ಶೃಂಗೇರಿ : ಯಕ್ಷಗಾನದ ವಿವಿಧ ಪರಂಪರೆ ಮತ್ತು ಭಾಗವತಿಕೆಯನ್ನು ದಾಖಲಿಸುವ ಸಲುವಾಗಿ ನಿರಂತರ ಯಕ್ಷಗಾನದ ಹಿಮ್ಮೇಳ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್ ಬೇಗಾರ್ ಹೇಳಿದರು.
ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನೆಮ್ಮಾರಿನ ಹರೂರು ಗ್ರಾಮದ ಅಬ್ಬೀಗುಂಡಿಯಲ್ಲಿ ಬುಧವಾರ ಆಯೋಜಿಸಿದ್ದ “ಯಕ್ಷ ಮಧುರಮಯ್ಯ’ ಎಂಬ ಭಾಗವತಿಕೆ ರಸಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಕ್ಷಗಾನದ ರಸಪ್ರತಿಪಾದನೆಯಲ್ಲಿ ಮತ್ತು ಕಲೆಯ ಕಟ್ಟುವಿಕೆಯಲ್ಲಿ ಯಕ್ಷಗಾನ ಭಾಗತಿಕೆಯು ಕೇಂದ್ರಸ್ಥಾನದಲ್ಲಿದ್ದು, ಈ ಭಾಗವತಿಕೆಯ ಸೊಗಸನ್ನು ಬಿಂಬಿಸುವ ಪ್ರತ್ಯೇಕ ಕಾರ್ಯಕ್ರಮಗಳು ಯಕ್ಷಗಾನ ಕಲೆಗೆ ಮತ್ತು ಅದರ ಬೆಳವಣಿಗೆಗೆ ಪೂರಕವಾಗಿವೆ. ಗ್ರಾಮೀಣ ಪ್ರದೇಶದ ಕಡೆಗೆ ಕೊಂಡೊಯ್ಯುವುದು ಉದ್ದೇಶವಾಗಿದೆ. ಅತ್ಯಂತ ದುರ್ಗಮ ತಾಣವಾಗಿರುವ ಅಬ್ಬಿಗುಂಡಿಯಲ್ಲಿ ಗ್ರಾಮಸ್ಥರ ಉತ್ಸಾಹ ಮತ್ತು ಆಸಕ್ತಿಯನ್ನು ಗಮನದಲ್ಲಿರಿಸಿ ಪ್ರತೀ ವರ್ಷ ಇಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ್ಮಿ ನರಸಿಂಹ ಶಾಸ್ತ್ರಿ, ಕಲೆ ಮತ್ತು ಪ್ರಕೃತಿ ಅವಿನಾಭಾವ ಸಂಬಂಧವನ್ನು ಹೊಂದಿದೆ.
ಕಲೆಗೆ ಮೂಲ ನಿಸರ್ಗದ ಪ್ರಕ್ರಿಯೆಯಾಗಿದ್ದು ಇದೀಗ ನಿಸರ್ಗದ ಮಡಿಲಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಂಡೊಯ್ಯುವ ಈ ವಿನೂತನ ಪ್ರಯೋಗವು ಕಲೆಯ ಹೊಸತನದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು. ಭಾಗವತ ರಾಘವೇಂದ್ರ ಮಯ್ಯ ಅವರು ಉಪ್ಪೂರರು ಮತ್ತು ಕಾಳಿಂಗ ನಾವಡರ ಶೈಲಿಯ ಹಲವು ಪದ್ಯಗಳನ್ನು ಪ್ರಸ್ತುತಪಡಿಸಿದರು.
ಸಾಂಪ್ರದಾಯಿಕ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಅವರು ಉಪ್ಪೂರು ಘರಾಣೆ ಮಾದರಿಯ ಮೂಕಾಂಬಿಕ ಸ್ತುತಿಯನ್ನು ನೆರವೇರಿಸಿದರು. ಶುದ್ಧ ಸಾವೇರಿ ರಾಗದಲ್ಲಿ ಬಬ್ರುವಾಹನ ಕಾಳಗದ ಅಹುದೆ ಎನ್ನಯ ರಮಣ ಪದ್ಯವನ್ನು ಸಾಂಪ್ರದಾಯಿಕವಾಗಿ ಪ್ರಸ್ತುತಪಡಿಸಿದರು. ಇವರೇ ರಂಗಕ್ಕೆ ತಂದ ಶೃಂಗಾರ ಶಿವರಂಜಿನಿಯನ್ನು ಸಪ್ತಸ್ವರಗಳ ಏಳು ಮದ್ದಳೆಗಳೊಂದಿಗೆ ಪ್ರಸ್ತುತಪಡಿಸಿದರು. ಕರ್ಣ ಪರ್ವತ, ಮುಂಜಾನೆಯ ಏರು ಶೃತಿಯ ಸಾವೇರಿ ರಾಗದ ಪದ್ಯ ಹಾಡಿದರು. ರಾಕೇಶ್ ಮಲ್ಯ ಹಳ್ಳಾಡಿ ಚಂಡೆಯಲ್ಲೂ, ಶಶಿಕುಮಾರ ಆಚಾರ್ಯ ಮದ್ದಳೆಯಲ್ಲೂ ಸಹಕರಿಸಿದರು.