ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಎಷ್ಟೋ ಮಂದಿ ದಿನ ರಾತ್ರಿಯನ್ನದೆ ಅಲೆದಾಡುತ್ತಾರೆ. ಇದರಲ್ಲಿ ಕೆಲ ಮಂದಿಗೆ ಅವಕಾಶದ ಬಾಗಿಲು ತೆರೆದೆರೆ ಇನ್ನು ಕೆಲವರು ಅವಕಾಶ ವಂಚಿತರಾಗಿಯೇ ಉಳಿದು ಬಿಡುತ್ತಾರೆ.
ಚಿತ್ರರಂಗದಲ್ಲಿ ಅವಕಾಶ ಸಿಕ್ಕಿ, ಸ್ಟಾರ್ ಪಟ್ಟ ಸಿಕ್ಕ ಬಳಿಕ ಎಲ್ಲವನ್ನೂ ಬಿಟ್ಟು ದೂರ ದೂರಿಗೆ ಹೋಗಿ ನೆಲೆಸಿದ ಕಲಾವಿದನ ಸ್ಟೋರಿಯಿದು.
ನಕುಲ್ ಕಪೂರ್ (Nakul Kapoor). 2001 -2002ರ ಸಮಯದಲ್ಲಿ ಬಾಲಿವುಡ್ ನ (Bollywood) ಬಣ್ಣದ ಲೋಕದಲ್ಲಿ ಚಾಕ್ಲೇಟ್ ಬಾಯ್ ಆಗಿ ಮೆರೆದ ನಟ ಈತ. ಚಿತ್ರರಂಗಕ್ಕೆ ಕಾಲಿಡುವ ಮುನ್ನ ನಕುಲ್ ಮಿಂಚಿದ್ದು 1998ರಲ್ಲಿ ಬಂದ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ. ʼಹೋ ಗಯಿ ಹೈ ಮೊಹಬ್ಬತ್ ತುಮ್ಸೆʼ ಎನ್ನುವ ಮ್ಯೂಸಿಕ್ ವಿಡಿಯೋದಲ್ಲಿ ಹ್ಯಾಂಡ್ಸಮ್ ಹುಡುಗನಾಗಿ, ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು.
2001ರಲ್ಲಿ ʼಆಜಾ ಮೇರೆ ಯಾರ್ʼ ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾದಲ್ಲಿ ನಕುಲ್ ಗಮನ ಸೆಳೆಯುತ್ತಾರೆ. ಆದರೆ ಅದಕ್ಕೂ ಹೆಚ್ಚು ಸಿನಿ ಪ್ರೇಕ್ಷಕರಿಗೆ ನಕುಲ್ ಇಷ್ಟವಾಗುವುದು ಅವರ ಮುಂದಿನ ಸಿನಿಮಾದ ಮೂಲಕ.
ದೀಪಕ್ ಆನಂದ್ ನಿರ್ದೇಶನ ಮಾಡಿದ, 2002ರಲ್ಲಿ ಬಂದ “ತುಮ್ ಸೆ ಅಚ್ಚಾ ಕೌನ್ ಹೈ” (Tum Se Achcha Kaun Hai) ಎನ್ನುವ ಪ್ರೇಮ ಕಥೆಯ ಸಿನಿಮಾ ನಕುಲ್ ಅವರಿಗೆ ದೊಡ್ಡ ನೇಮ್ – ಫೇಮ್ ತಂದುಕೊಟ್ಟಿತು. ಈ ಸಿನಿಮಾ ರಾತ್ರೋ ರಾತ್ರಿ ಸ್ಟಾರ್ ಪಟ್ಟವನ್ನು ತಂದುಕೊಟ್ಟಿತು.
ಪ್ರೇಮಾ ಕಥೆಯ ಸಿನಿಮಾದಲ್ಲಿ ನಟಿಸಿದ ನಕುಲ್ ಅವರನ್ನು ಜನ ಮುಂದಿನ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಇವರೇ ಎಂದು ಕರೆಯಲು ಶುರು ಮಾಡಿದರು. ಅಂದು ಮಾಧ್ಯಮಗಳಲ್ಲೂ ಇದೇ ವಿಚಾರ ಹೆಚ್ಚು ಹರಿದಾಡಿತ್ತು.
“ತುಮ್ ಸೆ ಅಚ್ಚಾ ಕೌನ್ ಹೈ” ಸಿನಿಮಾದಲ್ಲಿ ಆರತಿ ಚಾಬ್ರಿಯಾ, ರುಚಿ ಬಫ್ನಾ, ಕಿಮ್ ಶರ್ಮಾ ಮತ್ತು ರತಿ ಅಗ್ನಿಹೋತ್ರಿ ಮುಂತಾದವರು ನಟಿಸಿದ್ದರು.
ಒಂದೇ ಒಂದು ಸಿನಿಮಾದಿಂದ ಫೇಮ್ ಆ ಬಳಿಕ ದಿಢೀರ್ ನಾಪತ್ತೆ.. “ತುಮ್ ಸೆ ಅಚ್ಚಾ ಕೌನ್ ಹೈ” ಸಿನಿಮಾವನ್ನು ನೋಡಿ ಜನ ಈ ಹುಡುಗ ಮುಂದೆ ಬಾಲಿವುಡ್ ನಲ್ಲಿ ಕಮಾಲ್ ಮಾಡುತ್ತಾನೆ ಎನ್ನುವ ಮಾತುಗಳನ್ನಾಡುತ್ತಿದ್ದರು. ಆದರೆ ತನ್ನ ಮೊದಲ ಸಿನಿಮಾದ ಬಳಿಕ ನಕುಲ್ ಇದ್ದಕ್ಕಿದ್ದಂತೆ ಇಂಡಸ್ಟ್ರಿ ಬಿಟ್ಟು ನಾಪತ್ತೆ ಆಗಿದ್ದರು.
ಕೆಲ ಸಮಯದ ಬಳಿಕ ನಕುಲ್ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಅಪಘಾತವೊಂದರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಕೆಲವೆಡೆ ಹರಿದಾಡಲು ಶುರುವಾದರೆ, ಇನ್ನೂ ಕೆಲವೆಡೆ ಅನಾರೋಗ್ಯದಿಂದ ನಕುಲ್ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಿತು.
ಈ ಸುದ್ದಿಗಳು ಎಲ್ಲೆಡೆ ಹಬ್ಬಿದಾಗ ಅದೊಂದು ದಿನ ನಕುಲ್ ಪ್ರತ್ಯಕ್ಷವಾಗಿ ತನಗೇನೂ ಆಗಿಲ್ಲ. ನಾನು ಬದುಕಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಆಧ್ಯಾತ್ಮಿಕತೆ ಮತ್ತು ಧ್ಯಾನದ ಕಡೆ ಒಲವು ಬೆಳೆಸಿಕೊಂಡಿದ್ದ ಅವರು ಇಂದು ಕೆನಡಾದಲ್ಲಿ ವಾಸಿಸುತ್ತಿದ್ದಾರೆ.
ಇಂದು ಅವರು ಕೆನಡಾದಲ್ಲಿ ‘ಡಿವೈನ್ ಲೈಟ್’ ಎನ್ನುವ ತಮ್ಮ ಯೋಗ ಕೇಂದ್ರದಲ್ಲಿ ಯೋಗವನ್ನು ಅಭ್ಯಾಸ ಮಾಡುವುದರ ಜೊತೆಗೆ ಯೋಗವನ್ನು ಕಲಿಸುವ ತರಬೇತಿದಾರರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ.
ಚಿತ್ರರಂಗದಿಂದ ಹತ್ತಾರು ವರ್ಷದಿಂದ ದೂರವಿದ್ದರೂ ಅವರ ಒಂದು ಸಿನಿಮಾದಿಂದ ಅವರನ್ನು ಇಂದಿಗೂ ಬಾಲಿವುಡ್ ನಲ್ಲಿ ಗುರುತಿಸಲಾಗುತ್ತದೆ.