Advertisement

ಮೇಕೆದಾಟು ಯೋಜನೆ; ತಮಿಳುನಾಡಿನ ಅನಗತ್ಯ ಅಡ್ಡಿ ಸಲ್ಲ

12:37 AM Jun 14, 2022 | Team Udayavani |

ಕಾವೇರಿ ನದಿ ನೀರು ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡಿಕೊಂಡು ಬರುತ್ತಿರುವ ನೆರೆಯ ರಾಜ್ಯ ತಮಿಳುನಾಡು ಮತ್ತೆ ಮೇಕೆದಾಟು ಯೋಜನೆ ಕುರಿತಂತೆ ಕ್ಯಾತೆ ತೆಗೆದಿದೆ.

Advertisement

ದಶಕಗಳಿಂದಲೂ ಕಾವೇರಿ ನದಿ ನೀರು ವಿವಾದವನ್ನು ಮುಂದಿಟ್ಟುಕೊಂಡೇ ರಾಜಕಾರಣ ನಡೆಸುವುದು ತಮಿಳುನಾಡಿನ ರಾಜಕೀಯ ಪಕ್ಷಗಳ ಸಂಪ್ರದಾಯ. ಇದನ್ನು ಮುಂದುವರಿಸಿರುವ ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಮೇಕೆದಾಟು ಯೋಜನೆಯ ಡಿಪಿಆರ್‌ ಚರ್ಚೆಯೇ ಸಲ್ಲದು ಎಂದು ಹೇಳುವ ಮೂಲಕ ವಿವಾದದ ಹೊಸ ಹಾದಿ ತುಳಿದಿದ್ದಾರೆ.

ಸ್ಟಾಲಿನ್‌ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಇದೇ 17ರಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್‌ ಕುರಿತಂತೆ ಚರ್ಚೆ ನಡೆಸಬಾರದು ಎಂದಿದ್ದಾರೆ. ಈ ಕುರಿತಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚನೆ ನೀಡುವಂತೆಯೂ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. ಸಭೆಯ ಅಜೆಂಡಾದಲ್ಲಿ ಮೇಕೆದಾಟು ಡಿಪಿಆರ್‌ ಚರ್ಚೆ ಎಂದು ಸೇರಿಸಿರುವುದೇ ಕಾನೂನುಬಾಹಿರ ಎಂಬುದು ಸ್ಟಾಲಿನ್‌ ಅಭಿಪ್ರಾಯ. ಮೇಕೆದಾಟು ವಿರೋಧಿಸಿ ತಮಿಳುನಾಡು ಸುಪ್ರೀಂ
ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಈ ಬಗ್ಗೆ ತೀರ್ಮಾನವಾಗುವ ವರೆಗೂ ಚರ್ಚೆ ನಡೆಯಬಾರದು ಎಂಬ ಭಂಡವಾದ ಮುಂದಿಟ್ಟಿದ್ದಾರೆ.

ಕೆಲವೊಮ್ಮೆ ತಮಿಳುನಾಡು ವಿಚಿತ್ರ ಬೇಡಿಕೆಗಳನ್ನು ಇರಿಸಿಕೊಂಡು ವಿವಾದ ಸೃಷ್ಟಿಸುತ್ತದೆ. ಇದಕ್ಕೆ ಉದಾಹರಣೆ, ಈಗಿನ ಮೇಕೆದಾಟು ವಿಚಾರ. ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರಕ್ಕೆ ಮೇಕೆದಾಟು ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ ಎಂಬುದು ಅದರ ವಾದ. 2018ರ ಸುಪ್ರೀಂ ಕೋರ್ಟ್‌ ತೀರ್ಪನ್ನು ಪಾಲನೆ ಮಾಡುವ ಸಲುವಾಗಿಯಷ್ಟೇ ಇದನ್ನು ರಚಿಸಲಾಗಿದೆ. ಇದನ್ನು ಬಿಟ್ಟು ಬೇರೆ ವಿಷಯ ಚರ್ಚಿಸುವಂತಿಲ್ಲ ಎಂದೂ ಹೇಳುತ್ತಿದೆ.

ಈ ಸಂಗತಿಗಳನ್ನು ಗಮನಿಸಿದರೆ, ತಮಿಳುನಾಡು ರಾಜ್ಯ ತನಗೆ ಬೇಕಾದಂತೆ ವಿಷಯಗಳನ್ನು ಬದಲಿಸಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಮೇಕೆದಾಟು ವಿಚಾರವನ್ನು ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸದೆ ಬೇರೆ ಎಲ್ಲಿ ಚರ್ಚೆ ನಡೆಸಬೇಕು ಎಂಬ ಪ್ರಶ್ನೆ ಮೂಡುವಂತಾಗಿದೆ.

Advertisement

ಈಗಾಗಲೇ ನಿರ್ವಹಣ ಪ್ರಾಧಿಕಾರ ಮೇಕೆದಾಟು ಸಂಬಂಧ ಚರ್ಚೆಗೆ ಅವಕಾಶ ಕೊಡಬಾರದು ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲು ತುಳಿದಾಗಿದೆ. ಈಗ ಪ್ರಧಾನಿಗೂ ಪತ್ರ ಬರೆದು ಅನಗತ್ಯ ಒತ್ತಡ ಸೃಷ್ಟಿಸುವ ಕೆಲಸವನ್ನೂ ಮಾಡುತ್ತಿದೆ. ಆದರೆ ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿನ ಅಧಿಕಾರಿ ಯೊಬ್ಬರು ಇರುತ್ತಾರೆ, ಅವರು ಈ ಬಗ್ಗೆ ಚರ್ಚಿಸಬಹುದು ಎಂಬ ಸಾಮಾನ್ಯ ತಿಳಿವಳಿಕೆಯೂ ಮರೆಯಾದಂತೆ ಕಾಣಿಸುತ್ತಿದೆ.

ಏನೇ ಆಗಲಿ, ಕರ್ನಾಟಕದ ಕಡೆಯಿಂದ ತಮಿಳುನಾಡಿನ ಈ ಎಲ್ಲ ರಾಜಕೀಯಗಳಿಗೆ, ವಿರೋಧಗಳಿಗೆ ತಕ್ಕ ಉತ್ತರ ನೀಡಲೇಬೇಕು. ಯಾವುದೇ ಕಾರಣಕ್ಕೂ 17ರ ಸಭೆಯ ಅಜೆಂಡಾದಿಂದ ಮೇಕೆದಾಟು ಯೋಜನೆ ವಿಚಾರ ಹಿಂದಕ್ಕೆ ಸರಿಯದಂತೆ ನೋಡಿಕೊಳ್ಳಲೇಬೇಕು. ಅಲ್ಲದೆ, ಸುಪ್ರೀಂ ಕೋರ್ಟ್‌ ಮುಂದೆ ತಮಿಳುನಾಡು ಸಲ್ಲಿಕೆ ಮಾಡಿರುವ ಅರ್ಜಿಗೆ ಸೂಕ್ತ ಕಾನೂನು ತಜ್ಞರನ್ನು ನಿಯೋಜಿಸಿ ಸಮರ್ಥ ವಾದ ಮಂಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next