Advertisement

ಗಡಿನಾಡ ಜನತೆಯ ಸಮಸ್ಯೆಗಳಿಗೆ ಕೈಗನ್ನಡಿಯಾದ ಸಭೆ

12:50 AM Jan 24, 2019 | Team Udayavani |

ಕಾಸರಗೋಡು: ಗಡಿನಾಡ ಜನತೆಯ ಮೂಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಡಳಿತ ಪರಿಷ್ಕಾರ ಆಯೋಗದ ಸಾರ್ವಜನಿಕ ಅಭಿಮತ ಸಂಗ್ರಹ ಸಭೆ ಕೈಗನ್ನಡಿಯಾಯಿತು.

Advertisement

ನಾಗರಿಕ ಸೇವೆ ಖಚಿತ ಪಡಿಸುವಲ್ಲಿ ಎಲ್ಲ ಕಚೇರಿಗಳಲ್ಲಿ ಸಹಾಯ ಕೇಂದ್ರಗಳು ಬೇಕು. ಇ-ಗವರ್ನೆನ್ಸ್‌ ಸೌಲಭ್ಯ ಫಲದಾಯಕ ವಾಗಬೇಕು.

ಅರ್ಜಿದಾರ ಒಂದು ವಿಷಯಕ್ಕೆ ಆಗಾಗ ಕಚೇರಿಗೆ ಬರಬೇಕಾಗಿ ಬರುವ ಪರಿಸ್ಥಿತಿಗೆ ಕೊನೆಯಾಗಬೇಕು. ಭಾಷಾ ಅಲ್ಪಸಸಂಖ್ಯಾಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಲಭಿಸಬೇಕು. 

ಅನೇಕ ಕಾಲಗಳಿಂದ ನೆಲೆನಿಂತಿರುವ ಭೂಹಕ್ಕು ಪತ್ರ ಸಮಸ್ಯೆಗೆ ಪರಿಹಾರ ಒದಗಬೇಕು, ಎಂಡೋಸಲ್ಫಾ ನ್‌ ಸಂತ್ರಸ್ತರ ಸಮಸ್ಯೆಗೆ ಕೊನೆಯಾಗಬೇಕು. 

ಇತ್ಯಾದಿಗಳು ಇಲ್ಲಿ ಮಂಡಿಸಲಾದ ಪ್ರಧಾನ ಸಮಸ್ಯೆಗಳಾಗಿದ್ದುವು.

Advertisement

ರಾಜ್ಯ ಸರಕಾರದ ಮಾಜಿ ಪ್ರಧಾನ ಕಾರ್ಯದರ್ಶಿ, ಆಯೋಗ ಸದಸ್ಯರಾದ ಸಿ.ಪಿ.ನಾಯರ್‌, ನೀಲಾ ಗಂಗಾಧರನ್‌, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿದ್ದ, ಆಯೋಗ ಸದಸ್ಯೆ ಕಾರ್ಯದರ್ಶಿ ಶೀಲಾ ಥಾಮಸ್‌ ಅವರ ನೇತೃತ್ವದಲ್ಲಿ ಅಭಿಮತ ಸಂಗ್ರಹ ಸಭೆ ಜರಗಿತು.

ವಿವಿಧ ಮಂಡನೆಗಳು : 
ವಿವಿಧ ಕಾರ್ಮಿಕ ಕಲ್ಯಾಣನಿಧಿ ಮಂಡಳಿಗಳನ್ನು ದಕ್ಷಗೊಳಿಸುವಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಆಯೋಗಕ್ಕೆ ಮನವಿ ಸಲ್ಲಿಸಿದರು. ಪರಿಶಿಷ್ಟ ಜನಾಂಗದಲ್ಲಿ ಜನಸಂಖ್ಯೆ 4 ಪಟ್ಟು ಅಧಿಕವಾಗಿ ಹೆಚ್ಚಿದ್ದರೂ, ಇವರ ಅಭಿವೃದ್ಧಿಗೆ ಸಂಬಂಧಿಸಿದ ಕಚೇರಿಗಳ ಮತ್ತು ಸಿಬಂದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಇದು ಅನೇಕ ಅಭಿವೃದ್ಧಿ ಯೋಜನೆಗಳ ಜಾರಿಗೆ ತಡೆಯಾಗುತ್ತಿದೆ ಎಂಬ ಅಭಿಮತ ಕೇಳಿಬಂದಿದೆ.

ಜನತೆಯ ಸೇವೆಯ ವಿಚಾರದಲ್ಲಿ ಸಿಬಂದಿಯ ಮನೋಧರ್ಮದಲ್ಲಿ ಬದಲಾವಣೆ ತರಬೇಕಾದುದು ಅನಿವಾರ್ಯ. ಈ ವಿಷಯದಲ್ಲಿ ಆಯೋಗ ನೇರ ಮಧ್ಯಸ್ಥಿಕೆ ವಹಿಸಬೇಕು ಎಂದು ಶಾಸಕ ಎನ್‌.ಎ.ನೆಲ್ಲಿಕುನ್ನು ಈ ಸಂದರ್ಭ ಅಭಿಪ್ರಾಯಪಟ್ಟರು.

ಕೆಲವು ಸಿಬಂದಿಗಳು ತಿಳಿಸುವ ತಾಂತ್ರಿಕ ಕಾರಣಗಳಿಂದಾಗಿ ಅನೇಕ ಅರ್ಹರಿಗೆ ಯೋಜ ನೆಗಳ ಪ್ರಯೋಜನ ಸಿಗದೇ ಹೋಗುತ್ತಿದೆ. ಇದು ಪರಿಹಾರವಾಗಬೇಕು ಎಂದು ಶಾಸಕ ಕೆ.ಕುಂಞಿರಾಮನ್‌ ತಿಳಿಸಿದರು.

ಸಿಬಂದಿಗಳ ಕಡೆಯಿಂದ ಮನವಿಗಳು : 
ಸಿಬಂದಿಗಳ ಮೂಲಕ ಅನೇಕ ಮನವಿಗಳು ಈ ವೇಳೆ ಮಂಡನೆಗೊಂಡವು. ಕೆಲವು ಸಿಬಂದಿಗಳಿಗೆ ಸೂಕ್ತ ತರಬೇತಿ ಲಭಿಸದೇ ಇರುವ ಕಾರಣ ಕಚೇರಿ ವ್ಯವಹಾರಗಳಿಗೆ ತೊಡಕಾಗುತ್ತಿದೆ ಎಂಬ ಸಮಸ್ಯೆ ಇಲ್ಲಿ ವ್ಯಕ್ತವಾಗಿದೆ. ಇತರ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುವ ವಿವಿಧ ಇಲಾಖೆಗಳ ಸಿಬಂದಿಗೆ ಜಿಲ್ಲೆಯಲ್ಲಿ ಸೂಕ್ತ ವಸತಿ ಸೌಲಭ್ಯ ಲಭಿಸಬೇಕು ಎಂಬ ಆಗ್ರಹ ಆಯೋಗದ ಮುಂದೆ ಮಂಡನೆಯಾಗಿತ್ತು.

ಜನ ಅಧಿಕ ಪ್ರಮಾಣದಲ್ಲಿ ಸಂಪರ್ಕಿಸುವ ಜಿಲ್ಲಾಧಿಕಾರಿ ಕಚೇರಿ ಆವರಣದ ಕಚೇರಿಗಳನ್ನು ಕೆಳ ಅಂತಸ್ತಿಗೆ ಸ್ಥಳಾಂತರಗೊಳಿಸಬೇಕು ಎಂದು ಆಯೋಗ ತಿಳಿಸಿದೆ. ಕಚೇರಿಗಳಿಗೆ ಆಗಮಿಸುವಮಂದಿಗೆ ಹೆಲ್ಪ್ ಡೆಸ್ಕ್ನ ಸಹಾಯ ಸಿಗುವಂತಾಗಬೇಕು. ಕಡತಗಳು ರಾಶಿ ಬೀಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮೋನಿಟರಿಂಗ್‌ ಕ್ರಮಬದ್ಧವಾಗಿ ನಡೆಯಬೇಕು ಎಂದು ಆಯೋಗ ತಿಳಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗೆ ಆದೇಶ ನೀಡಿದೆ.

ಚೆಂಞರ ಪುನಶ್ಚೇತನ ಜಾಗದಲ್ಲಿ ವಾಸಿಸುತ್ತಿರುವವರ ಭೂಹಕ್ಕುಪತ್ರ ಸಂಬಂಧ ತೆರಿಗೆ ಸ್ವೀಕಾರ ನಡೆಸದೇ ಇರುವ ಸಂಬಂಧ ದೂರು ಇಲ್ಲಿ ಸಲ್ಲಿಕೆಯಾಗಿದೆ.

ಒಂದು ತಿಂಗಳಲ್ಲಿ ಈ ಕುರಿತು ಪರಿಹಾರ ಒದಗಿಸುವಂತೆ ಆಯೋಗ ಆದೇಶ ನೀಡಿದೆ. ಜಿಲ್ಲೆಯಲ್ಲಿ ಮಂಡನೆಗೊಂಡ ಅನೇಕ ಸಮಸ್ಯೆಗಳನ್ನು ಆಯೋಗ ಗಂಭೀರವಾಗಿ ಪರಿಶೀಲನೆ ನಡೆಸಿತ್ತು. ಈ ಕುರಿತು ಸಮಗ್ರ ಅಧ್ಯಯನ ನಡೆಸಿ ಸೂಕ್ತ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದೆ.

4ನೇ ಸಭೆ : 
ಈ ಆಯೋಗ ಅನುಷ್ಠಾನಕ್ಕೆ ಬಂದ ಮೇಲೆ ರಾಜ್ಯದಲ್ಲಿ ನಡೆಯುತ್ತಿರುವ 4ನೇ ಸಭೆ ಈ ಮೂಲಕ ಕಾಸರಗೋಡಿನಲ್ಲಿ ನಡೆದಿದೆ. ತಿರುವನಂತಪುರ, ಆಲಪ್ಪುಳ, ಮಲಪ್ಪುರಂ ಜಿಲ್ಲೆಗಳಲ್ಲಿ ಈ ಹಿಂದೆ ಸಭೆ ಜರುಗಿತ್ತು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌, ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು, ಹೆಚ್ಚುವರಿ ಕಾರ್ಯದರ್ಶಿ ಸಿ.ಜಿ.ಸುರೇಶ್‌ ಕುಮಾರ್‌, ಹೆಚ್ಚುವರಿ ದಂಡನಾಧಿಕಾರಿ ಎನ್‌.ದೇವಿದಾಸ್‌, ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಚೆಂಗಳ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಾಹಿನಾ ಸಲೀಂ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕರು, ಜಿಲ್ಲಾ ಮಟ್ಟದ ಸಿಬಂದಿ ಉಪಸ್ಥಿತರಿದ್ದರು.

ಆಯೋಗದ ಆದೇಶಗಳು
ಜನತೆಯ ಅಭಿಮತ ಸ್ವೀಕರಿಸಿದ ಆಯೋಗ ತನ್ನ ಆದೇಶಗಳನ್ನು ಸಭೆಯಲ್ಲಿ ಮಂಡಿಸಿದೆ. ಕಂದಾಯ, ಸ್ಥಳೀಯಾಡಳಿತ, ಕೃಷಿ ಸಹಿತ ಜನ ದಿನನಿತ್ಯ ಆಸರೆ ಪಡೆಯುವ ಇಲಾಖೆಗಳ ಸಿಬಂದಿ ಕೊರತೆ ಪರಿಹಾರವಾಗಬೇಕು. ಸ್ಟಾಫ್‌ ಪ್ಯಾಟರ್ನ್ ಕಾಲಕ್ಕೆ ತಕ್ಕಂತೆ ಪರಿಷ್ಕಾರಗೊಳ್ಳಬೇಕು ಎಂದು ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next