Advertisement

ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ

10:48 AM Jun 01, 2020 | mahesh |

ಕಲ್ಲುಗುಡ್ಡೆ: ಕಡಬ ತಾ|ನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿಯಲ್ಲಿ ಹೇರ ಆನಂದ ಅವರ ಜಾಗದಲ್ಲಿ ಮಿಡತೆ ಹಿಂಡು ಕಂಡು ಬಂದ ಸ್ಥಳಕ್ಕೆ ರವಿವಾರ ಕೃಷಿ ಇಲಾಖಾ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಕೊಣಾಜೆ ಕಾಡಂಚಿನ ಪ್ರದೇಶದಲ್ಲಿರುವ ಈ ಕೃಷಿ ತೋಟದಲ್ಲಿರುವ ಗಿಡಗಳ, ಮರಗಳ ಎಲೆಗಳಲ್ಲಿ ಕಳೆದ ಶುಕ್ರವಾರದಿಂದ ಸಾಯಂಕಾಲ ವೇಳೆಯಲ್ಲಿ ಮಿಡತೆಗಳ ಹಿಂಡು ಬೀಡು ಬಿಟ್ಟು ಎಲೆಗಳನ್ನು ತಿನ್ನುತ್ತಿದ್ದವು. ಈ ಬಗ್ಗೆ ಮನೆಯವರು ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದರು. ರವಿವಾರ ಸ್ಥಳಕ್ಕೆ ಭೇಟಿ ನೀಡಿದ ಕಡಬ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಅವರು ಬಾಧಿತ ಪ್ರದೇಶ ಪರಿಶೀಲನೆ ನಡೆಸಿ ಮಿಡತೆ ಹಾಗೂ ಅದು ತಿಂದ ವಿವಿಧ ಬಗೆಯ ಗಿಡಗಳ ಸೊಪ್ಪುಗಳನ್ನು ಸಂಗ್ರಹಿಸಿ ವಿಜ್ಞಾನಿಗಳ ಸಂಶೋಧ‌ನೆಗಾಗಿ ರವಾನಿಸಿದ್ದಾರೆ.

ಬಿಸಿಲಿಗೆ ಕಾಡಿನಲ್ಲಿ ತರೆಗೆಲೆಯ ಮಧ್ಯೆ ಮರೆ ಯಾಗಿ ವಾತಾವರಣ ತಂಪಾದ ಸಮಯದಲ್ಲಿ ಎಲೆಗಳ ಮೇಲೆ ಕೂತು ಎಲೆಗಳನ್ನು ಆಹಾರ ವನ್ನಾಗಿಸುತ್ತವೆ. ಹೇರ ಪ್ರದೇಶ ಕೊಣಾಜೆ ಕಾಡಂಚಿನ ಪ್ರದೇಶವಾಗಿರುವುದರಿಂದ ಈ ಪ್ರದೇಶಕ್ಕೆ ಬಹು ಬೇಗನೆ ಮಿಡತೆಗಳು ಆಗಮಿಸುತ್ತವೆ. ಇಲ್ಲಿರುವ ಮಿಡತೆ ಪ್ರಸ್ತುತ ಪ್ರಚಲಿತದಲ್ಲಿರುವ ಮರುಭೂಮಿ ಲೋಕಷ್ಟ್ ಅಲ್ಲ. ಈ ಮಿಡತೆ ಕೃಷಿ ತಜ್ಞರ ಪ್ರಕಾರ ಸ್ಟೋಟೆಡ್‌ ಕಾಫಿ ಗ್ರಾಸ್‌ ಹೋಪರ್‌ ಜಾತಿಯದ್ದಾಗಿದೆ. ಇದನ್ನು ಸಂಹಾರ ಮಾಡಲು ಸಾಧ್ಯವಿದೆ. ಮಿಡತೆ ಹಾವಳಿ ಕಂಡು ಬಂದಲ್ಲಿ ತತ್‌ಕ್ಷಣ ಕೃಷಿ ಇಲಾಖೆಯ ಗಮನಕ್ಕೆ ತರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.

ಮುಂಡಾಜೆಯಲ್ಲೂ ಮಿಡತೆ
ಮುಂಡಾಜೆ: ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೃಷಿಕರೋರ್ವರ ರಬ್ಬರ್‌ ತೋಟದಲ್ಲಿ ರವಿವಾರ ಮಿಡತೆಗಳು ಕಂಡು ಬಂದಿವೆ. ಗುಂಪಾಗಿರುವ ಮಿಡತೆಗಳು ಗಿಡಗಳ ಸೊಪ್ಪನ್ನು ತಿನ್ನುತ್ತಿವೆ.

ಕೃಷಿ ಇಲಾಖೆ ಸಲಹೆ
ವಿವಿಧ ಉಪಕರಣಗಳನ್ನು ಉಪಯೋಗಿಸಿ ದೊಡ್ಡ ಶಬ್ದದೊಂದಿಗೆ ಮಿಡತೆಗಳನ್ನು ಇತರೆಡೆಗೆ ಓಡಿಸುವುದು, ಬೇವಿನ ಮೂಲದ ಕೀಟನಾಶಕವನ್ನು ಬೆಳೆಗಳ ಮೇಲೆ ಸಿಂಪಡಿಸಿ ಬೆಳೆ ಹಾನಿ ತಪ್ಪಿಸುವುದು, ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿ ಹಾಕುವುದು, ಕೀಟವು ಮರಿಹುಳಗಳಾಗಿದ್ದಲ್ಲಿ ಬಾಧಿತ ಪ್ರದೇಶದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿ ತೋಡಿ ಮರಿಹುಳಗಳನ್ನು ಸೆರೆಹಿಡಿದು ಸಂಹರಿಸುವುದು, ಮಿಡತೆ ಬರುವ ದಿಕ್ಕಿಗೆ ಯಂತ್ರಗಳ ಸಹಾಯದಿಂದ ಜ್ವಾಲೆ ಎಸೆಯುವುದು, ಮಿಡತೆ ಹಗಲಲ್ಲಿ ಸಂಚರಿಸಿ ಸಾಯಂಕಾಲ ಸಮಯದಲ್ಲಿ ಮರಗಿಡಗಳ ಮೇಲೆ ವಿಶ್ರಾಂತಿ ಪಡೆಯುವುದರಿಂದ ಯಂತ್ರದ ಮೂಲಕ ಅಗತ್ಯ ಕ್ರಮಕೈಗೊಂಡು ಕ್ಲೋರೊಪೈರಿಪಾಸ್‌ ಎಂಬ ಕೀಟನಾಶಕವನ್ನು ಸಿಂಪಡಣೆ ಮಾಡುವ ಸಲಹೆಯನ್ನು ಕೃಷಿ ಇಲಾಖೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next