Advertisement

ಅಜ್ಜಂಪುರ ರೈತರ ಮನವೊಲಿಕೆಗೆ ಸಭೆ

03:11 PM May 26, 2022 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಿರುವ ಅಜ್ಜಂಪುರದ ರೈತರ ಮನವೊಲಿಸುವ ಸಂಬಂಧ ಮೇ 31ರಂದು ಸೊಲ್ಲಾಪುರದಲ್ಲಿ ಸಭೆ ಕರೆಯಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್‌ ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ತಿಳಿಸಿದರು.

Advertisement

ನಗರದ ಪ್ರವಾಸಿಮಂದಿರಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಅಜ್ಜಂಪುರ ರೈತರು ಅಡ್ಡಿ ಮಾಡುತ್ತಿರುವ ಬಗ್ಗೆ ಸಮಿತಿ ನಿಯೋಗ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿದ ವೇಳೆ ಈ ಭರವಸೆ ವ್ಯಕ್ತವಾಗಿದೆ ಎಂದರು.

ಮೇ 31ರಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಸಭೆ ಕರೆಯಲಾಗುವುದು. ಅಂದಿನ ಸಭೆಯಲ್ಲಿ ರೈತರ ಮನವೊಲಿಸಿ ಜೂನ್‌ ಒಂದರಿಂದಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಅಜ್ಜಂಪುರ ರೈತರು ಕಾಮಗಾರಿಗೆ ತಡೆ ಮಾಡುತ್ತಿರುವ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಲುವೆ ನಿರ್ಮಾಣಕ್ಕೆ ತೊಡಕಾಗಿದೆ. ಅಬ್ಬಿನಹೊಳಲು ಬಳಿ 1.9 ಕಿಮೀ ಹಾಗೂ ಸೊಲ್ಲಾಪುರ, ಕಾಟನಕೆರೆ, ಚಿಣ್ಣಾಪುರದ ಬಳಿ 8 ಕಿಮೀ ಉದ್ದದ ಕಾಮಗಾರಿಗೆ ತಡೆ ಮಾಡಲಾಗಿದೆ. ಅಬ್ಬಿನಹೊಳಲು ಕಾಮಗಾರಿ ಪೂರ್ಣಗೊಂಡರೆ ಹೊಳಲ್ಕೆರೆ ತಾಲೂಕಿನ ಕೆರೆಗಳನ್ನು ಈ ವರ್ಷವೇ ತುಂಬಿಸಬಹುದು. ಅದೇ ರೀತಿ ತುಮಕೂರು ಶಾಖಾ ಕಾಲುವೆಯ 8 ಕಿಮೀ ಕಾಮಗಾರಿ ಪೂರ್ಣಗೊಂಡಲ್ಲಿ ಎರಡು ಮೋಟಾರು ಪಂಪುಗಳ ಮೂಲಕ ವಿವಿ ಸಾಗರ ಜಲಾಶಯ ಭರ್ತಿ ಮಾಡಬಹುದು ಎಂದರು.

2021ರ ಮಾರ್ಚ್‌ 25ರಂದು ಕೇಂದ್ರ ಜಲಶಕ್ತಿ ಮಂತ್ರಾಲಯದ 15ನೇ ಇನ್ವೆಸ್ಟ್‌ಮೆಂಟ್‌ ಕ್ಲಿಯರೆನ್ಸ್‌ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 16,125 ಕೋಟಿ ರೂ.ಗಳ ಅಂದಾಜು ವೆಚ್ಚ ಪರಿಗಣಿಸಿ 2023-24 ಅಂತ್ಯಕ್ಕೆ ಪೂರ್ಣಗೊಳಿಸುವ ಷರತ್ತಿಗೆ ಒಳಪಟ್ಟು ಸಮ್ಮತಿಸಿದೆ. ಭವಿಷ್ಯದಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವುದರಿಂದ ಕಾಮಗಾರಿ ಪೂರ್ಣಗೊಳಿಸುವ ಅಗತ್ಯವಿದೆ ಎಂಬ ಅಂಶವನ್ನು ಹೋರಾಟ ಸಮಿತಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರಮೇಶ್‌, ತರೀಕೆರೆ ಉಪವಿಭಾಗಾಧಿಕಾರಿಯವರನ್ನು ಸಂಪರ್ಕಿಸಿ ಮೇ 31ರಂದು ರೈತರ ಸಭೆ ನಡೆಸಿ ಜೂನ್‌ ಒಂದರಿಂದಲೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳವಂತೆ ಸೂಚಿಸಿದರು.

Advertisement

ಜಿಲ್ಲಾಕಾರಿಗಳ ತಕ್ಷಣದ ಸ್ಪಂದನೆಗೆ ಹೋರಾಟ ಸಮಿತಿ ಆಭಾರಿಯಾಗಿದೆ. ಮೇ 31ರಂದು ಸೊಲ್ಲಾಪುರದಲ್ಲಿ ನಡೆಯವ ಸಭೆಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಭಾಗವಹಿಸುವ ಬಗ್ಗೆ ಇನ್ನೆರೆಡು ದಿನಗಳಲ್ಲಿ ನಿರ್ಣಯಿಸಲಾಗುವುದೆಂದು ಲಿಂಗಾರೆಡ್ಡಿ ತಿಳಿಸಿದರು.

ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ದಯಾನಂದ, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ. ಶೇಖರ್‌, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್‌ಬಾಬು, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲೂಕು ಅಧ್ಯಕ್ಷ ಹಂಪನಯ್ಯನಮಾಳಿಗೆ ಧನಂಜಯ, ಮುದ್ದಾಪುರ ನಾಗರಾಜ್‌, ಚಿಕ್ಕಪ್ಪನಹಳ್ಳಿ ಷಣ್ಮುಖ ಸುದ್ದಿಗೋಷ್ಠಿಯಲ್ಲಿದ್ದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ನೀಡಿರುವ ಭರವಸೆ ಆಶಾದಾಯಕವಾಗಿದೆ. ಜೂನ್‌ ಒಂದರಿಂದ ಕಾಲುವೆ ನಿರ್ಮಾಮದ ಕೆಲಸ ಆರಂಭವಾದಲ್ಲಿ ಈ ವರ್ಷವೇ ಹೊಳಲ್ಕೆರೆ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸಬಹುದು. ಭದ್ರಾ ಮೇಲ್ದಂಡೆ ಕಾಮಗಾರಿಗೆ ಇರುವ ಅಡೆತಡೆ ನಿವಾರಿಸಿ ಕಾಮಗಾರಿ ಚುರುಕಾಗಬಹುದು. ಈ ಸಂಬಂಧ ಜೂನ್‌ 2ರ ಒಳಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗುವುದು. – ಟಿ. ನುಲೇನೂರು ಎಂ. ಶಂಕರಪ್ಪ, ಹೋರಾಟ ಸಮಿತಿ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next