ಮೇಲುಕೋಟೆ: ಇದೀಗ ಶಾಲೆಗಳು ಪ್ರಾರಂಭವಾಗುತ್ತಿದ್ದು, ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಶತಮಾನದ ಇತಿಹಾಸವಿರುವ ಮೇಲು ಕೋಟೆ ಸರ್ಕಾರಿ ಬಾಲಕರ ಶಾಲೆಯ ಪ್ರವೇಶ ಪ್ರಕಟಣೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಮೇ 16ರಂದು ಶಾಲೆ ಆರಂಭವಾಗುತ್ತಿರುವ ಆಂಗ್ಲ ಮತ್ತು ಕನ್ನಡ ಮಾಧ್ಯಮ ತರಗತಿಗಳಿಗೆ ಅರ್ಜಿಆಹ್ವಾನಿಸಲಾಗಿದೆ. ವಿಶೇಷವೆಂದರೆ ಕನ್ನಡ ಮಾಧ್ಯಮ ಒಂದನೇ ತರಗತಿ ಮಕ್ಕಳಿಗೆ ಬೆಳ್ಳಿ ನಾಣ್ಯ ಸೇರಿದಂತೆ ಹಲವು ಉಚಿತ ಕೊಡುಗೆಯನ್ನು ಶಾಲೆ ನೀಡುತ್ತಿದೆ.
ಇಬ್ಬರು ಸ್ವಯಂ ಶಿಕ್ಷಕರ ನೇಮಕ: ಸರ್ಕಾರನೀಡುವ ಸೌಲಭ್ಯಗಳ ಜತೆಗೆ ಎಲ್ಲಾ ಮಕ್ಕಳಿಗೆ ವರ್ಷಕ್ಕಾಗುವಷ್ಟು ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್, ಲೇಖನ ಸಾಮಗ್ರಿ, ಜಾಮಿಟ್ರಿ, ಐಡೆಂಟಿಟಿ ಕಾರ್ಡ್, ಬೆಲ್ಟ್ 5, 6, 7ನೇ ತರಗತಿ ಮಕ್ಕಳಿಗೆ ಉಚಿತ ಶೈಕ್ಷಣಿಕ ಪ್ರವಾಸ, ಸುತ್ತಮುತ್ತಲ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ ನೀಡಲಾಗುತ್ತಿದೆ. ಶಾಲೆಗೆ ಸರ್ಕಾರ ನಿಗದಿಪಡಿಸಿದ ನಾಲ್ವರು ಶಿಕ್ಷಕರಜತೆಗೆ ಇಬ್ಬರು ಸ್ವಯಂ ಶಿಕ್ಷಕರನ್ನು ಹಿರಿಯವಿದ್ಯಾರ್ಥಿಗಳ ಸಹಕಾರದಲ್ಲಿ ನಿಯೋಜಿಸಲಾಗುತ್ತಿದೆ.
ಮಕ್ಕಳಿಗೆ ಉಚಿತ ಬಸ್ ಪಾಸ್: 7 ವರ್ಷಗಳಿಂದ ಅನಿವಾಸಿ ಭಾರತೀಯ ಡಾ.ರಾಮಕೃಷ್ಣ ಸಹಕಾರದಲ್ಲಿ ಹಳ್ಳಿಯಿಂದ ಬರುವ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬಸ್ ಮೂಲಕ ಬರುವ ಮಕ್ಕಳಿಗೆ ಉಚಿತ ಪಾಸ್ ಮಾಡಿಸಿಕೊಡಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಉತ್ತಮವಾದ ಡೆಸ್ಕ್, ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ದೈಹಿಕ ಶಿಕ್ಷಕರೊಂದಿಗೆ ಎಲ್ಲಾ ಕ್ರೀಡಾ ಸಾಮಗ್ರಿಗಳನ್ನು ಶಾಲೆ ಹೊಂದಿದೆ. ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲಿನೊಂದಿಗೆ ಬಿಸ್ಕೆಟ್ ದಿನಬಿಟ್ಟು ದಿನ ಬಾದಾಮಿ ಹಾಲು ವಿತರಿಸಲಾಗುತ್ತಿದೆ.
ಹಾಜರಾತಿ ಹೆಚ್ಚಳ: ಈ ಎಲ್ಲಾ ವ್ಯವಸ್ಥೆಯನ್ನು ಕಳೆದ7 ವರ್ಷಗಳಿಂದ ಮಕ್ಕಳಿಗೆ ಒದಗಿಸಿಕೊಡುತ್ತಿರುವುದು ಶಾಲೆಯ ಹೆಗ್ಗಳಿಕೆ. 2012ರಲ್ಲಿ 32 ಮಕ್ಕಳೊಂದಿಗೆ ಮುಚ್ಚುವ ಹಂತದಲ್ಲಿತ್ತು. ಇದೀಗ ಶಾಲೆ 110 ಮಕ್ಕಳ ಹಾಜರಾತಿ ಹೊಂದಿದೆ.ಶಾಲೆಯಲ್ಲಿ ಆಂಗ್ಲಮಾಧ್ಯಮದ 1ರಿಂದ 3ನೇ ಹಾಗೂ ಕನ್ನಡ ಮಾಧ್ಯಮದ 1ರಿಂದ 7 ತರಗತಿಗಳಿಗೆ ಪ್ರವೇಶ ಆರಂಭವಾಗಿದೆ.
ಖರ್ಚಿಲ್ಲದೇ ಶತಮಾನದ ಶಾಲೆಗೆ ದಾಖಲಿಸಿ : ಶಾಲೆಗೆ ಮಂಜೂರಾದ ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಎಲ್‌ಇಡಿ ಪ್ಯಾನೆಲ್ ಬಂದಿದ್ದು, ಈ ಶೈಕ್ಷಣಿಕ ವರ್ಷದಿಂದ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ತರಗತಿ ಆರಂಭವಾಗಲಿದೆ. ಇಬ್ಬರು ಆಂಗ್ಲವಿಷಯ ತಜ್ಞರು ಶಾಲೆಗೆ ಆಗಮಿಸಿ ಮಕ್ಕಳಿಗೆ ನ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಿದ್ದಾರೆ. ನಿಮ್ಮ ಮಕ್ಕಳನ್ನು ಯಾವುದೇ ಖರ್ಚಿಲ್ಲದೆ ಶತಮಾನದ ಶಾಲೆಗೆ ಸೇರಿಸಿ ಎಂದು ಮುಖ್ಯ ಶಿಕ್ಷಕ ಸಂತಾನರಾಮನ್, ಸಹ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷ ದೇವರಾಜು, ಸದಸ್ಯರು ಪೋಷಕರಲ್ಲಿ ಮನವಿ ಮಾಡಿದ್ದಾರೆ.