ನವದೆಹಲಿ:ನಿಮ್ಮ ಸುತ್ತಮುತ್ತಲಿನ ವಸ್ತುಗಳು, ಮನುಷ್ಯರೆಲ್ಲರೂ ನಿಮಗೆ ತಲೆಕೆಳಗಾದಂತೆ ಕಂಡರೆ ಹೇಗಿರಬಹುದು? ಕಲ್ಪಿಸಿಕೊಂಡರೆ ತಲೆಸುತ್ತು ಬಂದಂತಾಗುತ್ತದೆ ಅಲ್ಲವೇ?
1938ರ ಸ್ಪೇನ್ ನಾಗರಿಕ ಯುದ್ಧದಲ್ಲಿ ತಲೆಗೆ ಗುಂಡು ಹೊಕ್ಕಿದ್ದ ಯೋಧರೊಬ್ಬರು ಇಂಥದ್ದೊಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಗ ಅವರಿಗೆ 25 ವರ್ಷ ವಯಸ್ಸಾಗಿತ್ತು. ಅವರಿಗೆ ಚಿಕಿತ್ಸೆ ನೀಡಿದ್ದ ಸೇನಾ ಆಸ್ಪತ್ರೆಯ ವೈದ್ಯರು ಆ ಯೋಧನನ್ನು “ಪೇಷೆಂಟ್ ಎಂ’ ಎಂದು ಕರೆಯುತ್ತಾರೆ. ಅಂದು ತಲೆಗೆ ಗುಂಡು ತಾಗಿ, ಗುಣಮುಖನಾದ ಬಳಿಕ, ಅವರಿಗೆ ಅವರ ಶರೀರವು ನಿರ್ದಿಷ್ಟ ಸ್ಥಿತಿಯಲ್ಲಿದ್ದಾಗ ಎದುರಿಗಿದ್ದ ಎಲ್ಲವೂ ತಲೆಕೆಳಗಾಗಿ ಕಾಣಿಸಲು ಆರಂಭಿಸಿತು.
ಈ ಘಟನೆ ನಡೆದು ಈಗ 85 ವರ್ಷಗಳೇ ಕಳೆದಿವೆ. ಆದರೆ, ಇಂಥದ್ದೊಂದು ವಿಚಿತ್ರವಾದ ನರಸಂಬಂಧಿಸಿ ಸಮಸ್ಯೆ ಕುರಿತು ಸಂಶೋಧಕರು ಈಗ ಮತ್ತಷ್ಟು ಅಧ್ಯಯನ ಆರಂಭಿಸಿದ್ದಾರೆ.
“ಪೇಷೆಂಟ್ ಎಂ’ ಅವರ ಶರೀರವು ವಿಶ್ರಾಂತಿಯಲ್ಲಿದ್ದಾಗ ಮತ್ತು ಯಾವುದೇ ಚಲನೆ ಇಲ್ಲದೇ ಇದ್ದಾಗ, ಅವರಿಗೆ ಇಡೀ ಜಗತ್ತೇ ತಲೆಕೆಳಗಾಗಿ ಕಾಣಿಸುತ್ತದತಂತೆ. ಈ ಕುರಿತು ಅಧ್ಯಯನ ನಡೆಸಿದಾಗ, ಅವರ ಮೆದುಳಿನ ಹೊರಪದರದ ಅಂಚುಗಳು ಧ್ವಂಸಗೊಂಡಿರುವುದು ತಿಳಿದುಬಂತು.
ಮನುಷ್ಯನ ಮೆದುಳಿನ ಹೊರಪದರ(ಸೆರೆಬ್ರಲ್ ಕಾರ್ಟೆಕ್ಸ್)ವು ನಮ್ಮ ಭಾವನೆಗಳು, ಪ್ರಜ್ಞೆ ಮತ್ತು ಸಂವೇದನೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುತ್ತದೆ. ಆದರೆ, ಈ ಪ್ರಕರಣದಲ್ಲಿ ತಲೆಗೆ ಹೊಕ್ಕ ಗುಂಡಿನಿಂದಾಗಿ ಯೋಧನ ಮೆದುಳಿನ ಹೊರಪದರದ ಅಂಚುಗಳಿಗೆ ಹಾನಿಯಾಗಿದೆ ಎಂದಿದ್ದಾರೆ ವೈದ್ಯರು.