ಮಣಿಪಾಲ: ಜನಸಾಮಾನ್ಯರಲ್ಲಿ ಯೋಗದ ಮಹತ್ವ ಹಾಗೂ ಅದರಿಂದ ದೇಹಕ್ಕೆ ಆಗುವ ಪ್ರಯೋಜನ ಕುರಿತು ಅರಿವು ಮೂಡಿಸುವುದು ಸೇರಿದಂತೆ ಯೋಗವನ್ನು ನಿತ್ಯ ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಲು ಆಗಸ್ಟ್ 12ರಿಂದ 14ರ ವರೆಗೆ ಜಿಲ್ಲಾಮಟ್ಟದ ಯೋಗಾಥಾನ್ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 10,000 ಜನರಿಗೆ ಏಕಕಾಲದಲ್ಲಿ ಒಂದೆಡೆ ತರಬೇತಿ ನೀಡಿ, ಯೋಗವನ್ನು ತಮ್ಮ ದೈನಂದಿನ ಚಟುವಟಿಕೆ ಯಾಗಿಸಿಕೊಂಡು ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದರು.
ಸಾರ್ವಜನಿಕರು ಯೋಗಾಥಾನ್ನಲ್ಲಿ ಭಾಗವಹಿಸಲು register@yogathon2022.com ನಲ್ಲಿ ಆನ್ಲೈನ್ ನೋಂದಣಿ ಹಾಗೂ ಕಾರ್ಯಕ್ರಮದ ಸ್ಥಳದಲ್ಲಿಯೇ ನೋಂದಣಿಗೂ(ಆಫ್ಲೈನ್) ಅವಕಾಶವಿದೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕಾಲೇಜುಗಳಲ್ಲಿ ಪ್ರಾಂಶುಪಾಲರ ಸಹಕಾರ ಪಡೆಯಬೇಕು ಎಂದು ಸೂಚನೆ ನೀಡಿದರು.
ಉಡುಪಿ ಜಿಲ್ಲೆ ಘೋಷಣೆಯಾಗಿ 25 ವರ್ಷ ಸಂಪೂರ್ಣವಾಗುತ್ತಿದ್ದು, ಇದರ ಅಂಗವಾಗಿ ವಿಶೇಷ ಕಾರ್ಯಕ್ರಮ ಗಳನ್ನು ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ| ಸತೀಶ್ ಆಚಾರ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.