ಚಿಂತಾಮಣಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಹಿಂದುಳಿದ ವರ್ಗಗಳ, ಆಲ್ಪಸಂಖ್ಯಾಂತರ ಕಲ್ಯಾಣ ಹಾಗೂ ಕರ್ನಾಟಕ ವಸತಿ ನಿಲಯಗಳಡಿ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ದುಡಿಯುತ್ತಿರುವ ಡಿ ವರ್ಗದ ಹೊರಗುತ್ತಿಗೆ ನೌಕರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮನವಿ:ನಗರದ ಪ್ರವಾಸಿ ಮಂದಿರದಿಂದ mಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ
ತಹಶೀಲ್ದಾರ್‌ರಿಗೆ ಬೇಡಿಕೆ ಈಡೇರಿಕೆ ಕುರಿತು ಮನವಿ ಸಲ್ಲಿಸಿದರು. ಹಿಂದುಳಿದ ವರ್ಗ, ಆಲ್ಪಸಂಖ್ಯಾಂತರ ಕಲ್ಯಾಣ ಇಲಾಖೆ ಸರ್ಕಾರಿ ಹಾಸ್ಟಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಎಂ.ನಾರಾಯಣಸ್ವಾಮಿ ಮಾತನಾಡಿ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾಂತರ ಕಲ್ಯಾಣ ಹಾಗೂ ಕರ್ನಾಟಕ ವಸತಿನಿಲಯಗಳಡಿ ಅಡುಗೆ, ಸ್ವತ್ಛತೆ, ಕಾವಲು, ಮತಿತ್ತರ ಡಿ ವರ್ಗದ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ದುಡಿಯುತ್ತಿರುವ ನೌಕರರಿಗೆ 8-10 ತಿಂಗಳ ಬಾಕಿ ವೇತನ ಪಾವತಿಸಬೇಕು. ನಿವೃತ್ತಿ ಹೊಂದುವವರೆಗೂ ಸೇವೆಯಲ್ಲಿ ಮುಂದುವರಿಸಬೇಕು ಎಂದರು.
ಹೊರಗುತ್ತಿಗೆ ನೌಕರರು ಕೆಲಸದಿಂದ ತೆಗೆದು ಹಾಕುವ ಭೀತಿ ಎದುರಿಸುತ್ತಿದ್ದು, ಇವರನ್ನು ನಿವೃತ್ತಿ ಹೊಂದುವವರೆಗೆ ಸೇವೆಯಲ್ಲಿ ಮುಂದುವರಿಸಬೇಕು, ಹೊರಗುತ್ತಿಗೆ ಸಿಬ್ಬಂದಿಗೆ ಕಾನೂನಿನ ಪ್ರಕಾರ ಅನ್ವಯವಾಗುವ ರಜೆ, ಪಿಎಫ್, ಇಎಸ್‌ಐ ಸೌಲಭ್ಯ ಒದಗಿಸಬೇಕು, ಇಲ್ಲವಾದಲ್ಲಿ ಡಿ.17ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷ ಯಲ್ಲಪ್ಪ, ಮಂಜುನಾಥ್, ಲಕ್ಷ್ಮಣ್ಣ, ಪ್ರಧಾನ ಕಾರ್ಯದರ್ಶಿ ಸುಮನ್ ರಾಜ್, ಸಹಕಾರ್ಯದರ್ಶಿ ಮಹೇಶ್, ಖಜಾಂಚಿ ಮಂಜುನಾಥ್, ಹೊರಗುತ್ತಿಗೆ ನೌಕರರು ಇದ್ದರು.