Advertisement

ಗೌಡರ ಸಲಹೆಯಂತೆ ಸಿಎಂ- ಖರ್ಗೆ ಭೇಟಿ

11:29 PM Jun 19, 2019 | Team Udayavani |

ಬೆಂಗಳೂರು: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ದೆಹಲಿಯಲ್ಲಿ ಹೈಕಮಾಂಡ್‌ ನಾಯಕರ ಭೇಟಿಯಲ್ಲಿ ನಿರತರಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ದಿಢೀರ್‌ ಆಗಿ ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

Advertisement

ಸಮನ್ವಯ ಸಮಿತಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಖರ್ಗೆ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

“ಆಪರೇಷನ್‌ ಕಮಲ’ ಕಾರ್ಯಾಚರಣೆಗೆ ಬಿಜೆಪಿ ಮತ್ತೆ ಪ್ರಯತ್ನ ಮಾಡಿರುವುದು, ಜೆಡಿಎಸ್‌ ಜತೆ ಸರ್ಕಾರ ಮುಂದುವರಿಸುವುದರಿಂದ ಕಾಂಗ್ರೆಸ್‌ ಅಸ್ತಿತ್ವಕ್ಕೆ ಕುತ್ತು ಬರಲಿದೆ ಎಂದು ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಹಿತ ಹೈಕಮಾಂಡ್‌ ನಾಯಕರ ಬಳಿ ಪ್ರತಿಪಾದನೆ ಮಾಡಿರುವುದು, ಸಮ್ಮಿಶ್ರ ಸರ್ಕಾರದ ಮುಂದಿನ ಹಾದಿ, ತಾವು ಗ್ರಾಮ ವಾಸ್ತವ್ಯ ಆರಂಭಿಸುತ್ತಿರುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಿದರೆ ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಲಿದೆ ಎಂದು ದೇವೇಗೌಡರು ಇತ್ತೀಚೆಗೆ ರಾಹುಲ್‌ ಗಾಂಧಿ ಭೇಟಿ ಸಂದರ್ಭದಲ್ಲಿ ಹೇಳಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಎಚ್‌.ಡಿ.ದೇವೇಗೌಡರ ಸಲಹೆ ಮೇರೆಗೆ ಕುಮಾರಸ್ವಾಮಿಯವರು ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಅತ್ತ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಎರಡು ದಿನ ಬೀಡು ಬಿಟ್ಟಿರುವುದರಿಂದ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಬಹುದು. ಸಮ್ಮಿಶ್ರ ಸರ್ಕಾರದ ವಿಚಾರದಲ್ಲಿ ಹಲವು ಬದಲಾವಣೆ ಆಗಬಹುದು. ಹೀಗಾಗಿ, ಮೈತ್ರಿ ಕುರಿತು ಹೈಕಮಾಂಡ್‌ ಜತೆ ಚರ್ಚಿಸಿ ಎಂದು ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ಈ ಭೇಟಿಗೆ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.

Advertisement

ಸಲಹೆ ನೀಡಿಲ್ಲ: ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಗ್ರಾಮ ವಾಸ್ತವ್ಯದ ಬಗ್ಗೆ ಮಾತನಾಡಲು ಮುಖ್ಯಮಂತ್ರಿಯವರು ಬಂದಿದ್ದರು. ಗುರುಮಿಟ್ಕಲ್‌ ಹಾಗೂ ಅಫ‌jಲ್‌ಪುರದಲ್ಲಿ ಅವರು ನಡೆಸಲಿರುವ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಕೆಲವು ಮಾಹಿತಿ ಹಂಚಿಕೊಳ್ಳಲು ಬಂದಿದ್ದರು. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದರು.

“ಖರ್ಗೆಯವರು ಎಂದೋ ಮುಖ್ಯಮಂತ್ರಿಯಾಗಬೇಕಿತ್ತು’ ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿಕೆ ನೀಡಿದ್ದ ಬಗ್ಗೆ ಪ್ರಶ್ನಿಸಿದಾಗ, “ಅಯ್ಯೋ, ಅದೆಲ್ಲಾ ಮುಗಿದ ಅಧ್ಯಾಯ. ಆ ಮಾತು ಈಗ್ಯಾಕೆ ಬಿಡಿ. ಆ ವಿಚಾರದಲ್ಲಿ ಕುಮಾರಸ್ವಾಮಿಯವರು ಈಗಾಗಲೇ ಸಮಜಾಯಿಷಿ ಕೊಟ್ಟಿದ್ದಾರಲ್ಲಾ, ಎಂದರು.

ಪಕ್ಷದ ವಿರುದ್ಧ ಅಥವಾ ಹೈಕಮಾಂಡ್‌ ವಿರುದ್ಧ ಯಾರೂ ಮಾತನಾಡಬಾರದು. ಸಂಪುಟ ವಿಸ್ತರಣೆ ಸಂಬಂಧ ಅಸಮಾಧಾನ ಇದ್ದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬೇಕು. ನನಗೂ ಸೇರಿ ಯಾರಿಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಮಾತನಾಡುವ ಹಕ್ಕಿಲ್ಲ. ರೋಷನ್‌ ಬೇಗ್‌ ಸೇರಿ ಯಾರೂ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ.
-ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next