ಕಲಬುರಗಿ: ಎಲ್ಲ ವರ್ಗದ ಕಕ್ಷಿದಾರರ ಅನುಕೂಲಕ್ಕಾಗಿ ಹಾಗೂ ರಾಜೀ ಮೂಲಕ ಪ್ರಕರಣಗಳ ಇತ್ಯರ್ಥಕ್ಕಾಗಿ ಮುಂದಿನ ತಿಂಗಳು ಆಗಸ್ಟ್ 14ರಂದು ಮೆಗಾ ಲೋಕ್ ಅದಾಲತ್ ನಡೆಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಸುಬ್ರಹ್ಮಣ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ, ಆಳಂದ, ಅಫಜಲಪುರ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ ಮತ್ತು ಸೇಡಂ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳು ಅಂತಾ ಪರಿಗಣಿಸಿ ವಿವಿಧ ಪ್ರಕರಣಗಳಾದ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಅಸಲು ದಾವೆಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ ಮತ್ತು ಕಾನೂನಿನ್ವಯ ರಾಜೀ ಆಗಬಹುದಾದ ಎಲ್ಲ ತರಹದ ಪ್ರಕರಣಗಳನ್ನು ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ವಿವರಿಸಿದರು.
ಕಕ್ಷಿದಾರರು ಖುದ್ದಾಗಿ ಇಲ್ಲವೇ ಆನ್ ಲೈನ್, ವಿಡಿಯೋ ಕಾನ್ಫರೆನ್ಸ್, ಈ ಮೇಲ್, ಎಸ್ಎಂಎಸ್, ವಾಟ್ಸ್ಯಾಪ್, ಎಲೆಕ್ಟ್ರಾನಿಕ್ ಮೊಡ್ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಅತಿ ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶವಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಮೆಗಾ ಲೋಕ್ ಅದಾಲತ್ ನಲ್ಲಿ ರಾಜೀ ಸಂಧಾನ ಮಾಡಿಕೊಳ್ಳುವುದರಿಂದ ಕಕ್ಷಿದಾರರ ಸಮಯ, ಹಣ ಉಳಿಯುವುದಲ್ಲದೇ ಪರಸ್ಪರ, ಸಾಮರಸ್ಯ ಮುಂದುವರೆಯುತ್ತದೆ. ಆದ್ದರಿಂದ ಆಗಸ್ಟ್ 14 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರಗುವ ಮೆಗಾ ಲೋಕ್ ಅದಾಲತ್ ನ ಸದುಪಯೋಗ ಪಡೆದುಕೊಳ್ಳುವಂತೆ, ಕಕ್ಷಿದಾರರು ಹಾಗೂ ಸಾರ್ವಜನಿಕರಲ್ಲಿ ಕೋರಲಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಲೋಕ್ ಅದಾಲತ್ 27094 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈಗಲೂ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಳ್ಳಬೇಕೆಂಬ ನಿರೀಕ್ಷೆ ಹೊಂದಲಾಗಿದೆ ಎಂದು ನ್ಯಾಯಾಧೀಶರಾದ ಕೆ. ಸುಬ್ರಹ್ಮಣ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸುಶಾಂತ ಮಹಾವೀರ ಚೌಗಲೆ ಉಪಸ್ಥಿತರಿದ್ದರು.