ದಾವಣಗೆರೆ: ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮೇಲಿನ ಭ್ರಷ್ಟಾಚಾರ ಆಪಾದನೆ ಹಾಗೂ ಕೋಡಿಹಳ್ಳಿ ಅವರನ್ನು ಸಂಘದಿಂದ ಉಚ್ಚಾಟಿಸಲಾಗಿದೆ ಎಂಬ ಹೇಳಿಕೆ ವಿಚಾರವಾಗಿ ಚರ್ಚಿಸಲು ಜೂ. 6ರಂದು ಬೆಂಗಳೂರಿನಲ್ಲಿರುವ ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ರಾಜ್ಯ ಪ್ರಧಾನ ಕಾರ್ಯದರ್ಶಿ ಬೈರೇಗೌಡ, ಕಾರ್ತಿಕ್, ಮಾಲತೇಶ್ ಪೂಜಾರಿ, ಮಹಾದೇವಿ ಎಸ್. ಬೇನಾಳಮಠ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಮಹಾದೇವಿ ಎಸ್. ಬೇನಾಳಮಠ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ನೌಕರರ ಪ್ರತಿಭಟನೆ ಹಿಂದಕ್ಕೆ ಪಡೆಯಲು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ 35 ಕೋಟಿ ರೂ. ಹಣದ ಬೇಡಿಕೆ ಇಟ್ಟಿದ್ದರು ಎಂಬ ಆಪಾದನೆ ಕೇಳಿಬಂದಿದೆ. ಈ ಆಪಾದನೆಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಈ ಬಗ್ಗೆ ಪರಾಮರ್ಶೆ ಆಗಬೇಕಾಗಿದೆ. ಈ ಕುರಿತು ಸರ್ಕಾರವೇ ತನಿಖೆ ನಡೆಸಬೇಕೆಂದು ಕೋರಿದ್ದೇವೆ. ಮೇಲ್ನೋಟಕ್ಕೆ ಈ ಆಪಾದನೆ ಹಿಂದೆ ಕೆಲವರ ರಾಜಕೀಯ ದುರುದ್ದೇಶ ಇರುವ ಸಾಧ್ಯತೆ ಇದೆ. ಇನ್ನು ಈ ವಿಚಾರವಾಗಿ ಕೋಡಿಹಳ್ಳಿಯವರು, ಒಂದು ವೇಳೆ ತಾವು ಹಣ ಪಡೆದದ್ದು ಸಾಬೀತಾದರೆ ಅಂದೇ ಸಂಘಟನೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಈ ಕುರಿತು ಎಲ್ಲರೂ ಸೇರಿ ಚರ್ಚಿಸಬೇಕಾಗಿದ್ದು, ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಚಿನ್ನಸಮುದ್ರ ಶೇಖರ್ ನಾಯ್ಕ ಮಾತನಾಡಿ, ಶಿವಮೊಗ್ಗದಲ್ಲಿ ನಡೆದಿರುವ ಸಭೆಯಲ್ಲಿ ಹಾಜರಾದ ಎಚ್. ಆರ್. ಬಸವರಾಜಪ್ಪ ಸೇರಿದಂತೆ ವಿವಿಧ ಮುಖಂಡರು ಸೇರಿ ಯಾವುದೇ ಕಾರಣ ಇಲ್ಲದೆ ಪ್ರೊ| ನಂಜುಂಡಸ್ವಾಮಿ ಬಣದ ಸಂಘಟನೆಯಿಂದ ಉಚ್ಚಾಟನೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಉಚ್ಛಾಟನೆ ಅಸಿಂಧುವಾಗಿದೆ. ಈ ಹಿಂದೆ ಪ್ರೊ| ನಂಜುಂಡಸ್ವಾಮಿ ಅವರಿದ್ದಾಗ ಅವರಿಂದಲೇ ಉಚ್ಚಾಟನೆ ಆಗಿದ್ದ ವ್ಯಕ್ತಿಗಳು ಸಭೆ ನಡೆಸಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯ ಸಮಿತಿಯ ಅನೇಕರು ಆ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಆಕ್ಷೇಪಿಸಿದರು. ರೈತ ಪ್ರಮುಖರಾದ ಶತಕೋಟಿ ಬಸವರಾಜಪ್ಪ, ದಾಗಿನಕಟ್ಟೆ ಬಸವರಾಜ್, ಭರಮಪ್ಪ ಮುಸ್ಟೂರು, ಹುಚ್ಚವ್ವನಹಳ್ಳಿ ಗಣೇಶ್, ಚೇತನಕುಮಾರ್, ಕೆ. ಬಾಬು ರಾವ್, ಕರೇಕಟ್ಟೆ ಕಲೀಂವುಲ್ಲಾ, ಗಂಗನಕಟ್ಟೆ ರೇವಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.