Advertisement

ಧರ್ಮಾಭಿಪ್ರಾಯ ಕೇಳಲು ಸಭೆ

11:19 AM Jan 28, 2018 | Team Udayavani |

ಬೆಂಗಳೂರು: ವೀರಶೈವ -ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿವಾದ ಕುರಿತು ಸರ್ಕಾರದಿಂದ ರಚನೆಯಾಗಿರುವ ಸಮಿತಿ ವಿಧಾನಸಭೆ ಚುನಾವಣೆಗೂ ಮೊದಲೇ ವರದಿ ನೀಡುವ ಸಾಧ್ಯತೆ ಇದೆ. ಶನಿವಾರ ಎರಡನೇ ಸಭೆ ನಡೆಸಿರುವ ಸಮಿತಿ ಸದಸ್ಯರು, ಪ್ರತ್ಯೇಕ ಧರ್ಮದ ಮಾನ್ಯತೆಗೆ ಮನವಿ ಸಲ್ಲಿಸಿರುವ ಲಿಂಗಾಯತ ಮತ್ತು ವೀರಶೈವ ಮುಖಂಡರಿಂದ ಫೆ.2, 3ರಂದು ಅಭಿಪ್ರಾಯ ಕೇಳಲು ನಿರ್ಧರಿಸಿದ್ದಾರೆ. 

Advertisement

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ನಡೆದ ಸಭೆ, ಈಗಾಗಲೇ ಪ್ರತ್ಯೇಕ ಧರ್ಮ ಮಾನ್ಯತೆ ಹಾಗೂ ಮಾನ್ಯತೆಗೆ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಲ್ಲಿಸಿರುವ ಅಹವಾಲುಗಳನ್ನು ಆಧರಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಳಂಬ ಮಾಡದೇ ಆದಷ್ಟು ಬೇಗ ವರದಿ ನೀಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. 

ಸಮಿತಿಗೆ ಆರಂಭದಲ್ಲಿ 36 ಅರ್ಜಿಗಳುಗಳು ಬಂದಿದ್ದವು. ಜ.25ರವರೆಗೂ ಜನರು ತಮ್ಮ ಬಳಿ ಇರುವ ಮಾಹಿತಿಯನ್ನು ಸಮಿತಿಗೆ ಒದಗಿಸಲು ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಹೊಸದಾಗಿ 16 ಜನ ಮಾಹಿತಿ ಒದಗಿಸಿದ್ದಾರೆ. ಹೊಸದಾಗಿ ಬಂದಿರುವ ದಾಖಲೆಗಳನ್ನು ಸಮಿತಿ ಸದಸ್ಯರು ಒಂದು ವಾರದಲ್ಲಿ ಅಧ್ಯಯನ ಮಾಡಿ ಮುಂದಿನ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿದೆ.

ವೈಯಕ್ತಿಕ ಅಭಿಪ್ರಾಯವೇ ಹೆಚ್ಚು: ಅನೇಕರು ಪ್ರತ್ಯೇಕ ಧರ್ಮದ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಿ ಪತ್ರ ಬರೆದವರೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಸಮಿತಿ ನಿರೀಕ್ಷೆ ಮಾಡಿದಷ್ಟು ದಾಖಲೆಗಳು ಸಲ್ಲಿಕೆಯಾಗಿಲ್ಲ ಎಂಬ ಅಭಿಪ್ರಾಯ ಸದಸ್ಯರಲ್ಲಿ ವ್ಯಕ್ತವಾಗಿದೆ.

ದೊರೆತಿರುವ ದಾಖಲೆಗಳನ್ನು ಸಮಿತಿ ಫೆಬ್ರವರಿ 2 ಮತ್ತು 3 ರ ಸಭೆಯಲ್ಲಿ ವ್ಯಕ್ತವಾಗುವ ಸಾರ್ವಜನಿಕರ ಅಭಿಪ್ರಾಯ ಕೇಳಿ, ಫೆಬ್ರವರಿ 5 ಮತ್ತು 6 ರಂದು ಮತ್ತೂಂದು ಸಭೆ ನಡೆಸುವ ಕುರಿತಂತೆಯೂ ಚರ್ಚೆ ನಡೆಸಿದ್ದಾರೆ. ಆದಷ್ಟು ಬೇಗ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲು ತಜ್ಞರ ಸಮಿತಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. 

Advertisement

ಬಹಿರಂಗ ಚರ್ಚೆ ಬೇಡ: ವರದಿ ನೀಡಲು ಆರು ತಿಂಗಳು ಸಮಯ ಕೇಳಿರುವ ತಜ್ಞರ ಸಮಿತಿಗೆ ಫೆಬ್ರವರಿ ಅಂತ್ಯದೊಳಗೆ ವರದಿ ನೀಡುವಂತೆ ಅಲ್ಪ ಸಂಖ್ಯಾತ ಆಯೋಗದ ಮೂಲಕ ಸರ್ಕಾರ ತಜ್ಞರ ಸಮಿತಿಗೆ ಅನೌಪಚಾರಿಕವಾಗಿ ಸೂಚನೆ ನೀಡಿದೆ ಎನ್ನಲಾಗಿದ್ದು, ದಿನಾಂಕ ವಿಸ್ತರಣೆ ಅಥವಾ ಮುಂಚಿತವಾಗಿ ವರದಿ ನೀಡುವ ಬಗ್ಗೆ ಬಹಿರಂಗವಾಗಿ ಚರ್ಚಿಸದೇ ಸಮಿತಿ ಕಾಲ ಮಿತಿಯೊಳಗೆ ವರದಿ ನೀಡಲು ಆಲೋಚನೆ ನಡೆಸಿದೆ ಎಂದು ತಿಳಿದು ಬಂದಿದೆ. 

ಸಭೆಯ ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌, ಇಂದು ಎರಡನೇ ಸಭೆ ಮಾಡಿದ್ದೇವೆ. 16 ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಫೆಬ್ರವರಿ 2 ಮತ್ತು 3 ರಂದು ಮೌಖೀಕವಾಗಿ ಅಭಿಪ್ರಾಯ ಪಡೆಯಲಾಗುತ್ತದೆ. ವರದಿ ನೀಡಲು ಆರು ತಿಂಗಳು ಕಾಲಾವಕಾಶ ಕೇಳಿದ್ದೇವೆ. ಶೀಘ್ರ ವರದಿ ನೀಡಬೇಕೆಂದು ಅಲ್ಪ ಸಂಖ್ಯಾತ ಆಯೋಗಕ್ಕೆ ಸರ್ಕಾರ ಸೂಚನೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

100 ಕೋಟಿ ಮಾನನಷ್ಟ ಮೊಕದ್ದಮೆ ಎಚ್ಚರಿಕೆ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರು ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ವರದಿ ಸಲ್ಲಿಸಿದರೆ, ಸುಪ್ರೀಂ ಕೋರ್ಟ್‌ನಲ್ಲಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆಂಗಳೂರಿನ ಕೆ.ಎಂ.ಸತೀಶ್‌ ಎಂಬುವವರು ತಮ್ಮ ವಕೀಲ ಚಿದಾನಂದ ಅವರ ಮೂಲಕ ಲೀಗಲ್‌ ನೋಟಿಸ್‌ ನೀಡಿದ್ದಾರೆ.

“ಹರಪ್ಪ, ಮೆಹಂಜೊದಾರೊ ಕಾಲದಿಂದಲೂ ವೀರಶೈವ ಧರ್ಮ ಬೆಳೆದು ಬಂದಿದ್ದು, ಮೂಲ ದಾಖಲೆಗಳನ್ನು ಮರೆಮಾಚಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಲಾಭಕ್ಕೆ ನಿಮ್ಮನ್ನು ಬಳಸಿಕೊಳ್ಳುತ್ತಿದ್ದು,

ಸಾವಿರಾರು ವರ್ಷ ಇತಿಹಾಸ ಇರುವ ಒಂದು ಧರ್ಮದ ಬಗ್ಗೆ ಆರು ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿಯಾಗಿ ಉತ್ತಮ ಹೆಸರು ಪಡೆದಿರುವ ನೀವು ಈ ವಿಷಯದಲ್ಲಿ ರಾಜಕೀಯದ ದಾಳವಾಗಬೇಡಿ,’ ಎಂದು ಸತೀಶ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next