Advertisement

ಮೇಕೆದಾಟು ಯೋಜನೆ: ಏಕಿಷ್ಟು ಹಠ?

12:40 AM Jan 08, 2022 | Team Udayavani |

ರಾಜ್ಯದಲ್ಲೀಗ ಮೇಕೆದಾಟು ಯೋಜನೆಯದ್ದೇ ಸದ್ದು. ಒಂದು ಕಡೆ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿಯೇ ಸಿದ್ಧ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಪಾದಯಾತ್ರೆ ಮಾಡಿ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾದರೆ ನೀವೇ ಹೊಣೆ, ಕಠಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರ ಎಚ್ಚರಿಕೆ ನೀಡಿದೆ. ಇಂಥ ಸಮಯದಲ್ಲೂ ಪಾದಯಾತ್ರೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್‌ ನಡೆ ಹಿಂದಿರುವ ತಂತ್ರವೇನು? ಸರಕಾರ‌ದ ಎಚ್ಚರಿಕೆ ಸಂದೇಶಗಳೇನು? ಜೆಡಿಎಸ್‌ನ ಮುಂದಿನ ನಡೆಯೇನು ಎಂಬ ಕುರಿತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ..

Advertisement

ಏನಿದು ಮೇಕೆದಾಟು ಯೋಜನೆ?: ರಾಜಧಾನಿ ಬೆಂಗಳೂರಿಗೆ ಪೂರ್ಣ ಪ್ರಮಾಣದಲ್ಲಿ ಕಾವೇರಿ ಕುಡಿಯುವ ನೀರು ಒದಗಿಸುವುದು  ಮೇಕೆದಾಟು ಯೋಜನೆಯ ಮೂಲ ಉದ್ದೇಶ. ರಾಜ್ಯ ಸರಕಾರ ರೂಪಿಸಿರುವ ಈ ಯೋಜನೆ ಅನುಷ್ಠಾನವಾದರೆ ಭವಿಷ್ಯದಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಒಳಿತಾಗಲಿದೆ. ಮೇಕೆದಾಟು ಪ್ರದೇಶದಲ್ಲಿ ಜಲಾಶಯ ನಿರ್ಮಿಸಿ  67.16 ಟಿಎಂಸಿ ನೀರು ಸಂಗ್ರಹ ಮಾಡುವುದು ಹಾಗೂ ಕುಡಿಯುವ ನೀರಿನ ಜತೆಗೆ 440 ಮೆ.ವಾ ವಿದ್ಯುತ್‌ ಉತ್ಪಾದನೆ ಮಾಡುವುದು ಯೋಜನೆಯ ಗುರಿ.

ತಮಿಳುನಾಡಿನ ವಿರೋಧವೇಕೆ?: ಕೆಆರ್‌ಎಸ್‌ನಿಂದ ಹರಿಯುವ ನೀರಿಗೆ ತಡೆಹಾಕಿ ಜಲಾಶಯದಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ. ಇದರಿಂದ ತಮಿಳುನಾಡಿಗೆ ಸಮಸ್ಯೆಯುಂಟಾಗುತ್ತದೆ ಎಂಬುದು ಆ ರಾಜ್ಯದ ಅಳಲು. ಆದರೆ ನಾವು ನಮ್ಮ ರಾಜ್ಯದ ಪಾಲನ್ನು ಬಳಕೆ ಮಾಡುತ್ತೇವೆ. ಯೋಜನೆಯಿಂದ ತಮಿಳುನಾಡಿನ ಪಾಲಿನ ನೀರಿಗೆ ಧಕ್ಕೆಯಾಗದು ಎಂಬುದು ಕರ್ನಾಟಕದ ಪ್ರತಿಪಾದನೆ. ಸಮುದ್ರಕ್ಕೆ ಹರಿದು ಹೋಗುವ 45 ಟಿಎಂಸಿ ನೀರು ಲಭ್ಯವಾಗಲಿದ್ದು ಆ ನೀರು ಮಾತ್ರ ಬಳಸುತ್ತೇವೆ ಎಂಬ ಸಮರ್ಥನೆಯನ್ನೂ ನೀಡಿದೆ.

ಕರ್ನಾಟಕದ ವಾದವೇನು?: ತಮಿಳುನಾಡು ಮೆಟ್ಟೂರು ಜಲಾಶಯದಿಂದ ಮುಂದೆ ಮೂರು ಜಲಾಶಯಗಳನ್ನು ನಿರ್ಮಾಣ ಮಾಡಿ ನೀರು ಸಂಗ್ರಹ ಮಾಡುತ್ತಿದೆ. ಹೊಗೇನಕಲ್‌ ಯೋಜನೆ ಜಾರಿ ಮಾಡಿಕೊಂಡಿದೆ. ಬೆಂಗಳೂರಿಗೆ ಕುಡಿಯುವ ನೀರಿಗೆ ಯೋಜನೆ ರೂಪಿಸಿದರೆ ವಿರೋಧ ಮಾಡುತ್ತಿದೆ. ಇದು ಸರಿಯಲ್ಲ ಎಂಬುದು ಕರ್ನಾಟಕದ ವಾದ. ಬೆಂಗಳೂರಿನ ಶೇ.30ರಷ್ಟು ಭಾಗಕ್ಕೆ ಕಾವೇರಿ ನೀರು ದೊರಕುತ್ತಿಲ್ಲ. ರಾಜಧಾನಿಯ ನಾಗರಿಕರ ನೀರಿನ ದಾಹ ತೀರಿಸಲು ಸುಮಾರು 1,450 ಮಿಲಿಯನ್‌ ಲೀಟರ್‌ ಪ್ರತಿನಿತ್ಯ ಅಗತ್ಯವಿದೆ. ಹಾಗೆಯೇ 2030ಕ್ಕೆ 2,285 ಮಿಲಿಯನ್‌ ಲೀಟರ್‌ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

67.16 ಟಿಎಂಸಿ ನೀರು ಸಂಗ್ರಹ: ಒಂಟಿಗುಂಡ ಬಳಿಯಲ್ಲಿ ಜಲಾಶಯ ನಿರ್ಮಾಣ ಮಾಡುವುದು  67.16 ಟಿಎಂಸಿ ನೀರು ಸಂಗ್ರಹ ಮಾಡುವುದು. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ 4.75 ಟಿಎಂಸಿ ಬಳಕೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶ. ಮೇಕೆದಾಟು  ಯೋಜನೆಯಿಂದಾಗಿ  ಬೊಮ್ಮಸಂದ್ರ, ಗಾಳೆಬೊರೆ, ಮಡಿವಾಳ, ಕೊಗ್ಗವಾಡಿ, ನೆಲಲೂರ ದೊಡ್ಡಿ,ಸಂತಗೆರೆ ಸೇರಿದಂತೆ ಮತ್ತಿತರರ ಜನವಸತಿ ಪ್ರದೇಶಗಳು ಮುಳುಗಡೆಯಾಗಲಿವೆ. 4,176 ಹೆಕ್ಟೇರ್‌ ಅರಣ್ಯ,280 ಹೆಕ್ಟೇರ್‌ ಕಂದಾಯ ಭೂಮಿ ಯೋಜನೆಗೆ ಅಗತ್ಯವಿದ್ದು ಅದರಲ್ಲಿ 4,500 ಎಕ್ರೆ ಪ್ರದೇಶ ವನ್ಯಜೀವಿ ಅರಣ್ಯವಾಗಿರುವುದು ವಿಶೇಷ.

Advertisement

ಇದನ್ನೂ ಓದಿ:ಡ್ರಿಂಕಿಂಗ್‌ ಗ್ಲಾಸ್‌ ಮೂಲಕ ಗಿನ್ನೆಸ್‌ ರೆಕಾರ್ಡ್‌

ಯೋಜನೆಯ “ಕಾದಾಟ’:  ರಾಜ್ಯ ಸರಕಾರ 2008ರಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ಪ್ರಯತ್ನ ನಡೆಸಿತು. ಈ ವೇಳೆ ತಮಿಳುನಾಡು ಸರಕಾರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. 2015ರಲ್ಲಿ ರಾಜ್ಯ ಸರಕಾರ ಪ್ರಧಾನಿಗೆ ಮೇಕೆದಾಟು ವಿಚಾರವಾಗಿ ಪತ್ರ ಬರೆಯಿತು. ಯೋಜನೆ ಜಾರಿಗೆ ಅನುಮತಿ ಕೇಳಲಾಯಿತು. 2017ರಲ್ಲಿ ಕೇಂದ್ರ ಜನಶಕ್ತಿ ಆಯೋಗಕ್ಕೆ 5,912 ಕೋಟಿ ರೂ.ವೆಚ್ಚದಲ್ಲಿ ಡಿಪಿಆರ್‌ ಸಲ್ಲಿಕೆ ಮಾಡಲಾಯಿತು. ಮತ್ತೆ ತಮಿಳುನಾಡು ಸರಕಾರ ತಗಾದೆ ತೆಗೆದ ಕಾರಣ ಮರು ವಿನ್ಯಾಸಕ್ಕೆ ಸೂಚನೆ ನೀಡಲಾಯಿತು.

2019ಕ್ಕೆ ಜಲಶಕ್ತಿ ಇಲಾಖೆಗೆ ರಾಜ್ಯ ಸರಕಾರದಿಂದ ಪತ್ರ ಬರೆದು  9,000 ಕೋಟಿ ರೂ.ಗಳ ಮತ್ತೊಂದು ಡಿಪಿಆರ್‌ ಸಲ್ಲಿಸಲಾಯಿತು. ಅಲ್ಲಿಂದ ಇಲ್ಲಿಯರೆಗೆ ಕಾವೇರಿ ಪ್ರಾಧಿಕಾರದ ಐದು  ಸಭೆಗಳು ನಡೆದಿದ್ದು  ಮೇಕೆದಾಟು ಯೋಜನೆ ಜಾರಿ ಪ್ರಸ್ತಾವವಾಗಿದೆಯಾದರೂ ಅನುಮತಿ ದೊರೆತಿಲ್ಲ. ಇದರ ನಡುವೆ 2021ರಲ್ಲಿ ತಮಿಳುನಾಡು ಮುಖ್ಯಮಂತ್ರಿಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಪತ್ರವೂ ಬರೆಯಲಾಗಿದೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದು ಎಂಬುದನ್ನೂ ಪ್ರತಿಪಾದಿಸಲಾಗಿದೆ.

1848ರಲ್ಲೇ ಪ್ರಸ್ತಾವ‌: ಆಡಳಿತಾರೂಢ  ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ, ಯೋಜನೆಗೆ ನಮ್ಮ ಕೊಡುಗೆ ಜಾಸ್ತಿ  ಇದೆ ಎಂದು ಜೆಡಿಎಸ್‌ ಹಕ್ಕು ಪ್ರತಿಪಾದಿಸುತ್ತಿರುವ ಮೇಕೆದಾಟು ಯೋಜನೆ ಇಂದು ನಿನ್ನೆಯದಲ್ಲ. 1848ರಲ್ಲೇ ಪ್ರಸ್ತಾವವಾಗಿತ್ತು. ಆದರೆ ಕಾವೇರಿ ನ್ಯಾಯ ಮಂಡಳಿಯ ಐ ತೀರ್ಪು ಹೊರಬಿದ್ದ ಮೇಲೆ ಮೇಕೆದಾಟು ಯೋಜನೆ  ಸ್ವರೂಪ ಪಡೆದುಕೊಳ್ಳಲು ಆರಂಭವಾಯಿತು.  1948ರಲ್ಲಿ ಮೊದಲ ಬಾರಿಗೆ ಯೋಜನೆಯ ಪ್ರಸ್ತಾವವಾಗಿ ರಾಜ್ಯಗಳ ಪುನರ್‌ ವಿಂಗಡಣೆಯಾದ 1956ರಲ್ಲಿ ಚರ್ಚೆಯಲ್ಲಿತ್ತು. 1960ರಲ್ಲಿ ಕಾವೇರಿ ನದಿ ನೀರಿ ವಿಚಾರ ಪ್ರಾರಂಭವಾದ ಅನಂತರ ಮೇಕೆದಾಟು ವಿಚಾರ ತೆರೆಮರೆಗೆ ಸರಿಯಿತಾದರೂ 90ರ ದಶಕದಲ್ಲಿ ಮತ್ತೆ ಮುನ್ನೆಲೆಗೆ ಬಂದಿತು.

ಕಾಂಗ್ರೆಸ್‌ನ ಗುರಿ ಏನು?
ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇದೆ. ಹಳೇ ಮೈಸೂರು ಭಾಗ ಮತ್ತು ಬೆಂಗಳೂರಿನಲ್ಲಿ ಪಕ್ಷವನ್ನು ಗಟ್ಟಿ ಮಾಡಿಕೊಳ್ಳುವುದು ಕಾಂಗ್ರೆಸ್‌ನ ಗುರಿ. ಹೀಗಾಗಿಯೇ ಮೇಕೆದಾಟು ಯೋಜನೆಗಾಗಿ ಪಟ್ಟು ಬಿಡದೇ ಪಾದಯಾತ್ರೆ ನಡೆಸಲು ಮುಂದಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಕಾವೇರಿ ಅಂದರೆ ದೈವೀ ಸ್ವರೂಪ. ಕಾವೇರಿಯನ್ನು ಅಸ್ಮಿತೆಯನ್ನಾಗಿ ಮಾಡಿಕೊಂಡು ಹೋರಾಟ ನಡೆಸಿದರೆ ಈ ಭಾಗದ ಜನರ ಮನಸ್ಸು ಗೆಲ್ಲಬಹುದು ಎಂಬ ಆಲೋಚನೆಯೂ ಇದೆ. ಅಷ್ಟೇ ಅಲ್ಲ, ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಹಳೇ ಮೈಸೂರು ಭಾಗದವರು. ಮೇಕೆದಾಟು ಯೋಜನೆ ಪೂರೈಸಿದರೆ, ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರಿನ ಸೌಕರ್ಯವನ್ನು ಸಲೀಸಾಗಿ ನೀಡಬಹುದು. ಹೀಗಾಗಿ ಶಿವಕುಮಾರ್‌, ಸಿದ್ದರಾಮಯ್ಯ ಅವರೇ ನೇತೃತ್ವ ವಹಿಸಿಕೊಂಡಿದ್ದಾರೆ. ಜತೆಗೆ ತಾವಿಬ್ಬರೂ ಜತೆಯಲ್ಲಿದ್ದೇವೆ ಎಂದು ರಾಜ್ಯದ ಜನರಿಗೆ ಸಂದೇಶ ನೀಡಿದಂತಾಗುತ್ತದೆ ಎಂಬುದು ಇವರ ಲೆಕ್ಕಾಚಾರ.

ಬಿಜೆಪಿಗೇಕೆ ಚಿಂತೆ?
ಈಗಷ್ಟೇ ಹಳೇ ಮೈಸೂರಿನಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿರುವ ಬಿಜೆಪಿ, ಈ ಪಾದಯಾತ್ರೆ ಬಗ್ಗೆ ತನ್ನ ವಿರೋಧ ತೋರ್ಪಡಿಸಿದೆ. ಒಂದು ವೇಳೆ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ ನಡೆಸುತ್ತಿರುವ ಪಾದಯಾತ್ರೆ ಯಶಸ್ವಿಯಾದರೆ, ಈಗಷ್ಟೇ ಕಣ್ಣು ಬಿಟ್ಟಿರುವ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾದೀತು ಎಂಬ ಆತಂಕವೂ ಇದೆ. ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳದಿದ್ದರೂ ಒಳಗೆ ಈ ಆತಂಕವಿದೆ ಎಂದೇ ಹೇಳಲಾಗುತ್ತಿದೆ. ಹಾಗೆಯೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಜೋಡಿ ಒಟ್ಟಾಗಿದೆ ಎಂಬ ಸಂದೇಶ ಹೋದರೂ ಕಷ್ಟಕರ ಎಂಬ ಅರಿವೂ ಬಿಜೆಪಿಗೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಜೆಡಿಎಸ್‌ನ ಆತಂಕವೇನು?
ಸದ್ಯ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಗಟ್ಟಿಯಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಒಂದಷ್ಟು ಕ್ಷೇತ್ರಗಳು ಸಿಕ್ಕಿವೆ. ಕಾಂಗ್ರೆಸ್‌ನ ಬಲ ಇಲ್ಲಿ ಗಟ್ಟಿಯಾದರೆ, ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಬಹುದು ಎಂಬ ಚಿಂತನೆ ಇದೆ. ಅಲ್ಲದೆ ತಮ್ಮ ಬುಟ್ಟಿಯಲ್ಲಿರುವ ಒಕ್ಕಲಿಗ ಮತಗಳೂ ಕಾಂಗ್ರೆಸ್‌ಗೆ ಹೋದರೆ ಎಂಬ ಆತಂಕವೂ ಜೆಡಿಎಸ್‌ಗೆ ಇದೆ. ಹೀಗಾಗಿಯೇ ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌ ಸರಕಾರ‌ಕ್ಕಿಂತ, ಜೆಡಿಎಸ್‌ನವರೇ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ತೋರ್ಪಡಿಸುವ ಕೆಲಸ ಮಾಡಲಾಗುತ್ತಿದೆ.

ಟೈಮ್‌ಲೈನ್‌

2013 – ಸೆಪ್ಟಂಬರ್‌- ಮೇಕೆದಾಟು ಮತ್ತು ಶಿವನಸಮುದ್ರ ಯೋಜನೆಗಾಗಿ ಸಭೆ

2013 – ಅಕ್ಟೋಬರ್‌ – ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ

2014 – ಎಪ್ರಿಲ್‌ – ಟೆಂಡರ್‌ ಪ್ರಕ್ರಿಯೆ ಆರಂಭಿಸುವಂತೆ ಸರಕಾರ‌ದಿಂದ ಆದೇಶ

2015 – ಎಪ್ರಿಲ್‌ – ಆಗಿನ ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ

ಜ್ಞಾಪನ ಪತ್ರ ಸಲ್ಲಿಕೆ

2015 – ಜುಲೈ – ಬಿಡ್‌ ಪ್ರಕ್ರಿಯೆ ಆರಂಭ

2016 – ಫೆಬ್ರವರಿ – ಕೆಟಿಪಿಪಿ ಕಾಯ್ದೆಯ 4ಜಿ ವಿನಾಯಿತಿ ನೀಡಲು ಕೇಂದ್ರ ಸರಕಾರ ಒಪ್ಪಿಗೆ

2016 – ಜೂನ್‌ – ಕೇಂದ್ರ ಸರಕಾರ‌ಕ್ಕೆ 5,912 ಕೋಟಿ ರೂ. ಮೊತ್ತದ ಯೋಜನೆಯ ಡಿಪಿಆರ್‌ ಸಲ್ಲಿಕೆ

2017 – ಮಾರ್ಚ್‌ – ರಾಜ್ಯದ ಡಿಪಿಆರ್‌ಗೆ ಕೇಂದ್ರದ ತಾತ್ವಿಕ ಒಪ್ಪಿಗೆ

2019 – ಜನವರಿ – 9000 ಕೋಟಿ ರೂ. ಮೊತ್ತದ ಸವಿವರವುಳ್ಳ ಡಿಪಿಆರ್‌ ಅನ್ನು ಕೇಂದ್ರದ ಮುಖೇನ ಸಿಡಬ್ಲ್ಯುಸಿಗೆ ಸಲ್ಲಿಕೆ

2021 – ಜುಲೈ – ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಶಕ್ತಿ ಸಚಿವರು, ಪರಿಸರ ಸಚಿವರು, ಕಾವೇರಿ ಕಣಿವೆಯ ಎಲ್ಲ ಸಿಎಂಗಳಿಗೆ ಮೇಕೆದಾಟು ಯೋಜನೆ ಒಪ್ಪಿಗೆಗಾಗಿ ಪತ್ರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next