Advertisement

ಅಧಿಕಾರಿಗಳ ವಿರುದ್ಧ ಸದಸ್ಯರು ಕಿಡಿ

02:38 PM Jun 21, 2018 | Team Udayavani |

ಚಳ್ಳಕೆರೆ: ಅಧಿಕಾರಿಗಳು ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳಿಗೆ ಬೆಲೆ ನೀಡುತ್ತಿಲ್ಲ ಎಂದು ತಾಪಂ ಸದಸ್ಯರು ಕೆಲ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ಸಾಮಾನ್ಯ ಸಭೆಯಲ್ಲಿ ನಡೆಯಿತು.ಬುಧವಾರ ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಅಧ್ಯಕ್ಷೆ ಕೆ. ಕವಿತಾ ರಾಮಣ್ಣ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. 

Advertisement

ಪ್ರಾರಂಭದಲ್ಲಿ ಇಲಾಖೆ ಪ್ರಗತಿ ವರದಿ ಮಾಹಿತಿ ನೀಡಿದ ಕೃಷಿ ಅಧಿಕಾರಿ ಎನ್‌. ಮಾರುತಿ, ತಾಲೂಕಿನಾದ್ಯಂತ
ಕಳೆದ ತಿಂಗಳು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಮಳೆ ಬಂದಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈಗಾಗಲೇ ತಾಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಅಂದಾಜು 5 ಸಾವಿರ ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವಂತೆ ಬಿತ್ತನೆ ಬೀಜ, ಗೊಬ್ಬರ ಹಾಗೂ ರೋಗ ನಿರೋಧಕ ಕ್ರಿಮಿನಾಶಕಗಳನ್ನು ದಾಸ್ತಾನು ಮಾಡಲಾಗಿದೆ. ತಾಲೂಕಿನೆಲ್ಲೆಡೆ ಕೃಷಿ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈ ವೇಳೆ ತಾಪಂ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಸಣ್ಣ ಸೂರಯ್ಯ, ಜಿ. ವೀರೇಶ್‌, ಎಚ್‌. ಸಮರ್ಥರಾಯ,
ಎಚ್‌. ಆಂಜನೇಯ, ರಾಮರೆಡ್ಡಿ, ತಿಪ್ಪಾರೆಡ್ಡಿ, ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ನವೀನ್‌ ಮುಂತಾದವರು
ಆಕ್ಷೇಪ ವ್ಯಕ್ತಪಡಿಸಿ, ಕೃಷಿ ಅಧಿಕಾರಿಗಳು ತಾಲೂಕಿನಲ್ಲಿ ಇಲಾಖೆ ವತಿಯಿಂದ ನಡೆಯುವ ಯಾವುದೇ
ಕಾರ್ಯಕ್ರಮಗಳ ಮಾಹಿತಿಯನ್ನು ಸಂಬಂಧಪಟ್ಟ ತಾಪಂ ಸದಸ್ಯರ ಗಮನಕ್ಕೆ ತಾರದೆ ನಿರ್ಲಕ್ಷಿಸುತ್ತಿದ್ದಾರೆಂದು
ಆರೋಪಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಮಾಹಿತಿ ನೀಡಿ, ತಾಲೂಕಿನಲ್ಲಿ ಕೆಲವೇ
ಕೆಲವು ಗ್ರಾಮಗಳನ್ನು ಹೊರತು ಪಡಿಸಿ ಎಲ್ಲೆಡೆ ಉತ್ತಮ ಕುಡಿಯುವ ನೀರಿನ ಸೌಕರ್ಯವಿದೆ. ಕೊರತೆ ಇರುವ
ಕಡೆ ಹೆಚ್ಚುವರಿಯಾಗಿ ಬೋರ್‌ ತೆಗೆಸಿ ನೀರು ನೀಡುವ ಪ್ರಯತ್ನ ಮುಂದುವರಿದಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ 70ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕ ಕಾಯಾರಂಭ ಮಾಡಲಾಗಿದೆ ಎಂದು ಸಭೆಯಲ್ಲಿ ಹೇಳುತ್ತಿದ್ದೀರಿ. ಆದರೆ ಬಹುತೇಕ ಕಡೆ ಕೆಟ್ಟು ಹೋಗಿ ಆರು ತಿಂಗಳಾದರೂ ರಿಪೇರಿ ಮಾಡಿಲ್ಲವೆಂದು ಬಹುತೇಕ ಎಲ್ಲಾ ಸದಸ್ಯರು ಆರೋಪಿಸಿದರು.

Advertisement

ಇದಕ್ಕೆ ಧ್ವನಿಗೂಡಿಸಿದ ತಾಪಂ ಸದಸ್ಯ ನವೀನ್‌, ಮೀರಸಾಬಿಹಳ್ಳಿ, ರಂಗವ್ವನಹಳ್ಳಿ, ಕರೀಕರೆ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಆರು ತಿಂಗಳಾಗಿದೆ. ರಿಪೇರಿ ಮಾಡದೇ ಸುಳ್ಳು ಮಾಹಿತಿ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ನಂತರ ಎಲ್ಲ ನೀರಿನ ಘಟಕಗಳನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸಿ.ಕೆ. ಗಿರಿಜಾಂಬ ಮಾಹಿತಿ ನೀಡಿ, ತಾಲೂಕಿನ ಅಂಗನವಾಡಿ
ಶಿಕ್ಷಕಿಯರಿಗೆ ಮತ್ತು ಸಹಾಯಕಿಯರಿಗೆ 6.13 ಲಕ್ಷ ವೇತನ ಬಟವಡೆ ಮಾಡಲಾಗುತ್ತಿದೆ ಎಂದರು.

ಮಾತೃಪೂರ್ಣ ಯೋಜನೆ ಶೇ.93ರಷ್ಟು ಪ್ರಗತಿಯಲ್ಲಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಸದಸ್ಯರು ಪಾವಗಡ
ರಸ್ತೆಯಲ್ಲಿ ಅಂಗನವಾಡಿಗೆ ಪೌಷ್ಟಿಕಾಂಶ ಆಹಾರ ವಿತರಣೆ ಮಾಡುವ ಆಹಾರ ಘಟಕದ ಬಗ್ಗೆ ಮಾಹಿತಿ ಕೇಳಿದರು.
ಇದಕ್ಕೆ ಸಮರ್ಪಕ ಉತ್ತರ ದೊರೆಯದೇ ಇದ್ದಾಗ ತನಿಖೆ ನಡೆಸುವಂತೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು
ಸದಸ್ಯರು ಆಗ್ರಹಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್‌.ವೆಂಕಟೇಶ್‌ ಮಾಹಿತಿ ನೀಡಿ, ಪ್ರಸ್ತುತ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ
ಉತ್ತಮವಾಗಿದೆ. ಎಲ್ಲಾ ಶಾಲೆಗಳಿಗೂ ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಣೆ ಮಾಡಲಾಗಿದೆ. 51 ಶಿಕ್ಷಕರ
ಹುದ್ದೆ ಖಾಲಿ ಇದ್ದು, ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಸದಸ್ಯ ಟಿ. ಗಿರಿಯಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮಟ್ಟ ಕುಸಿದಿದೆ. ಇದಕ್ಕೆ ಶಿಕ್ಷಕರ
ಬೇಜವಾಬ್ದಾರಿಯೇ ಕಾರಣ. ಹೈಸ್ಕೂಲ್‌ ಓದುವ ವಿದ್ಯಾರ್ಥಿಗಳಿಗೆ ಕಾಗುಣಿತ ಬರಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಇಂತಹ ಶಿಕ್ಷಕರ ಮೇಲೆ ಕಣ್ಣಿಡಬೇಕೆಂದರು.

ತಾಪಂ ಸದಸ್ಯೆ ಸುನಂದಮ್ಮ, ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ನಾನು ಮಾಹಿತಿ ಕೇಳಿದಕ್ಕೆ ನೀವ್ಯಾರು
ಕೇಳ್ಳೋಕೆ ಎಂದು ದಬಾಯಿಸುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕರನ್ನು
ಒತ್ತಾಯಿಸಿದರು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ,
ಜೂನ್‌ ತಿಂಗಳಾದ್ದರಿಂದ ವಿದ್ಯಾರ್ಥಿಗಳಿಗೆ ದಾಖಲಾತಿ ಪಡೆಯಲು ತೊಂದರೆಯಾಗುತ್ತದೆ. ವಾರಕ್ಕೆ ಕನಿಷ್ಠ ಪಕ್ಷ
ಮೂರು ದಿನವಾದರೂ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಬೇಕೆಂದು ತಹಶೀಲ್ದಾರ್‌ ಟಿ.ಸಿ.ಕಾಂತರಾಜ
ಅವರನ್ನು ಒತ್ತಾಯಿಸಿದರು.

ಉಪಾಧ್ಯಕ್ಷೆ ತಿಪ್ಪಮ್ಮ ಲಿಂಗಾರೆಡ್ಡಿ, ತಾಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಸಭೆಯಲ್ಲಿ
ಭಾಗವಹಿಸಿದ್ದರು. ಮಹಿಳಾ ಸದಸ್ಯರಾದ ಉಮಾ, ರಂಜಿತಾ, ಸುವರ್ಣಮ್ಮ, ವಿಜಯಲಕ್ಷ್ಮಿ, ರತ್ನಮ್ಮ,
ಶಿವಮ್ಮ, ತಿಪ್ಪಕ್ಕ, ಗಂಗೀಬಾಯಿ, ರೇಣುಕಮ್ಮ ಮತ್ತು ಸಾಕಮ್ಮ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ತಾಪಂ
ಕಾರ್ಯನಿರ್ವಹಣಾಧಿಕಾರಿ ಬಿ.ಎಲ್‌. ಈಶ್ವರಪ್ರಸಾದ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next