Advertisement

ನಿಷ್ಕ್ರಿಯ ಉಪಗ್ರಹದ ರೀಎಂಟ್ರಿ ಪ್ರಕ್ರಿಯೆ ಯಶಸ್ವಿ

07:16 PM Mar 08, 2023 | Team Udayavani |

ನವದೆಹಲಿ:ನಿಷ್ಕ್ರಿಯಗೊಂಡಿದ್ದ ಉಪಗ್ರಹದ ನಿಯಂತ್ರಿತ ಮರುಪ್ರವೇಶ ಪ್ರಕ್ರಿಯೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಮಂಗಳವಾರ ರಾತ್ರಿಯ ವೇಳೆಗೆ “ಅತ್ಯಂತ ಸವಾಲಿನ’ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗಿದೆ.

Advertisement

ಮೇಘಾ-ಟ್ರೋಪಿಕ್ಸ್‌-1(ಎಂಟಿ-1) ಉಪಗ್ರಹವು ಭೂಮಿಯ ವಾತಾವರಣಕ್ಕೆ ನಿಧಾನವಾಗಿ ಮರುಪ್ರವೇಶ ಮಾಡಿ, ಪೆಸಿಫಿಕ್‌ ಸಮುದ್ರವನ್ನು ಸೇರಿತು. ಮೊದಲೇ ಗುರುತಿಸಲಾಗಿದ್ದ ನಿರೀಕ್ಷಿತ ಅಕ್ಷಾಂಶ ಮತ್ತು ರೇಖಾಂಶದ ಗಡಿಯೊಳಗೇ ಅದು ಪ್ರವೇಶಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಸ್ರೋ ಮತ್ತು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ 2011ರ ಅಕ್ಟೋಬರ್‌ 12ರಂದು ಈ ಉಪಗ್ರಹವನ್ನು ಉಡಾವಣೆ ಮಾಡಿದ್ದವು. 2022ರ ಆಗಸ್ಟ್‌ವರೆಗೂ ದತ್ತಾಂಶಗಳನ್ನು ರವಾನಿಸುತ್ತಿದ್ದ ಉಪಗ್ರಹ, ತದನಂತರ ಕ್ರಮೇಣ ಕ್ಷೀಣಗೊಳ್ಳುತ್ತಾ ಸಾಗಿ ಕೊನೆಗೆ ನಿಷ್ಕ್ರಿಯಗೊಂಡಿತು.

ಈ ಉಪಗ್ರಹವನ್ನು ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವಂತೆ ಮಾಡುವುದು ಇಸ್ರೋಗೆ ದೊಡ್ಡ ಸವಾಲೇ ಆಗಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಚೀನಾದ ಬಾಹ್ಯಾಕಾಶ ನಿಲ್ದಾಣ ಸೇರಿದಂತೆ ಬಾಹ್ಯಾಕಾಶದಲ್ಲಿರುವ ಯಾವುದೇ ವಸ್ತುವಿಗೂ ತೊಂದರೆಯಾಗದಂತೆ ಅದನ್ನು ಇಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ, ಯಾರಿಗೂ ಯಾವುದೇ ತೊಂದರೆ ಆಗದಂತೆ ಬಹಳಷ್ಟು ಜಾಗರೂಕತೆಯಿಂದ ಈ ಪ್ರಕ್ರಿಯೆಯನ್ನು ಇಸ್ರೋ ಯಶಸ್ವಿಯಾಗಿ ಮಾಡಿ ಮುಗಿಸಿದೆ.

ಉಪಗ್ರಹವನ್ನು ರೀಎಂಟ್ರಿ ಮಾಡಿಸುವ ಇಡೀ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿರುವ ಐಎಸ್‌ಟಿಆರ್‌ಎಸಿಯಲ್ಲಿರುವ ಮಿಷನ್‌ ಆಪರೇಷನ್ಸ್‌ ಕಾಂಪ್ಲೆಕ್ಸ್‌ನಿಂದಲೇ ನಡೆಸಲಾಯಿತು ಎಂದು ಇಸ್ರೋ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next