Advertisement

ಕೈ ಕೊಟ್ಟು ಕಮಲಕ್ಕೆ ಜೈ ಎಂದವರ ಸದಸ್ಯತ್ವ ರದ್ದು

03:00 PM May 12, 2022 | Team Udayavani |

ಕುಷ್ಟಗಿ: ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಪುರಸಭೆಯ ಇಬ್ಬರು ಸದಸ್ಯರ ಸದಸ್ಯತ್ವ ಪಕ್ಷಾಂತರ ಕಾಯ್ದೆ ಅಡಿ ಅನರ್ಹಗೊಂಡಿದೆ. 23 ಸದಸ್ಯ ಬಲದ ಕುಷ್ಟಗಿ ಪುರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ 12, ಬಿಜೆಪಿ 8 ಹಾಗೂ ಇಬ್ಬರು ಪಕ್ಷೇತರರು ಹಾಗೂ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರು.

Advertisement

ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವ ಅರ್ಹತೆ ಇದ್ದರೂ ಕಾಂಗ್ರೆಸ್‌ನ ಇಬ್ಬರು ಸದಸ್ಯರಾದ 17ನೇ ವಾರ್ಡ್‌ ಸದಸ್ಯ ವೀರೇಶಗೌಡ ಬೆದವಟ್ಟಿ ಹಾಗೂ 3ನೇ ವಾರ್ಡ್‌ ಸದಸ್ಯೆ ಗೀತಾ ತುರಕಾಣಿ ಬಿಜೆಪಿಯನ್ನು ಬೆಂಬಲಿಸಿದ್ದರು.

ಈ ಬೆಳವಣಿಗೆಯಿಂದ ಬಿಜೆಪಿ ತನ್ನ 8 ಜನ ಸದಸ್ಯರು, ಇಬ್ಬರು ಪಕ್ಷೇತರರು ಹಾಗೂ ಅವಿರೋಧ ಆಯ್ಕೆಯಾಗಿರುವ ಒಬ್ಬ ಸದಸ್ಯ ಸೇರಿದಂತೆ ಮೂವರು ಹಾಗೂ ಇಬ್ಬರು ಕಾಂಗ್ರೆಸ್‌ ಬೆಂಬಲಿತರೊಂದಿಗೆ 13 ಸದಸ್ಯ ಬಲದೊಂದಿಗೆ ಗಂಗಾಧರಸ್ವಾಮಿ ಹಿರೇಮಠ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ವೇಳೆ ಕಾಂಗ್ರೆಸ್‌ ಪಕ್ಷದ ವಿಪ್‌ ಉಲ್ಲಂಘಿಸಿ, ಸ್ವ ಪಕ್ಷೀಯರಿಗೆ ಮುಖಭಂಗ ಮಾಡಿದ್ದ ಪಕ್ಷಾಂತರಿ ಸದಸ್ಯರ ವಿರುದ್ಧ 6ನೇ ವಾರ್ಡ್‌ ಸದಸ್ಯ ರಾಮಣ್ಣ ಬಿನ್ನಾಳ ಅವರು, ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಈ ವಿಷಯವಾಗಿ ನಡೆದ ಸುದೀರ್ಘ‌ ವಿಚಾರಣೆ ಬಳಿಕ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ ಸುರಾಳ್ಕರ್‌ ಅವರು ಸದಸ್ಯರ ಸದಸ್ಯತ್ವದ ರದ್ದತಿಯ ಆದೇಶ ನೀಡಿದ್ದಾರೆ. ವೀರೇಗೌಡ ಬೆದವಟ್ಟಿ ಹಾಗೂ ಗೀತಾ ತುರಕಾಣಿ ಅವರ ಸದಸ್ಯತ್ವ ಅನರ್ಹಗೊಂಡಿದ್ದರಿಂದ ಸದ್ಯದ ಬಿಜೆಪಿ ಸದಸ್ಯ ಬಲ 11ಕ್ಕೆ ಕುಗ್ಗಿದಂತಾಗಿದೆ. ಹೀಗಾಗಿ ಕಾಂಗ್ರೆಸ್‌ ಸದಸ್ಯ ಬಲಕ್ಕಿಂತ ಬಿಜೆಪಿ 1 ಸ್ಥಾನದ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದು, ಸದ್ಯಕ್ಕೆ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರ ಸ್ಥಾನ ಅಬಾದೀತವಾಗಿದೆ.

Advertisement

ಬಿಜೆಪಿ ಬೆಂಬಲಿಸಿದ ಕಾಂಗ್ರೆಸ್‌ ಸದಸ್ಯರ ಸದಸ್ಯತ್ವ ಅನರ್ಹತೆಯ ಜಿಲ್ಲಾಧಿಕಾರಿ ಆದೇಶ ಏಕಪಕ್ಷೀಯವಾಗಿದೆ ಎನ್ನುವುದು ನನ್ನ ಅನಿಸಿಕೆ. ಈಗಾಗಲೇ ಈ ವಿಚಾರವಾಗಿ ಆದೇಶ ನೀಡಿದ್ದು, ನಮ್ಮ ಮುಂದಿನ ನಡೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ನಮಗೆ ಬೆಂಬಲಿಸಿದ ಇಬ್ಬರ ಸದಸ್ಯತ್ವಕ್ಕೆ ಧಕ್ಕೆ ಆಗದಂತೆ ನ್ಯಾಯಾಲಯದ ಮೂಲಕ ಹೋರಾಟ ಮಾಡಲಾಗುವುದು. -ಗಂಗಾಧರಸ್ವಾಮಿ ಹಿರೇಮಠ, ಅಧ್ಯಕ್ಷರು, ಪುರಸಭೆ ಕುಷ್ಟಗಿ

ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾಗಿ ಬಿಜೆಪಿ ಬೆಂಬಲಿಸಿದ ಇಬ್ಬರು ಸದಸ್ಯತ್ವ ಅನೂರ್ಜಿತಗೊಂಡಿರುವುದು ಪಕ್ಷಾಂತರ ಮಾಡುವವರಿಗೆ ಎಚ್ಚರಿಕೆ ಗಂಟೆಯಾಗಿದೆ. ಪಕ್ಷದಿಂದ ಬಿ ಫಾರ್ಮ್ ಪಡೆದು ಪಕ್ಷದ ಚಿಹ್ನೆಯಿಂದ ಚುನಾಯಿತರಾಗಿಯೂ ಪಕ್ಷದ ವಿರುದ್ಧ ನಡೆದುಕೊಳ್ಳುವವರಿಗೆ ತಕ್ಕ ಪಾಠವಾಗಿದೆ. ಇನ್ಮುಂದೆ ಯಾರೂ ಈ ರೀತಿ ಮಾಡಬಾರದು. -ದೇವೇಂದ್ರಪ್ಪ ಬಳೂಟಗಿ, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ

ಪಕ್ಷಾಂತರ ಮಾಡಿ ನಮ್ಮ ಪಕ್ಷವನ್ನು ಬೆಂಬಲಿಸಿದ ಇಬ್ಬರು ಸದಸ್ಯರ ವಿರುದ್ಧ ಜಿಲ್ಲಾಧಿಕಾರಿಗಳು ಅನರ್ಹ ಆದೇಶವನ್ನು ಹೈಕೋರ್ಟ್‌ ನಲ್ಲಿ ಪ್ರಶ್ನಿಸಲಾಗುವುದು. ಕಷ್ಟಕರ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷದ ಇಬ್ಬರು ಸದಸ್ಯರು ನಮ್ಮ ಪಕ್ಷವನ್ನು ಬೆಂಬಲಿಸಿ ಸಹಾಯ ಮಾಡಿದ್ದಾರೆ. ಅವರ ಸದಸ್ಯತ್ವಕ್ಕೆ ಚ್ಯುತಿ ಬರದಂತೆ ನ್ಯಾಯಲಯದಲ್ಲಿ ಹೋರಾಟ ನಡೆಸಲಾಗುವುದು. ನ್ಯಾಯಾಲಯದ ಮೇಲೆ ವಿಶ್ವಾಸವಿದೆ. –ಬಸವರಾಜ ಹಳ್ಳೂರು, ಅಧ್ಯಕ್ಷರು, ತಾಲೂಕು ಬಿಜೆಪಿ ಮಂಡಳ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next