ಶಿವಮೊಗ್ಗ: ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು 2017ರ ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯ್ದೆಯನ್ನು (ಎಂಪಿಎಂಎಲ್) ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ಎಪಿಎಂಸಿ ಮಾರುಕಟ್ಟೆಗಳನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದೆ ಎಂದು ರಾಜ್ಯ ರೈತಸಂಘದ ಕೆ.ಟಿ. ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಆರ್ಥಿಕ ಪರಿಷತ್ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಇವರ ಸಂಯುಕ್ತಾಶ್ರಯದಲ್ಲಿ ಹೊಸ ಎಪಿಎಂಸಿ ಕಾಯ್ದೆ ಕುರಿತು ಶನಿವಾರ ಬೆಳಗ್ಗೆ ವೆಬಿನಾರ್ ಮೂಲಕ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ದೇಶಕ್ಕೆ ಅನ್ನ ಹಾಕುವ ರೈತನನ್ನು ಭಿಕ್ಷುಕನಂತೆ ಕಾಣಲಾಗುತ್ತಿದೆ. ರೈತರು ಸ್ವಾವಲಂಬಿಗಳು. ಆತ್ಮಾಭಿಮಾನ, ಸ್ವಾಭಿಮಾನದಿಂದ ಬದುಕುತ್ತಿರುವವರು. ಇಂತಹ ರೈತನನ್ನು ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಸಂಕಷ್ಟಕ್ಕೆ ಸಿಲುಕಿಸಿ ಬೀದಿಪಾಲು ಮಾಡಿ ಬಂಡವಾಳಶಾಹಿಗಳನ್ನು ಪ್ರೋತ್ಸಾಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಗದಗದ ಮಾಜಿ ಶಾಸಕ ಡಿ.ಆರ್. ಪಾಟೀಲ್‌ಮಾತನಾಡಿ, ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರದೆ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಿ ಜಾರಿಗೊಳಿಸಬೇಕಿದೆ ಎಂದು ಒತ್ತಾಯಿಸಿದರು.
ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕ ಡಾ| ಪ್ರಕಾಶ್ ಕಮ್ಮರಡಿ, ಎಪಿಎಂಸಿ ಅಧ್ಯಕ್ಷ ಕೆ.ಪಿ. ದುಗ್ಗಪ್ಪ ಗೌಡ, ರಾಜ್ಯ ಆರ್ಥಿಕ ಪರಿಷತ್ ಅಧ್ಯಕ್ಷ ಡಾ| ಆರ್.ಜಯಶಂಕರ್, ಉಪಾಧ್ಯಕ್ಷ ಡಾ| ನಾರಾಯಣ ರಾವ್, ಕಾರ್ಯಕ್ರಮ ಸಂಯೋಜಕ, ಡಿವಿಎಸ್ ಕಾಲೇಜಿನ ಪ್ರಾಧ್ಯಾಪಕ ಡಾ| ಎಂ.ವಿ. ವೆಂಕಟೇಶ್ ಭಾಗವಹಿಸಿದ್ದರು