Advertisement

ಅಫ್ಘಾನಿಸ್ಥಾನದಿಂದ ಏರ್‌ಲಿಫ್ಟ್  ತಾಯ್ನಾಡಿಗೆ ಮರಳಿದ ಉಳ್ಳಾಲದ ಮೆಲ್ವಿನ್‌ 

12:52 AM Aug 19, 2021 | Team Udayavani |

ಉಳ್ಳಾಲ: ಅಫ್ಘಾನಿಸ್ಥಾನವು ತಾಲಿಬಾನ್‌ ವಶವಾಗುತ್ತಿದ್ದಂತೆ ಅಫ್ಘಾನ್‌ನಲ್ಲಿರುವ ಭಾರತೀಯರ ರಕ್ಷಣೆಗೆ ಭಾರತೀಯ ವಾಯುಸೇನೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಘ್ಘಾನ್‌ನಲ್ಲಿ ಸಿಲುಕಿಕೊಂಡ ಭಾರತೀಯರಲ್ಲಿ ಮಂಗಳೂರು ಮೂಲದ ಅನೇಕ ಮಂದಿ ಇದ್ದಾರೆ. ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಇವರನ್ನು ಆಯಾಯ ಕಂಪೆನಿಗಳು ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದೆ. ಕೆಲವು ಮಂದಿ ಕತಾರ್‌, ಲಂಡನ್‌, ನಾರ್ವೆ ಸೇರಿದಂತೆ ಬೇರೆ ಬೇರೆ ದೇಶಗಳಿಗೆಸ್ಥಳಾಂತರಗೊಂಡಿದ್ದಾರೆ.

Advertisement

ಕಾಬೂಲ್‌ನಿಂದ ಭಾರತೀಯ ವಾಯುಸೇನೆ ಏರ್‌ಲಿಫ್ಟ್‌ ಮಾಡಿದವರಲ್ಲಿ ಉಳ್ಳಾಲ ಉಳಿಯ ನಿವಾಸಿ ಮೆಲ್ವಿನ್‌ ಒಬ್ಬರಾಗಿದ್ದು, ಬುಧವಾರ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಅವರು ಕಾಬೂಲ್‌ನ ನ್ಯಾಟೋ ಪಡೆಯ ಮಿಲಿಟರಿ ಬೇಸ್‌ ಕ್ಯಾಂಪ್‌ನ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕಲ್‌ ಮೈಂಟೆನೆನ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಹೋದರ ಮಾತ್ರ ಅಫ್ಘಾನ್‌ನಲ್ಲೇ ಉಳಿದುಕೊಂಡಿದ್ದು ಭಾರತಕ್ಕೆ ಮರಳಲು ವಿಮಾನದ ನಿರೀಕ್ಷೆಯಲ್ಲಿದ್ದಾರೆ.

ಅಪಘಾನಿಸ್ಥಾನದ ಕಾಬೂಲ್‌ ತಾಲಿಬಾನ್‌ ವಶವಾಗುತ್ತಿದ್ದಂತೆ ಮಿಲಿಟರಿ ಬೇಸ್‌ ಕ್ಯಾಂಪ್‌ನಲ್ಲಿದ್ದ ವಿದೇಶಿಯರನ್ನು ಸ್ಥಳಾಂತರ  ಮಾಡುವ ಕಾರ್ಯ ಆರಂಭಗೊಂಡಿತ್ತು. ಏಕಾಏಕಿ ಸ್ಥಳೀಯ ಅಫ್ಘಾನ್‌ ನಿವಾಸಿಗಳು ದೇಶದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕಾಬೂಲ್‌ನಲ್ಲಿ ಇಳಿಯಬೇಕಾಗಿದ್ದ ವಿಮಾನಗಳು ಜನಸಂದಣಿಯಿಂದ ಇಳಿಯಲು ಸಾದ್ಯವಾಗದೆ ವಾಪಸ್‌ ಹೋಗುವ ಸ್ಥಿತಿ ನಿರ್ಮಾಣವಾಯಿತು. ಈ ನಡುವೆ ಭಾರತೀಯ ರಾಯಬಾರಿ ಕಚೇರಿಯಲ್ಲಿದ್ದ ಸಿಬಂದಿಗಳನ್ನು, ಸೆಕ್ಯುರಿಟಿ ತಂಡವನ್ನು ಕರೆತರಲು ಬಂದಿದ್ದ ವಾಯಸೇನೆಯ ಸಿ 17 ವಿಮಾನದಲ್ಲಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ 7 ಜನರ ಸಹಿತ ಒಟ್ಟು 160 ಮಂದಿಯನ್ನು ಮಂಗಳವಾರ ಬೆಳಗ್ಗೆ 5 ಗಂಟೆಗೆ ಕಾಬೂಲ್‌ನಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ  ವಾಯುಸೇನೆ ನೆಲೆಗೆ ಕರೆತಂದಿದ್ದು ಅಲ್ಲಿಂದ ದಿಲ್ಲಿ ಬಳಿಕ ಬೆಂಗಳೂರು ಮಾರ್ಗವಾಗಿ ಇಂದು ಉಳ್ಳಾಲದ ಸ್ವಗೃಹಕ್ಕೆ ಆಗಮಿಸಿದೆ ಎಂದು ಮೆಲ್ವಿನ್‌ ಉದಯವಾಣಿ ಪ್ರತಿನಿಧಿಗೆ ಮಾಹಿತಿ ನೀಡಿದರು.

ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರು ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಜನರನ್ನು ಸಂಸ್ಥೆ ನಾರ್ವೆ, ಲಂಡನ್‌, ಕತಾರ್‌ಗೆ ಸ್ಥಳಾಂತರ ಮಾಡಿದ್ದು ಅಲ್ಲಿ ಕೆಲವರನ್ನು ಕ್ವಾರಂಟೈನ್‌ನಲ್ಲಿ ಇಟ್ಟಿದ್ದು ಬಳಿಕ ಭಾರತಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದು ಮೆಲ್ವಿನ್‌ ತಿಳಿಸಿದರು.

ಸಹೋದರನ ನಿರೀಕ್ಷೆಯಲ್ಲಿ :

Advertisement

ಮೆಲ್ವಿನ್‌ ಸಹೋದರ ಡೆಮ್ಸಿ ಎಸಿ ಮೆಕ್ಯಾನಿಕ್‌ ಆಗಿದ್ದು ಕಾಬೂಲ್‌ನ ಮಿಲಿಟರಿ ಬೇಸ್‌ ಕ್ಯಾಂಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರೂ ಕಳೆದ ಎರಡು ದಿನಗಳಿಂದ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ. ಇಂಟರ್‌ನೆಟ್‌ ಅಲಭ್ಯದ ಕಾರಣ ಕೇವಲ ಸಂದೇಶ ಮಾತ್ರ ಮನೆಗೆ ಕಳುಹಿಸುತ್ತಿದ್ದು ಸುರಕ್ಷಿತರಾಗಿರುವ ಮಾಹಿತಿ ನೀಡಿದ್ದಾರೆ ಎನ್ನುತ್ತಾರೆ ಮೆಲ್ವಿನ್‌

ಮಿಲಿಟರಿ ಬೇಸ್ . 31 ವರೆಗೆ ಸುರಕ್ಷಿತ :

ಕಾಬೂಲ್‌ನಲ್ಲಿರುವ ಮಿಲಿಟರಿ ಬೇಸ್‌ ಆಗಸ್ಟ್‌ 31ರ ವರೆಗೆ ಸುರಕ್ಷಿತವಾಗಿದ್ದು ಅಲ್ಲಿಯವರೆಗೆ ತಾಲಿಬಾನ್‌ಗಳು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಬೇಸ್‌ ಖಾಲಿ ಮಾಡಲು ಆಗಸ್ಟ್‌ 31 ಗಡು ಆಗಿರುವ ಕಾರಣ ವಿದೇಶಿಯರು ತಮ್ಮ ತಮ್ಮ ದೇಶದಿಂದ ರಕ್ಷಣೆಗೆ ಆಗಮಿಸುವ ವಿಮಾನಗಳ ನಿರೀಕ್ಷೆಯಲ್ಲಿದ್ದಾರೆ. ಇನ್ನೆರಡು ದಿನಗಳಲ್ಲಿ ಕ್ಯಾಂಪ್‌ನಲ್ಲಿ ಆಹಾರದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಮೆಲ್ವಿನ್‌ ಹೇಳಿದ್ದಾರೆ.

ಮಿಲಿಟರಿ ಬೇಸ್‌ ಕ್ಯಾಂಪ್‌ನಲ್ಲಿ ಕೆಲಸ ಮಾಡುವ ಅಫ್ಘಾನಿಸ್ಥಾನದ ಸ್ಥಳೀಯರು ತಾಲಿಬಾನ್‌ಗೆ ಟಾರ್ಗೆಟ್‌ ಮಾಡುವ ಮೊದಲೇ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಹೊರಗೆ ಹೋಗಲು ಯತ್ನಿಸುತ್ತಿದ್ದಾರೆ. ಕೆಲವರು ದೇಶದಿಂದ ಹೊರಗೆ ಹೋಗಲು ವಿಮಾನ ನಿಲ್ದಾಣಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next