Advertisement

ಮೆಲ್ಬರ್ನ್ ಟೆಸ್ಟ್: ಭಾರತಕ್ಕೆ ಆರಂಭಿಕ ಮುನ್ನಡೆ, ಆಸೀಸ್ ಮೂರು ವಿಕೆಟ್ ಪತನ

07:28 AM Dec 26, 2020 | keerthan |

ಮೆಲ್ಬರ್ನ್: ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಮುನ್ನಡೆ ಪಡೆದಿದೆ. ಮೊದಲ ದಿನದ ಊಟದ ವಿರಾಮದ ವೇಳೆಗೆ ಆಸೀಸ್ ತಂಡ ಮೂರು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟಿಮ್ ಪೇನ್ ಪಡೆಯ ಲೆಕ್ಕಾಚಾರವನ್ನು ಭಾರತೀಯ ಬೌಲರ್ ಗಳು ಅಡಿಮೇಲು ಮಾಡಿದರು. ಶಿಸ್ತುಬದ್ಧ ಬೌಲಿಂಗ್ ಮಾಡಿದ ಬುಮ್ರಾ ಆರಂಭದಲ್ಲೇ ಭಾರತಕ್ಕೆ ಮುನ್ನಡೆ ಒದಗಿಸಿದರು. ಖಾತೆ ತೆರೆಯದ ಜೋ ಬರ್ನ್ಸ್ ಕೀಪರ್ ಪಂತ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಮ್ಯಾಥ್ಯೂ ವೇಡ್ 30 ರನ್ ಗಳಿಸಿದ್ದಾಗ ಅಶ್ವಿನ್ ಎಸೆತದಲ್ಲಿ ಜಡೇಜಾಗೆ ಕ್ಯಾಚಿತ್ತರು. ಆಸೀಸ್ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಖಾತೆ ತೆರೆಯದೆ ಅಶ್ವಿನ್ ಗೆ ಬಲಿಯಾದರು. ಸದ್ಯ ಮಾರ್ನಸ್ ಲಬುಶೇನ್ (26 ರನ್ ) ಮತ್ತು ಟ್ರಾವಿಸ್ ಹೆಡ್ (4 ರನ್) ಆಡುತ್ತಿದ್ದಾರೆ.

ನಾಲ್ಕು ಬದಲಾವಣೆ

ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಕ್ಕಾಗಿ ಭಾರತ 4 ಬದಲಾವಣೆ ಮಾಡಿಕೊಂಡಿದೆ. ಅಡಿಲೇಡ್‌ನ‌ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫ‌ಲ್ಯ ಕಂಡು, ಭಾರೀ ಟೀಕೆ ಎದುರಿಸಿದ ಆರಂಭಕಾರ ಪೃಥ್ವಿ ಶಾ (0 ಮತ್ತು 4ರನ್‌) ಅವರನ್ನು ಹೊರಗಿರಿಸಲಾಗಿದೆ. ಇವರ ಬದಲು ಶುಭಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಪಂಜಾಬಿನ ಬಲಗೈ ಬ್ಯಾಟ್ಸ್‌ಮನ್‌ ಪಾಲಿಗೆ ಇದು ಪದಾರ್ಪಣ ಟೆಸ್ಟ್‌. ಕೇವಲ 3 ಏಕದಿನ ಪಂದ್ಯಗಳನ್ನಾಡಿರುವ ಗಿಲ್‌ ಮೇಲೆ ಇಲ್ಲಿ ಬಹು ದೊಡ್ಡ ಜವಾಬ್ದಾರಿ ಇದೆ.

Advertisement

ಟೆಸ್ಟ್‌ ಕ್ಯಾಪ್‌ ಧರಿಸಿದ ಮತ್ತೂಬ್ಬ ಆಟಗಾರ ಮೊಹಮ್ಮದ್‌ ಸಿರಾಜ್‌. ಹೈದರಾಬಾದ್‌ನ ಈ ಬಲಗೈ ಮಧ್ಯಮ ವೇಗಿ ಮೊಹಮ್ಮದ್‌ ಶಮಿ ಜಾಗವನ್ನು ತುಂಬಬೇಕಿದೆ. ಸಿರಾಜ್‌ ಏಕೈಕ ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಷ್ಟೇ ಭಾರತವನ್ನು ಪ್ರತಿನಿಧಿಸಿದ್ದಾರೆ.

ಗಾಯಾಳಾಗಿ ಮೊದಲ ಟೆಸ್ಟ್‌ ಪಂದ್ಯ ವನ್ನು ತಪ್ಪಿಸಿಕೊಂಡಿದ್ದ ರವೀಂದ್ರ ಜಡೇಜ ಅವರ ಪುನರಾಗಮನವಾಗಿದೆ. ಇದು ತಂಡಕ್ಕೊಂದು “ಬೂಸ್ಟ್‌’ ಆಗುವುದರಲ್ಲಿ ಅನುಮಾನವಿಲ್ಲ. ಕೀಪಿಂಗ್‌ ವಿಭಾಗದಲ್ಲೂ ಬದಲಾವಣೆ ಸಂಭವಿಸಿದೆ. ಅನುಭವಿ ವೃದ್ಧಿಮಾನ್‌ ಸಾಹಾ ಜಾಗದಲ್ಲಿ ರಿಷಭ್‌ ಪಂತ್‌ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next