತ್ತದೆ. ಹೀಗಾಗಿ ಶಕ್ತಿಯ ಸಂಕೇತವಾಗಿರುವ ಸೂರ್ಯನ ಪ್ರಾರ್ಥನೆಯೊಂದಿಗೆ ರಾಮನವಮಿಗೆ ಚಾಲನೆ ನೀಡಲಾಗುತ್ತದೆ. ಕೆಲವರು ಉಪವಾಸ, ನದಿ ಸ್ನಾನ, ದೇವರ ದರ್ಶನ ಪಡೆದು ರಾಮ ನವಮಿಯನ್ನು ಆಚರಿಸುತ್ತಾರೆ. ವಿವಿಧೆಡೆ ರಾಮಲೀಲೆಯ ಪ್ರದರ್ಶನಗಳು ನಡೆಯುತ್ತವೆ. ರಾಮಾಯಣದ ದಿನಗಳನ್ನು ನೆನಪಿಸುವ ಸಲುವಾಗಿ ಹೂಗಳಿಂದ ಶೃಂಗರಿಸಲ್ಪಟ್ಟ ರಥದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತನ ಮೂರ್ತಿಗಳನ್ನಿಟ್ಟು ಯಾತ್ರೆ ನಡೆಸುವುದು ವಿಶೇಷ. ದೇವಸ್ಥಾನಗಳಲ್ಲಿ ರಾಮಾಯಣ ಪಾರಾಯಣ, ರಾಮನ ಕಥಾ ವಾಚನಗೋಷ್ಠಿಗಳು ನಡೆಯುತ್ತವೆ. ಕೆಲವರು ಮನೆಯಲ್ಲಿ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಶಿಶು ರಾಮನ ಪ್ರತಿಮೆಗೆ ಅಭಿಷೇಕ ಮಾಡಿ, ವಸ್ತ್ರ ತೊಡಿಸಿ, ತೊಟ್ಟಿಲಲ್ಲಿಟ್ಟು ಪೂಜಿಸುತ್ತಾರೆ.

ಉತ್ತರ ಭಾರತದಲ್ಲಿ ಅದರಲ್ಲೂ ರಾಮ ಜನ್ಮ ಭೂಮಿಯಾದ ಅಯೋಧ್ಯಾ ನಗರಿಯಲ್ಲಿ ರಾಮ ನವಮಿಯನ್ನು ಆಚರಿಸುವುದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಈ ದಿನ ಎಲ್ಲರೂ ಮನೆಯನ್ನು ಶುಚಿಗೊಳಿಸಿ, ರಾಮನ ವಿಗ್ರಹ ಅಥವಾ ಚಿತ್ರಪಟವನ್ನು ಪೂಜೆಗಿರಿಸುತ್ತಾರೆ. ಬೆಳಗ್ಗೆಯಿಂದಲೇ ಆರತಿ, ಭಜನೆ, ಮಂಗಳವಾದ್ಯಗಳ ಝೇಂಕಾರ, ರಾಮ ಕಥಾ ಪಾರಾಯಣ ನಡೆಯುತ್ತದೆ. ಬಹುತೇಕ ಮಂದಿ ದೇವಸ್ಥಾನಕ್ಕೆ ಹೋಗಿ ರಾಮನ ದರ್ಶನ ಪಡೆಯುತ್ತಾರೆ. ಅನೇಕ ಕಡೆ ರಥಯಾತ್ರೆ, ಶೋಭಾಯಾತ್ರೆಗಳು ಪತ್ನಿ ಸೀತಾದೇವಿ ಹಾಗೂ ತಮ್ಮ ಲಕ್ಷ್ಮಣನ ಪಲ್ಲಕ್ಕಿಗಳೊಂದಿಗೆ ನಡೆಯುತ್ತದೆ.

ರಾಮನಿಗೆ  ನೈವೇದ್ಯವಾಗಿ  ಸಜ್ಜಿಗೆ, ಹಣ್ಣಿನ ರಸಾಯನ, ಕೋಸಂಬರಿ, ಮಜ್ಜಿಗೆ, ನಿಂಬೆ ಹಣ್ಣು, ಖರಬೂಜ, ಬೇಲದ ಹಣ್ಣಿನ ಪಾನಕಗಳು ತಯಾರಾಗುತ್ತವೆ. ಹಲವೆಡೆ ಇದನ್ನೇ ಪ್ರಸಾದವಾಗಿ ಜನರಿಗೆ ವಿತರಿಸಲಾಗುತ್ತದೆ. ವೈಷ್ಣವರು ರಾಮ ನವಮಿಯಂದು ಉಪವಾಸ ಆಚರಿಸುತ್ತಾರೆ. ಕೇವಲ ಹಣ್ಣು ಸೇವನೆ ಮಾಡಿ ಈರುಳ್ಳಿ ಬೆಳ್ಳುಳ್ಳಿ ಸೇರಿಸಿ ಮಾಡಿದ ಯಾವುದೇ ಖಾದ್ಯವನ್ನು ಸ್ವೀಕರಿಸುವುದಿಲ್ಲ.

ರಾಮ ನವಮಿಯ ವಿವಿಧ ಆಚರಣೆಗಳನ್ನು ಉತ್ತರ ಪ್ರದೇಶದ ಆಯೋಧ್ಯೆ ಮತ್ತು ಸೀತಾ ಸಮಾಹಿತ್‌ ಸ್ಥಲ್‌, ಬಿಹಾರದ ಸೀತಮಾಹಿರ್‌, ನೇಪಾಳದ ಜನಕು³ಧರ್ಮ್, ತೆಲಂಗಾಣದ ಭದ್ರಾಚಲಂ, ಆಂಧ್ರಪ್ರದೇಶದ ಕೋದಂಡರಾಮ ದೇವಸ್ಥಾನ, ವೊಂಟಿಮಿಟ್ಟಾ ಮತ್ತು ತಮಿಳುನಾಡಿನ ರಾಮೇಶ್ವರಂನಲ್ಲಿ  ವೈಭವದ ರಥಯಾತ್ರೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ಕೆಲವೆಡೆ ರಾಮ ನವಮಿಯನ್ನು ಸೀತಾರಾಮ ಕಲ್ಯಾಣವನ್ನು ಮಾಡಿ ಆಚರಿಸುತ್ತಾರೆ.

Advertisement

ರಾಮ ನವಮಿಯ ಪ್ರಯುಕ್ತ ಬೆಂಗಳೂರಿನಲ್ಲಿ ರಾಮ ಸೇವಾ ಮಂಡಳಿಗಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಭಜನೆ, ಸಂಗೀತ ಸಂಜೆ, ಸಂಗೀತ ಕಛೇರಿಗಳು, ಭರತನಾಟ್ಯ ಕಾರ್ಯಕ್ರಮಗಳು ನಡೆಯುತ್ತವೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತದೆ.

ಇತ್ತೀಚೆಗೆ ಹೊರ ದೇಶಗಳಲ್ಲೂ ರಾಮ ನವಮಿಯ ಆಚರಣೆ ನಡೆಯುತ್ತದೆ. ಅನೇಕ ಕಡೆ ಪೂಜೆ, ಭಜನೆ ಕಾರ್ಯಕ್ರಮಗಳು ವಿವಿಧ ಸಂಘಟನೆಗಳ ಮೂಲಕ ಆಯೋಜಿಸಲಾಗುತ್ತದೆ.

ರಾಮನೆಂದರೆ ಸಾಕು ಮನವು ಭಕ್ತಿ ಲೋಕಕ್ಕೆ ಸಾಗಿಬಿಡುವುದು. ದೇಹ ಬುದ್ಧಿ ಎಲ್ಲವೂ ಒಂದು ರೀತಿಯ ಸಮ್ಮೊàಹಕ ಶಕ್ತಿಯನ್ನು ಪಡೆಯುವುದು. ಶ್ರೀಮನ್ನಾರಾಯಣನ ಅವತಾರ

ರೂಪದಲ್ಲಿ ಧರೆಗಿಳಿದು ದುಷ್ಟ ಶಿಕ್ಷಕನಾಗಿ ಶಿಷ್ಟ ರಕ್ಷಕನಾಗಿ, ಯುಗಯುಗಾಂತರಗಳಲ್ಲಿ ಜನರ ಮನದಲ್ಲಿ ನೆಲೆಯಾದ ಮರ್ಯಾದಾ ಪುರುಷೋತ್ತಮ, ಏಕಪತ್ನಿ ವ್ರತಸ್ಥನೆಂದೇ ಕರೆಯಲ್ಪಡುವ ಶ್ರೀರಾಮ.

ಸರ್ವಕಾಲಕ್ಕೂ ಆದರ್ಶಪ್ರಾಯ ಕೃತಿಯಾಗಿರುವ ರಾಮಾಯಣದಲ್ಲಿ ರಾಮನ ಸಂಪೂರ್ಣ ಬದುಕಿನ ಅನಾವರಣವಾಗಿದೆ. ಇಲ್ಲಿ ರಾಮ ದೇವರಾಗಿ ಅಲ್ಲ ಒಬ್ಬ ಸಾಮಾನ್ಯ ಮನುಷ್ಯನಾಗಿ ಎಷ್ಟೆಲ್ಲ ಸಂಕಷ್ಟಗಳನ್ನು ಎದುರಿಸುತ್ತಾನೆ ಎನ್ನುವುದನ್ನೇ ಹೇಳಲಾಗಿದೆ. ರಾಮನ ಬದುಕು ಒಬ್ಬ ಸಾಮಾನ್ಯನ ಬದುಕಿಗಿಂತ ವಿಭಿನ್ನವಲ್ಲ. ಪಿತೃವಾಕ್ಯ ಪರಿಪಾಲನೆಗಾಗಿ 14 ವರ್ಷ ವನವಾಸ, ರಾವಣನ ವಧೆ, ಪತ್ನಿಯ ಅಗಲಿಕೆ, ಮಕ್ಕಳಿಂದ ದೂರವಾಗಿ ಸಂಕಷ್ಟ ಅನುಭವಿಸಿದರೂ ರಾಮನ ಪ್ರತಿಯೊಂದು ನಡೆಯು ಆದರ್ಶಪ್ರಾಯವಾಗಿದೆ.

ನಮ್ಮ ಬದುಕಿನ ನಿತ್ಯದ ಸಮಸ್ಯೆಗಳನ್ನು ನಿರ್ಭಯದಿಂದ ಎದುರಿಸಿ, ಸತ್ಯ, ಧರ್ಮ, ನಿಷ್ಠೆಯಿಂದ ಬದುಕು ಕಟ್ಟಿಕೊಳ್ಳಬೇಕು. ಹಾಗಾದರೆ ಮಾತ್ರ ಬದುಕು ಸುಂದರವಾಗಿ ರೂಪುಗೊಳ್ಳಲು ಸಾಧ್ಯ ಎಂಬುದನ್ನು ತನ್ನ ಬದುಕಿನ ಮೂಲಕವೇ ತೋರಿಸಿ ಕೊಟ್ಟವನು ಶ್ರೀರಾಮನ ಆದರ್ಶಗಳನ್ನು ಪಾಲಿಸಿಕೊಂಡು ಮಾದರಿ ಬದುಕನ್ನು ನಮ್ಮದಾಗಿಸಿಕೊಳ್ಳೋಣ.

 

 

Advertisement

Udayavani is now on Telegram. Click here to join our channel and stay updated with the latest news.

Next