Advertisement

ಆಡಳಿತಾಧಿಕಾರಿ ‘ಬಯಲಾಟ’ಕ್ಕೆ ಬೇಸತ್ತ ಸದಸ್ಯರು!

01:14 PM Apr 20, 2022 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರ್ಕಾರದ ಏಕೈಕ ಅಕಾಡೆಮಿ ಎಂಬ ಖ್ಯಾತಿ ಪಡೆದ ಕರ್ನಾಟಕ ಬಯಲಾಟ ಅಕಾಡೆಮಿ ಆಡಳಿತಾಧಿಕಾರಿ ಸರ್ವಾಧಿಕಾರಿ ಧೋರಣೆಗೆ ಅಕಾಡೆಮಿಯ ನಾಮನಿರ್ದೇಶಿತ ಸದಸ್ಯರು ಬೇಸರಗೊಂಡಿದ್ದು, ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಅಲಂಕರಿಸದೆ ಮೌನ ಪ್ರತಿಭಟನೆ ನಡೆಸಿದ್ದಾರೆ.

Advertisement

ನವನಗರದ ಡಾ|ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಇಡೀ ದಿನ ಬಯಲಾಟ ಅಕಾಡೆಮಿಯಿಂದ ವಿವಿಧ ಕಾರ್ಯಕ್ರಮ ನಡೆಸಲಾಯಿತು. ಸಂಜೆ 2020ನೇ ಸಾಲಿನ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಸಮಾರಂಭ ನಡೆದಿದ್ದು, ಇದಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಕೂಡ ಆಗಮಿಸಿದ್ದರು.

ಈ ಅಕಾಡೆಮಿಗೆ ಸರ್ಕಾರ ನೇಮಕ ಮಾಡಿದ ಸುಮಾರು 9 ಜನ ನಾಮ ನಿರ್ದೇಶಿತ ಸದಸ್ಯರಿದ್ದು, ಅವರೆಲ್ಲ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳದೆ ಆಡಳಿತಾಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮಂಗಳವಾರ ನಗರಕ್ಕೆ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನೀಲಕುಮಾರ ಅವರು ನಗರಕ್ಕೆ ಆಗಮಿಸಿದ್ದ ವೇಳೆ ಅಕಾಡೆಮಿಯ 9 ಜನ ಸದಸ್ಯರೂ ಆಡಳಿತಾಧಿಕಾರಿ ಹಾಗೂ ಅಕಾಡೆಮಿ ಕಚೇರಿಯ ಅಧಿಕಾರಿ-ಸಿಬ್ಬಂದಿ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿ ಲಿಖೀತ ದೂರು ಕೂಡ ಸಲ್ಲಿಸಿದರು.

ಅಕಾಡೆಮಿ ಸದಸ್ಯರು ಒಟ್ಟು ಆರು ಪ್ರಮುಖ ಅಂಶಗಳ ದೂರು ಸಲ್ಲಿಸಿದ್ದು, ಸೋಮವಾರ ನಡೆದ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಮ ನಿರ್ದೇಶಿತ ಸರ್ವ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಅತಿಥಿಗಳು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದಸ್ಯರ ಗಮನಕ್ಕೆ ತರದೆ ಸಿದ್ಧತೆ ಮಾಡಿಕೊಂಡಿದ್ದಾರೆ. ವಾರ್ಷಿಕ ಪ್ರಶಸ್ತಿಗೆ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆಯಾದ ಡಾ|ಗೋವಿಂದರಾಜು ಅವರನ್ನು ಸದಸ್ಯರ ಗಮನಕ್ಕೆ ತರದೆ, ಸಮಾರಂಭಕ್ಕೆ ಆಹ್ವಾನಿಸದೆ ಏಕಪಕ್ಷೀಯ ನಿರ್ಣಯ ಕೈಗೊಳ್ಳಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸ್ಥಳೀಯ ಸದಸ್ಯರನ್ನು ಸದಸ್ಯ ಸಂಚಾಲಕರನ್ನಾಗಿ ಮಾಡದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಲಾಗಿದೆ.

Advertisement

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸದಸ್ಯರನ್ನು ವೈಯಕ್ತಿಕವಾಗಿ ಆಹ್ವಾನಿಸದೆ, ಆಮಂತ್ರಿಸದೆ (ಕನಿಷ್ಟ ಫೋನ್‌ ಮೂಲಕ) ನಿರ್ಲಕ್ಷ್ಯ ಮಾಡಲಾಗಿದೆ. ಬಯಲಾಟ ಅಕಾಡೆಮಿ ಕಚೇರಿಯ ಸಿಬ್ಬಂದಿಗಳು, ಕಲಾವಿದರು-ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಅಕಾಡೆಮಿಯ ಆಡಳಿತಾಧಿಕಾರಿಗಳು ಎಲ್ಲ ಹಂತದಲ್ಲಿ ಏಕಪಕ್ಷೀಯ ಹಾಗೂ ಸರ್ವಾಧಿಕಾರಿ ತೋರುತ್ತಿದ್ದಾರೆ. ಇದು ಸದಸ್ಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷರ ನೇಮಕ ಮಾಡಿ: ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಮಾತ್ರ ಇದ್ದು, ಸಾಂಸ್ಕೃತಿಕ-ಪ್ರವಾಸಿ ತಾಣಗಳ ಮೂಲಕ ಗಮನ ಸೆಳೆಯುವ ಬಾಗಲಕೋಟೆಯಲ್ಲಿ ಕೇಂದ್ರ ಕಚೇರಿ ಹೊಂದಿದೆ. ಆದರೆ, ಈ ಅಕಾಡೆಮಿಗೆ ಮುಖ್ಯವಾಗಿ ಅಧ್ಯಕ್ಷರ ನೇಮಕ, ಕಾಯಂ ಅಧಿಕಾರಿ-ಸಿಬ್ಬಂದಿ ನೇಮಕ ಮಾಡಿಲ್ಲ. ಡಾ| ಸೊಲಕಣ್ಣನವರ ನಿಧನದ ಬಳಿಕ ಹೊಸ ಅಧ್ಯಕ್ಷರ ನೇಮಕ ಮಾಡಿಲ್ಲ. ಕೂಡಲೇ ಅಕಾಡೆಮಿಗೆ ಅಧ್ಯಕ್ಷರನ್ನು ನೇಮಿಸಿ, ರಾಜ್ಯಾ ದ್ಯಂತ ಅಕಾಡೆಮಿಯ ಕಾರ್ಯ ಚಟುವಟಿಕೆ ಕ್ರಿಯಾಶೀಲಗೊಳಿಸಬೇಕು ಎಂದೂ ಸದಸ್ಯರು ಒತ್ತಾಯಿಸಿದ್ದಾರೆ.

ಕಾರ್ಯಕ್ರಮದಲ್ಲೂ ಎಡವಟ್ಟು: ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಯಲಾಟದಲ್ಲಿ ಐದು ಪ್ರಕಾರಗಳಿದ್ದು, ಕನಿಷ್ಟ ಒಂದೆರಡು ಪ್ರಕಾರದ ಕಲೆಗಾದರೂ ಅವಕಾಶ ಕೊಡಬೇಕಿತ್ತು. ಅದರ ಬದಲಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಸುವ, ಬಯಲಾಟ ಅಕಾಡೆಮಿಗೆ ಸಂಬಂಧಿಸದ ಕೆಲ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂಬ ಅಸಮಾಧಾನ ವ್ಯಕ್ತವಾಗಿದೆ.

ಕರ್ನಾಟಕ ಬಯಲಾಟ ಅಕಾಡೆಮಿಗೆ ಅಧ್ಯಕ್ಷರ ಹಾಗೂ ಸಿಬ್ಬಂದಿ ನೇಮಕ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಆಡಳಿತಾಧಿಕಾರಿಗಳ ಕುರಿತು ಸದಸ್ಯರು ಸಲ್ಲಿಸಿದ ದೂರಿನ ಕುರಿತು ಮಾಹಿತಿ ಪಡೆದು, ಸೂಕ್ತ ನಿರ್ದೇಶನ ನೀಡಲಾಗುವುದು.

ವಿ. ಸುನೀಲಕುಮಾರ, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ                    

„ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next