Advertisement

ಕಾರ್ಯಕರ್ತೆಯರ ಜೀವನ ಬೀದಿಗೆ

03:41 PM Oct 04, 2020 | Suhan S |

ಕಲಬುರಗಿ: ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯ ಕರಡು ನೀಡಿ ಚರ್ಚಿಸದೇ ಏಕರೂಪದಲ್ಲಿ ಜಾರಿಗೆ ತರಲಾಗುತ್ತಿದ್ದು, ಇದರಿಂದ ಅಂಗನವಾಡಿ ಸೇರಿದಂತೆ ಲಕ್ಷಾಂತರ ಕಾರ್ಯಕರ್ತೆಯರ ಜೀವನ ಬೀದಿಗೆ ಬರಲಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಹೈದ್ರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್‌ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಶಾಲಾ ಪೂರ್ವ ಶಿಕ್ಷಣದ ಕುರಿತು ಹೊಸ ಶಿಕ್ಷಣ ನೀತಿ ಹೇಳುವುದೇನು’ ವಿಷಯದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿ ಅನ್ವಯ ಬಿಸಿಯೂಟವನ್ನು ಖಾಸಗಿ ಧಾರ್ಮಿಕ ಸಂಸ್ಥೆಗಳಿಗೆ ನೀಡಿ, ಅಂಗನವಾಡಿಗಳನ್ನೂ ಮುಚ್ಚುವ ಸ್ಪಷ್ಟ ಉದ್ದೇಶ ಇದರಲ್ಲಿದೆ. ಇದರಿಂದ ದೇಶದ 28 ಲಕ್ಷಅಂಗನವಾಡಿ ಕಾರ್ಯಕರ್ತೆಯರು ಹಾಗೂ 26 ಲಕ್ಷ ಬಿಸಿಯೂಟ ನೌಕರರ ಬದುಕು ಬೀದಿಗೆ ಬೀಳುತ್ತದೆ ಎಂದರು.

ಅಸಾಂವಿಧಾನಿಕ ಮಾರ್ಗದ ಮೂಲಕ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ಹೊಸ ಕರಡು ಬಗ್ಗೆ ಆರೋಗ್ಯಕರ ಚರ್ಚೆಯೇ ಮಾಡಿಲ್ಲ. ಈ ನೀತಿಯಲ್ಲಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಅವರ ಕೌಶಲ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಇದು ಸರಿಯಾದ ಆಯ್ಕೆಯಲ್ಲ. ಈಗ ಇರುವ ಕಾರ್ಯಕರ್ತೆಯರನ್ನು ಖಾಯಂ ಆಗಿ ಉಳಿಸಿಕೊಂಡು, ಮುಂದಿನ ನೇಮಕಾತಿಗಳಲ್ಲಿ ಮಾತ್ರ ಶಿಕ್ಷಣ- ಕೌಶಲದ ನಿಯಮ ಅನುಸರಿಸಬೇಕೆಂದು ಎಂದು ಆಗ್ರಹಿಸಿದರು.

ಕೆಂಪು ಬಾವುಟ ಹಿಡಿದು ಹೋರಾಟ ಮಾಡುವ ನಾವು ಕೂಡ ಈಗ ಅಂಗನವಾಡಿಯಲ್ಲಿ ಸೀಮಂತ ಮಾಡುವ ಸ್ಥಿತಿ ಬಂದಿದೆ. ಹೊಸ ಶಿಕ್ಷಣ ನೀತಿಯಲ್ಲಿ ಆರ್‌ಎಸ್‌ಎಸ್‌, ಹಿಂದೂವಾದದ ಆಶಯಗಳಿವೆ.ನಾವೇನು ಉದ್ದೇಶ ಪೂರ್ವಕವಾಗಿ ಇದನ್ನು ವಿರೋಧಿಸುತ್ತಿಲ್ಲ. ಆದರೆ, ಚರ್ಚೆ ಇಲ್ಲದೇ ಜಾರಿಗೆ ತಂದ ನೀತಿ ದೇಶವನ್ನು ಹಾಳು ಮಾಡುತ್ತದೆ ಎಂದು ಹೇಳಿದರು.

Advertisement

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆಸೋಮಶೇಖರ ಮಾತನಾಡಿ, ಸದ್ಯ ಹೊಸ ಶಿಕ್ಷಣ  ನೀತಿಯ ಆಯಾಮಗಳನ್ನು ಪರಾಮರ್ಶಿಸಬೇಕಿದೆ. ನಮ್ಮ ಸಾಂವಿಧಾನಿಕ ಆಶಯಗಳಾದ ಸಮಾನತೆ, ಜಾತ್ಯತೀತ ನಿಲುವುಗಳನ್ನು ಇದು ಒಳಗೊಂಡಿದೆಯೇ ಎಂಬ ಬಗ್ಗೆಯೂ ಚರ್ಚೆ ಅಗತ್ಯವಿದೆ. ಗ್ರಾಮೀಣ ಬಡ ಮಕ್ಕಳನ್ನು ಪೌಷ್ಟಿಕವಾಗಿ ಬೆಳೆಸುವ ಜತೆಗೆ, ಶಿಕ್ಷಣಕ್ಕೆ ಅಣಿ ಮಾಡಬೇಕು ಎಂಬ ಉದ್ದೇಶದಿಂದ ಅಂಗನವಾಡಿಗಳನ್ನು ಆರಂಭವಾಗಿವೆ. ಆದರೆ, ಇವುಗಳ ಉಳಿವಿನ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ತಿಳಿಸಿದರು.

“ಯಾವುದೇ ಸರ್ಕಾರ ಒಂದು ನೀತಿಯನ್ನು ಜಾರಿಗೆ ತರುವಾಗ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಅಂಶಗಳನ್ನು ಪರಿಗಣಿಸಬೇಕು. ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ನೀತಿಯನ್ನು ಪ್ರಕಟಿಸಿ ಜನಸಮುದಾಯದಲ್ಲಿ ಚರ್ಚೆಗೆ ಇಡಬೇಕು. ಸಾಧಕ-ಬಾಧಕ ಚರ್ಚೆಗಳ ಬಳಿಕ ಸಾಂವಿಧಾನಿಕ ಪದ್ಧತಿಯಲ್ಲೇ ಜಾರಿಗೆ ತರಬೇಕು. ಆದರೆ, ಕೇಂದ್ರವು ಅನುಷ್ಠಾನಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿ ಈ ಆರೋಗ್ಯಕರ ಚರ್ಚೆಯನ್ನೇ ಒಳಗೊಂಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕೇಂದ್ರೀಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ ಗಾಜನೂರ ಸಭೆ ಉದ್ಘಾಟಿಸಿದರು. ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದೆ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ, ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಶಾಂತಾ ಘಂಟೆ, ಸಿದ್ಧಲಿಂಗ ಪಾಳಾ, ಸುನಂದಾ, ಸಿದ್ದಮ್ಮ ಇದ್ದರು.

ಹೊಸ ಶಿಕ್ಷಣ ನೀತಿಯಲ್ಲಿ ಪ್ರತಿ 5ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಕೇಂದ್ರೀಕೃತ ಶಾಲಾ ವ್ಯವಸ್ಥೆ ತರುವುದಾಗಿ ಹೇಳಲಾಗಿದೆ.ಇದರಿಂದ ಶಾಲಾ ವ್ಯವಸ್ಥೆ ಕೇಂದ್ರೀಕರಣಗೊಳ್ಳುತ್ತದೆ. ಹೀಗಾಗಿ  ಮುಂದಿನ ದಿನಗಳಲ್ಲಿ ಅಂಗನವಾಡಿಗಳು ಉಳಿಯುತ್ತವೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. -ಅಪ್ಪಗೆರೆ ಸೋಮಶೇಖರ, ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next