Advertisement
ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದರೆ ಹೆಣ್ಣು, ಪುರುಷನ ಕೈಗೊಂಬೆಯಾಗಿ ಬದುಕಿದ್ದ ಘಟನೆಗಳು ಕಣ್ಣಿಗೆರಾಚುತ್ತವೆ. ಪುರುಷಪ್ರಧಾನ ಸಮಾಜದಲ್ಲಿ ಗಂಡಿನ ಕೋಪ, ಹೊಟ್ಟೆಕಿಚ್ಚು ಹಾಗೂ ಸ್ವಾರ್ಥಕ್ಕೆ ಅಮಾಯಕ ಹೆಣ್ಣು ತನ್ನ ತಪ್ಪಿಲ್ಲದಿದ್ದರೂ ಬಲಿಪಶುವಾಗಿದ್ದಾಳೆ. ಹೀಗೆ ಹೇಳಲು ಒಂದು ಕಾರಣವಿದೆ.
Related Articles
Advertisement
17 ನೇ ಶತಮಾನದಲ್ಲಿ ವಿಜಯಪುರದಲ್ಲಿ ಎರಡನೇ ಆದಿಲ್ ಶಾ ಆಳ್ವಿಕೆ ನಡೆಸುತ್ತಿದ್ದ. ಅವನ ಕಾಲದಲ್ಲಿ ರಾಜ್ಯವು ಮೊಗಲ್ ಹಾಗೂ ಮರಾಠರ ನಿರಂತರ ದಾಳಿಗಳಿಂದ ದುರ್ಬಲಗೊಳ್ಳುತ್ತಾ ಸಾಗಿತ್ತು. ಅದರಲ್ಲೂ ಮರಾಠ ದೊರೆ ಶಿವಾಜಿಯ ದಾಳಿಗಳಿಂದ ಬಿಜಾಪುರದ ಸುಲ್ತಾನರು ಕಂಗೆಟ್ಟುಹೋಗಿದ್ದರು. ಎರಡನೇ ಆದಿಲ್ ಷಾನು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಸುಲ್ತಾನನ ತಾಯಿಯಾದ ಬಡಿಮಾ ಬೇಗಂ ದರ್ಬಾರನ್ನು ನಡೆಸಿ ಆಸ್ಥಾನದಲ್ಲಿ ಶಿವಾಜಿಯ ಉಪಟಳನವನ್ನು ಯಾರು ತಡೆಯುತ್ತಿರಿ ಎಂದು ತನ್ನ 22 ಸೇನಾಧಿಕಾರಿಗಳ ಮುಂದೆ ಪಂಥಾಹ್ವಾನ ಹಾಕಿ, ರಣವೀಳ್ಯ ನೀಡಲು ಮುಂದಾಗುತ್ತಾಳೆ. ಆಗ ಅಲ್ಲಿದ್ದ ಸೇನಾಧಿಕಾರಿ ಅಫಜಲ್ ಖಾನ್ ತಾನು ಶಿವಾಜಿಯನ್ನು ಹತ್ಯೆ ಮಾಡುವುದಾಗಿ ಹೇಳಿ ರಣವೀಳ್ಯ ಸ್ವೀಕರಿಸುತ್ತಾನೆ.
ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಅಫಜಲ್ ಖಾನನು ಶಿವಾಜಿಯ ಮೇಲೆ ದಂಡೆತ್ತಿ ಹೋಗುವ ಮುನ್ನ ತನ್ನ ರಾಜ್ಯದಲ್ಲಿರುವ ಬಾಬಾರೊಬ್ಬರ ಬಳಿ ಭವಿಷ್ಯ ಕೇಳಲು ಹೋಗುತ್ತಾನೆ.ಆಗ ಬಾಬಾ ಖಾನನಿಗೆ, ಶಿವಾಜಿಯ ಮೇಲೆ ದಾಳಿಗೆ ಹೋಗದಿರುವಂತೆ ಹಾಗೂ ಒಂದು ವೇಳೆ ಹೋದರೆ ಮರಣ ಹೊಂದಬೇಕಾಗುತ್ತದೆ ಎಂದು ಎಚ್ಚರಿಸುತ್ತಾನೆ. ಆದರೆ ದೈತ್ಯದೇಹಿಯಾಗಿದ್ದ ಹಾಗೂ ಸುಲ್ತಾನರಿಗೆ ವಿಧೇಯನಾಗಿದ್ದ ಅಫಜಲ್ ಖಾನ್ ತನ್ನ ನಿರ್ಧಾರದಿಂದ ಹಿಮ್ಮೆಟ್ಟುವುದಿಲ್ಲ.ಈ ಅಫಜಲ್ ಖಾನನಿಗೆ ಒಟ್ಟು 65 ಜನ ಪತ್ನಿಯರಿದ್ದರು. ಒಂದು ದಿನ ರಾತ್ರಿ ಅಫಜಲ್ ಖಾನನಿಗೆ ತನ್ನ ಪತ್ನಿಯರನ್ನು ಯಾರೋ ಅತ್ಯಾಚಾರ ಮಾಡುತ್ತಿರುವಂತೆ ಹಾಗೂ ಬಂಧಿಸಿ ಗುಲಾಮರನ್ನಾಗಿ ಮಾಡಿಕೊಂಡಂತೆ ಕನಸು ಬೀಳುತ್ತದೆ. ಇದರಿಂದ ಬೆಚ್ಚಿಬಿದ್ದ ಖಾನ್ ತಾನು ಮರಣಹೊಂದಿದ ನಂತರ ತನ್ನ ಪತ್ನಿಯರು ಇನ್ನೊಬ್ಬರ ವಶವಾಗಬಾರದೆಂಬ ನಿರ್ಣಯಕ್ಕೆ ಬರುತ್ತಾನೆ. ಆಗ ಅವನಿಗೆ ಅತ್ಯಂತ ಅಮಾನುಷ ಉಪಾಯವೊಂದು ಹೊಳೆಯುತ್ತದೆ.
ತನ್ನ ಎಲ್ಲ ಪತ್ನಿಯರನ್ನು ನವರಸಪುರದ ಹತ್ತಿರವಿರುವ ತನ್ನ ವಾಸಸ್ಥಾನಕ್ಕೆ ಕರೆಸಿಕೊಳ್ಳುತ್ತಾನೆ. ತಾವೆಲ್ಲ ಈ ರೀತಿ ಒಂದೆಡೆ ಸೇರಿರುವುದನ್ನು ಕಂಡು ಆ ಹೆಣ್ಣುಮಕ್ಕಳು ಅಚ್ಚರಿ ಪಡುತ್ತಾರೆ. ಅಫಜಲಖಾನನು ತನ್ನ ಪತ್ನಿಯರನ್ನು ಒಬ್ಬೊಬ್ಬರನ್ನಾಗಿ ಕರೆದು ಅವರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಅಲ್ಲೇ ಹತ್ತಿರವಿದ್ದ ಬಾವಿಯ ಹತ್ತಿರ ಕರೆದುಕೊಂಡು ಹೋಗುತ್ತಾನೆ. ಬಾವಿಯ ಸುತ್ತಮುತ್ತ ಕಾವಲಿಗಾಗಿ ಸೈನಿಕರನ್ನು ನಿಲ್ಲಿಸುತ್ತಾನೆ. ಹೀಗೆ ಒಬ್ಬೊಬ್ಬರನ್ನಾಗಿ ಕರೆದು ಅವರನ್ನು ಬಾವಿಯಲ್ಲಿ ಮುಳುಗಿಸಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡುತ್ತಾನೆ. ಹೀಗೆ ಹೋದವರು ಯಾಕೆ ಮರಳಿ ಬರುತ್ತಿಲ್ಲವೆಂದು ದಿಗಿಲುಗೊಂಡ ಅವನ ಇಬ್ಬರು ಪತ್ನಿಯರು ಅಲ್ಲಿಂದ ಓಡಿಹೋಗುತ್ತಾರೆ. ಅವರನ್ನು ಬೆನ್ನಟ್ಟಿ ಹೋದ ಸೈನಿಕರು ಒಬ್ಬಳನ್ನು ಚಿಗಣಿ ಬಾಬಾದ ದರ್ಗಾದ ಬಳಿ ,ಮತ್ತೂಬ್ಬಳನ್ನು ತೊರವಿ ಗ್ರಾಮದ ಹತ್ತಿರ ಕೊಲೆಮಾಡಿ ಅಲ್ಲಿಯೇ ಅವರ ಸಮಾಧಿ ಮಾಡುತ್ತಾರೆ.
ಹೀಗೆ ತನ್ನ ಎಲ್ಲ 65 ಪತ್ನಿಯರನ್ನು ಹತ್ಯೆ ಮಾಡಿದ ಅಫಜಲ್ ಖಾನನು ಶಿವಾಜಿಯನ್ನು ಹತ್ಯೆ ಮಾಡಲು ಸಿದ್ಧನಾಗುವನು. ನವೆಂಬರ್ 10, 1659ರಲ್ಲಿ ಪ್ರತಾಪಗಡದಲ್ಲಿ ಸಂಧಾನದ ನೆಪದಲ್ಲಿ ಶಿವಾಜಿಯನ್ನು ಭೇಟಿ ಆಗಲು ಹೋಗಿದ್ದ ಅಫಜಲ್ ಖಾನ್ ಶಿವಾಜಿಯಿಂದ ಹತನಾಗುತ್ತಾನೆ. ಅಲ್ಲಿಯೇ ಅವನ ಸಮಾಧಿ ಮಾಡಲಾಗುತ್ತದೆ. ಇದು ಸಾಠ್ ಕಬರ್ ಹಿಂದಿರುವ ಹೃದಯಸ್ಪರ್ಶಿ ಕತೆ.
ಹೀಗೆ ಐತಿಹಾಸಿಕವಾಗಿ ಸಾಠ್ ಕಬರ್ ವಾಸ್ತುಶಿಲ್ಪದ ದೃಷ್ಠಿಯಿಂದ ಆಕರ್ಷಕವಾಗಿಲ್ಲದಿದ್ದರೂ ಅತ್ಯಂತ ಮಹತ್ವದ ಪ್ರೇಕ್ಷಣೀಯ ಸ್ಥಳ. ವಿಜಯಪುರದಲ್ಲಿ ಎಲ್ಲಾ ಸ್ಮಾರಕಗಳು ಆಳರಸರ ಗತವೈಭವವನ್ನು ಹೇಳಿದರೆ ಸಾಠ್ ಕಬರ್ ಅಮಾನುಷ ವ್ಯಕ್ತಿಗಳ ಕ್ರೌರ್ಯದ ಕತೆಯನ್ನು ಹೇಳುತ್ತದೆ. ಹೀಗಾಗಿ ಇದನ್ನು ವಿಜಯಪುರದ ಪ್ರವಾಸಿತಾಣಗಳ ಪೈಕಿ ಕಪ್ಪು ಅಂತಲೇ ಕುಖ್ಯಾತಿ ಪಡೆದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯು ಬಿಜಾಪೂರದ 83 ಸಂರಕ್ಷಿತ ಸಾರಕಗಳ ಪೈಕಿ ಇದನ್ನು ಸೇರಿಸಿದೆ. ಆದರೆ ಇದರ ಸಂರಕ್ಷಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿ$ಸಲಾಗಿದೆ. ಅತ್ಯಂತ ನಿರ್ಜನ ಪ್ರದೇಶದಲ್ಲಿರುವ ಈ ಗೋರಿಗಳು ಬಹುತೇಕವಾಗಿ ವಿನಾಶದ ಅಂಚಿನಲ್ಲಿವೆ. ಕೆಲವು ಗೋರಿಗಳನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ಕೆಲವು ಮಳೆಗಾಳಿಗೆ ಶಿಥಿಲವಾಗಿವೆ.
ಮೆಹ್ತ್‌ರ್ ಮಹಲ್ ಇದೇ ರೀತಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೆಹ್ತ್‌ರ್ ಮಹಲ್ ಕೂಡ ಒಂದು.
ಇದು ಮಸೀದಿಯೊಂದರ ಪ್ರವೇಶದ್ವಾರ. ಕ್ರಿ.ಶ. 1620ರಲ್ಲಿ ಇವನ್ನು ಕಟ್ಟಲಾಗಿದೆಯಂತೆ. ಮೆಹ್ತ್‌ರ್ ಎಂದರೆ ಜಾಡಮಾಲಿ, ಭಂಗಿ , ನಗರವನ್ನು ಸ್ವತ್ಛಗೊಳಿಸುವವನು ಎಂದರ್ಥ.ಇದನ್ನು ಜಾಡಮಾಲಿ ಅರಮನೆ ಎಂದೂ ಕರೆಯಲಾಗುತ್ತದೆ. ಬಹುಶಃ ಇದು ಜಾಡಮಾಲಿಗಳ ಹೆಸರಿನಲ್ಲಿರುವ ವಿಶ್ವದ ಏಕೈಕ ಮಹಲ್ ಇದರ ನಿರ್ಮಾಣದ ಹಿಂದೆ ಒಂದು ರೋಚಕವಾದ ಐತಿಹಾಸಿಕ ಘಟನೆಯಿದೆ. ದೊರೆ ಮೊದಲನೇ ಇಬ್ರಾಹಿಂ ಆದಿಲ್ ಷಾ ಕುಷ್ಠರೋಗದಿಂದ ಬಳಲುತ್ತಿದ್ದನಂತೆ. ಎಲ್ಲ ಹಕೀಮರು ಏನೆಲ್ಲ ಚಿಕಿತ್ಸೆ ನೀಡಿದರೂ ಗುಣಮುಖವಾಗಲಿಲ್ಲ. ಕೊನೆಯದಾಗಿ ಸುಲ್ತಾನನು ಜ್ಯೋತಿಷಿಗಳ ಮೋರೆ ಹೋದ. ಆಗ ಜ್ಯೋತಿಷಿಗಳು ಮಾರನೆಯ ದಿನ ನೀವು ನೋಡುವ ಮೊದಲ ವ್ಯಕ್ತಿಗೆ ಹೇರಳವಾಗಿ ಧನ ಕನಕಾದಿಗಳನ್ನು ಕೊಡಬೇಕು. ಅವನು ಅದರಿಂದ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಹೀಗಾದರೆ ನಿಮ್ಮ ರೋಗ ಗುಣಮುಖವಾಗುವುದು ಎಂದು ಹೇಳಿದನಂತೆ. ಆದರೆ ಇದು ಜ್ಯೋತಿಷಿಯ ಕುತಂತ್ರವಾಗಿತ್ತು. ರಾಜ ಅವನ ಮಾತನ್ನು ಒಪ್ಪಿಕೊಳ್ಳುತ್ತಾನೆ. ಮರುದಿನ ಸುಲ್ತಾನನು ಮೊಟ್ಟಮೊದಲು ನೋಡಿದ್ದು ನಗರವನ್ನು ಸ್ವತ್ಛಗೊಳಿಸುವ ಕಾರ್ಯದಲ್ಲಿ ಮಗ್ನನಾಗಿದ್ದ ಒಬ್ಬ ಜಾಡಮಾಲಿಯನ್ನು. ಕೂಡಲೇ ಅವನನ್ನು ಕರೆದು , ಬೆಳ್ಳಿ ಬಂಗಾರ , ವಜ್ರ, ವೈಢೂರ್ಯಗಳನ್ನು ದಾನವಾಗಿ ಕೊಟ್ಟ. ತಾನೇ ಮೊದಲು ಭೇಟಿಯಾಗಿ ಸಂಪತ್ತನ್ನು ಪಡೆಯಬೇಕೆಂಬ ಆಸೆಯಿಂದ ಬೆಳಗ್ಗೆ ಬೇಗನೇ ಅರಮನೆಗೆ ಬಂದಿದ್ದ ಜ್ಯೋತಿಷಿಗೆ ನಿರಾಶೆಯಾಯಿತಂತೆ.ಆಶ್ಚರ್ಯವೆಂದರೆ ಆ ಜಾಡಮಾಲಿಯು ಏನನ್ನು ತೆಗೆದುಕೊಳ್ಳಲೂ ನಿರಾಕರಿಸಿದ. ಜಾಡಮಾಲಿಯ ಕಾರ್ಯತತ್ಪರತೆ ಹಾಗೂ ನಿಷ್ಠೆಯನ್ನು ಮೆಚ್ಚಿಕೊಂಡ ರಾಜನು ಆ ಸಂಪತ್ತಿನಿಂದ ಮೆಹ್ತ್‌ರ್ ಮಹಲ್ ನಿರ್ಮಿಸಿದನಂತೆ. ಆದಿಲ್ ಶಾಹಿಗಳ ಕಾಲದಲ್ಲಿ ಜಾಡಮಾಲಿಗಳು ಎಂದರೆ ಅವರು ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಗಳಾಗಿದ್ದರು. ಅಂತಹ ಜಾಡಮಾಲಿಗಳ ಸ್ಮರಣೆಯಲ್ಲಿ ಇಂತಹದ್ದೊಂದು ಸುಂದರ ಕಲಾತ್ಮಕ ಸ್ಮಾರಕ ನಿರ್ಮಾಣವಾಗಿರುವುದು ಸೋಜಿಗದ ಸಂಗತಿ. ಇದಕ್ಕೇನಾದರೂ ವ್ಯಾಪಕ ಪ್ರಚಾರ ದೊರೆತಿದ್ದರೆ ಇದು ಜಾಡಮಾಲಿಗಳ ಪಾಲಿನ ಕಾಶಿಯಾಗಬಹುದಿತ್ತು. ಆದರೆ ಈ ಘಟನೆಗೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ. ಮತ್ತೂಂದು ಐತಿಹ್ಯದ ಪ್ರಕಾರ ಸುಲ್ತಾನ ಎರಡನೇ ಇಬ್ರಾಹಿಂ ಆದಿಲ್ ಷಾನಿಂದ ಅಪಾರ ಪ್ರಮಾಣದಲ್ಲಿ ದಾನ ಪಡೆದುಕೊಂಡ ಫಕೀರನೊಬ್ಬ ಈ ಮೆಹ್ತ್‌ರ್ ಮಹಲ್ ನಿರ್ಮಿಸಿದ ಎನ್ನುವ ಮಾತೂ ಇದೆ. ಮೆಹ್ತ್‌ರ್ ಮಹಲ್ ಕಲಾತ್ಮಕ ವಾಸ್ತುಶಿಲ್ಪದಿಂದ ಇಷ್ಟವಾಗುತ್ತದೆ. ಇದು ಎರಡು ಅಂತಸ್ತಿನ ಮಹಲ್ ಪ್ರಮಾಣಬದ್ಧತೆ, ಸೂಕ್ಷ್ಮ ಹಾಗೂ ಕಲಾತ್ಮಕ ಕುಸುರಿ ಕೆತ್ತನೆಗಳು , ತಾಂತ್ರಿಕ ನೈಪುಣ್ಯತೆ, ಶಿಲೆಯಲ್ಲಿನ ಕಲಾವೈಭವ ಕಣ್ಮನ ಸೆಳೆಯುತ್ತವೆ. ಅದರಲ್ಲೂ ಮೊದಲನೇ ಅಂತಸ್ತಿನಲ್ಲಿರುವ ಬಾಲ್ಕನಿಯ ಸುತ್ತಮುತ್ತ ಮಾಡಿರುವ ಕುಸುರಿ ಕೆತ್ತನೆಗಳು ನಯನ ಮನೋಹರವಾಗಿವೆ. ಕಮಾನಿನಾಕಾರದಲ್ಲಿರುವ ಪ್ರವೇಶದ್ವಾರ, ಕಟ್ಟಿಗೆಯ ಬಾಗಿಲು, ನಯವಾದ ಕಲಾಭಿವ್ಯಕ್ತಿ, 60 ಅಡಿ ಎತ್ತರದಲ್ಲಿರುವ ಎರಡು ಮಿನಾರುಗಳು, ಪ್ರವೇಶದ ನಂತರ ಇರುವ ಹಜಾರಾದಲ್ಲಿನ ವಾಸ್ತುವಿನ್ಯಾಸ, ವಿಭಿನ್ನ ಕಮಾನುಗಳ ರಚನೆ, ಮೇಲ್ಮಹಡಿಯಲ್ಲಿಗಳಲ್ಲಿ ಕಲಾತ್ಮಕವಾಗಿ ಕೊರೆದ ಕೆತ್ತನೆಗಳು ಮನಸ್ಸನ್ನು ಸೆಳೆಯುತ್ತವೆ. ಅದರಲ್ಲೂ ಬಾಲ್ಕನಿಯ ಮೇಲ್ಭಾಗದಲ್ಲಿ, ಮೇಲ್ಛಾವಣಿಗಳಿಗೆ ಆಧಾರಸ್ಥಂಬಗಳಾಗಿ ಕಟ್ಟಿರುವ ಚಾಚುಪೀಠಗಳಲ್ಲಿ ಸಿಂಹ ಮತ್ತು ಆನೆಗಳನ್ನು ಅದೆಷ್ಟು ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದೆಯೆಂದರೆ ಅದನ್ನು ನೀವು ಪ್ರತ್ಯಕ್ಷ್ಯವಾಗಿ ಕಣ್ಣಿಂದ ನೋಡಿದಾಗ ಮಾತ್ರ ನಿಮಗೆ ಕಲ್ಪಿಸಿಕೊಳ್ಳಲು ಸಾಧ್ಯ. ಬಾಲ್ಕನಿಯಲ್ಲಿರುವ ನಕ್ಷೆಗಳು, ಕಮಲದ ಹೂವುಗಳ ಕೆತ್ತನೆಗಳು, ಸಾಲುಗಳಲ್ಲಿ ನಿಂತುಕೊಂಡಿರುವ ಹಂಸಪಕ್ಷಿಗಳ ಸುಂದರ ಕುಸುರಿ ಕೆತ್ತನೆಗಳನ್ನು ನೋಡುತ್ತಿದ್ದರೆ ಹಳೇಬೀಡು ಹಾಗೂ ಬೇಲೂರಿನ ವಾಸ್ತುಶಿಲ್ಪಗಳು ನೆನಪಾಗದೇ ಇರದು. ಮೆಹ್ತ್‌ರ್ ಮಹಲ್ ಅನ್ನು ಇಂಡೋ ಸಾರ್ಶೇನಿಕ್ ಹಾಗೂ ಹಿಂದು ಶೈಲಿಯಲ್ಲಿ ಕಟ್ಟಲಾಗಿದೆ. ಮೆಹ್ತ್‌ರ್ ಮಹಲ್ ಒಳಗಡೆ ಮಸೀದಿ ಹಾಗೂ ಸುಂದರವಾದ ಉದ್ಯಾನವನವಿದೆ. ಇಲ್ಲಿ ಪ್ರತಿನಿತ್ಯ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಾರೆ. ಸದ್ಯ ಇದು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಸೇರಿದೆ. ಹನಮಂತ ಕೊಪ್ಪದ