ಮಂಡ್ಯ: ಶೋಭಕೃತ್ ನಾಮ ಸಂವತ್ಸವರದ ವಿಶ್ವ ವಿಖ್ಯಾತ ಮೇಲುಕೋಟೆ ಚಲುವನಾಯಣಸ್ವಾಮಿಯ ವಜ್ರಖಚಿತ ವೈರಮುಡಿ ಉತ್ಸವ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಶನಿವಾರ ರಾತ್ರಿ ವೈಭವದಿಂದ ನೆರವೇರಿತು.
ದೇವಾಲಯದ ಸುತ್ತಲೂ ಕಿಕ್ಕಿರಿದು ತುಂಬಿದ್ದ ಭಕ್ತವೃಂದ ಚೆಲುವನಾರಾಯಣನ ವೈರಮುಡಿ ಉತ್ಸವ ಕಂಡೊಡನೆ ಗೋವಿಂದ ನಾಮ ಸ್ಮರಣೆಯ ಘೋಷಣೆ ಮೊಳಗಿಸುತ್ತಾ ವೈರಮುಡಿ ಉತ್ಸವದ ಚೆಲುವನ ದರ್ಶನ ಪಡೆದು ಪುನೀತರಾದರು.
ಜಿಲ್ಲಾ ಜಖಾನೆಯಂದ ಪೊಲೀಸ್ ಬಂದೋಬಸ್ತ್ನಲ್ಲಿ ಸಂಜೆ 6.30ರ ವೇಳೆಗೆ ಮೇಲುಕೋಟೆಗೆ ತಂದ ರಾಜಮುಡಿ-ವೈರಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಊರ ಹೊರಗಿನ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಪೂಜೆ ಮಾಡಿದ ನಂತರ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಯಿತು.
ತಿರುವಾಭರಣ ಪೆಟ್ಟಿಗೆಗಳಿಗೆ ಬೆಳಿಗ್ಗೆ 8 ಗಂಟೆಗೆ ಮಂಡ್ಯದ ಶ್ರೀಲಕ್ಷ್ಮಿ ಜನಾರ್ಧನಸ್ವಾಮಿ ಸನ್ನಿಧಿಯಲ್ಲಿ ಪ್ರಥಮ ಪೂಜೆಯಾದರೆ ಮೇಲುಕೋಟೆ ಯತಿರಾಜದಾಸರ್ ಗುರುಪೀಠದಿಂದ ಬದರೀನಾರಾಯಣಸ್ವಾಮಿ ಸನ್ನಿಧಿಯ ಮುಂಭಾಗ ಕೊನೆಯ ಪೂಜೆ ನೆರವೇರಿದ ನಂತರ ತಿರುವಾಭರಣ ಪೆಟ್ಟಿಗೆಗಳು ದೇವಾಲಯದ ತಲುಪಿತು.
ನಂತರ ವೈರಮುಡಿ ತಿರುವಾಭರಣ ಪೆಟ್ಟಿಗೆಯನ್ನು ತೆರೆಯದೆ ನೇರವಾಗಿ ಚೆಲುವನಾಯಣನ ಧಾರಣೆಗೆ ನೀಡಲಾಯಿತು. ನಂತರ ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ತೆರೆದು ಶಂಖ, ಚಕ್ರ, ಗದಾಂಗಿ ಪದ್ಮಪೀಠ, ಶಿರಚಕ್ರ, ಅಭಯಹಸ್ತ, ಕರ್ಣಾಭರಣ, ಗಂಡುಬೇರುಂಡ ಪದಕಗಳನ್ನು ಒಳಗೊಂಡ ೧೬ ಬಗೆಯ ಆಭರಣಗಳನ್ನು ಪರಿಶೀಲಿಸಿ ಉತ್ಸವದ ಅಲಂಕಾರಕ್ಕಾಗಿ ಎಲ್ಲ ಸ್ಥಾನೀಕರು ಅರ್ಚಕರಿಗೆ ಹಸ್ತಾಂತರ ಮಾಡಲಾಯಿತು.
ನಿತ್ಯಾರಾಧನೆ, ಯಾಗಶಾಲೆಯ ನಂತರ ಶ್ರೀದೇವಿ-ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಕಿರೀಟ ಧಾರಣೆ ಮಾಡಲಾಯಿತು. ರಾತ್ರಿ ೮ಕ್ಕೆ ಗರುಡದೇವನ ಮೆರವಣಿಗೆಯ ನಂತರ ಚೆಲುವನಾರಾಯಣಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಿ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.