ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ ಪ್ರೇಮಾ ತಿಳಿಸಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 20ವರ್ಷಗಳ ಸೇವೆ ಸಲ್ಲಿಸಿದ್ದವರಿಗೂ ಹಾಗೂಹೊಸದಾಗಿ ಸೇರ್ಪಡೆಯಾಗುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಒಂದೇ ರೀತಿಯಾದ ವೇತನ ನೀಡಲಾಗುತ್ತಿದೆ. ಈ ಪದ್ಧತಿಯನ್ನು ರದ್ದುಗೊಳಿಸಿ ಹಿರಿತನದ ಆಧಾರದ ಮೇಲೆ ಪ್ರತಿ ವರ್ಷ 500ರೂ. ವೇತನ ಹೆಚ್ಚಳಕ್ಕೆ ಮನವಿ ಮಾಡಿದ್ದು, ಇದಕ್ಕೆ ಸಕರಾತ್ಮಕ ಸ್ಪಂದನೆ ದೊರಕಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಅಂಗನವಾಡಿ ಕೇಂದ್ರಗಳ ಮೇಲುಸ್ತುವಾರಿಯ ಆದೇಶವನ್ನು ತಕ್ಷಣವೇ ಹಿಂಪಡೆಯುವುದು, ರಾಷ್ಟ್ರೀಯ ಶಿಕ್ಷಣ ಯೋಜನೆಯಡಿಯಲ್ಲಿ ಎಲ್‌ಕೆಜಿ, ಯುಕೆಜಿಗಳಿಗೆ ಅಂಗವಾಡಿ ಕಾರ್ಯಕರ್ತರನ್ನು ನಿಯೋಜಿಸುವ ಹಾಗೂ ನಿವೃತ್ತಿಯಾದ ಬಳಿಕ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಪಿಂಚಣಿ ನೀಡುವ ಬಗ್ಗೆಯೂ ಮನವಿ ಸಲ್ಲಿಸಿದ್ದು, ಈ ಬಗ್ಗೆ ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತಿದೆ ಎಂದರು.
ಇದನ್ನೂ ಓದಿ:ಅಪ್ಪನ ಮೇಲಿನ ಸಿಟ್ಟಿನಿಂದ ಮರವೇರಿದ ಯುವಕ : ಇಳಿಯಲಾಗದೆ ರಕ್ಷಣೆಗಾಗಿ ಅಪ್ಪನನ್ನೇ ಕರೆದ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮನವಿ ಸ್ವೀಕರಿಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಇದ್ದರು. ರಾಜ್ಯ ಗೌರವಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್., ಕಾರ್ಯದರ್ಶಿ ಉಮಾಮಣಿ, ಖಜಾಂಚಿ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲ ಬಿ.ಎಸ್., ಸಹ ಕಾರ್ಯದರ್ಶಿ ಶಾಂತಾ, ಸಲಹೆಗಾರ್ತಿ ಭಾರತಿ ಎನ್.ಪಿ. ಉಪಸ್ಥಿತರಿದ್ದರು.