Advertisement

ಸಾತ್ವಿಕತೆಯೇ ಜೀವನದ ಬೆಳಕು

11:05 AM Jul 15, 2020 | sudhir |

ಜೀವನದಲ್ಲಿ ಕೆಲವು ವಿಚಾರಗಳು ಚಿಂತನೆಗೆ ಸೋಪಾನವಾದರೆ, ಕೆಲವು ನಮ್ಮನ್ನು ಚಿಂತೆಗೆ ದೂಡುತ್ತವೆ. ಚಿಂತೆಯು ಚಿತೆಗೆ ಸಮಾನ ಅಂತಾರೆ. ಹಾಗಾಗಿ, ಚಿಂತೆ ಮಾಡದೇ, ಚಿಂತನೆಯಿಂದಲೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು.

Advertisement

ಸಾತ್ವಿಕ, ರಾಜಸಿಕ, ತಾಮಸಿಕ  ಎಂಬುದಾಗಿ ಮೂರು ಬಗೆಯ ಚಿಂತೆಗಳಿರುತ್ತವೆ. ಬಹು ದುಷ್ಟತನದಿಂದ ತನ್ನನ್ನೇ ತಾನು
ಹಿಂಸಿಸಿಕೊಳ್ಳುವುದು, ಪರರಿಗೂ ಹಿಂಸೆಯಾಗುವಂತೆ ಚಿಂತಿಸುವುದು ತಾಮಸಿಕ ಚಿಂತೆಯ ಫ‌ಲ.
ಅಳುವುದು-ಗರ್ಜನೆ -ರಂಪಾಟ -ವಾದ -ವಿವಾದಗಳು ರಾಜಸಿಕ ಚಿಂತೆಯ ಫ‌ಲ.

ಕ್ರಿಯಾಶೀಲತೆಯಿಂದ ಯಾರಿಗೂ ನೋವಾಗದ ರೀತಿಯಲ್ಲಿ ಉಪಾಯವನ್ನು ಚಿಂತಿಸುವುದು ಸಾತ್ವಿಕ ಚಿಂತನೆಯ ಫ‌ಲ. ನಮ್ಮ ಚಿಂತನೆ ಈ ಮೂರರಲ್ಲಿ ಯಾವ ರೀತಿ ಇದ್ದರೆ ಜೀವನ ಸೊಗಸಾಗಿರುತ್ತದೆ ಎಂಬುದನ್ನು, ನಾವೇ ನಿರ್ಧರಿಸಬೇಕು.

ಗೀತೆಯಲ್ಲಿ ಹೇಳಿದಂತೆ –

ಊರ್ಧ್ವಂ ಗತ್ಛಂತಿ ಸತ್ವಸ್ತಾಃ
ಮಧ್ಯೇ ತಿಷ್ಠಂತಿ ರಾಜಸಾಃ
ಜಘನ್ಯ ಗುಣ ವೃತ್ತಿಸ್ಥಾ ಅಧೋ
ಗತ್ಛಂತಿ ತಾಮಸಾಃ
ಪ್ರಾಪಂಚಿಕ ಚಿಂತೆಗಳನ್ನು ಬದಿಗಿರಿಸಿ, ಜೀವನದ ಧ್ಯೇಯವಾದ ಭಗವಂತನ ನೆಲೆಗೆ ತಲುಪುವ ಊರ್ಧ್ವಗತಿಯ ಚಿಂತನೆ ಸಾತ್ವಿಕರದ್ದು. ರಾಜಸ ಪ್ರವೃತ್ತಿ ಯು ಳ್ಳವರು ವಾದ- ವಿವಾದ ದಲ್ಲಿ ಸಿಲುಕಿ ಕೊನೆ-ಮೊದಲಿಲ್ಲದ ಕ್ರಿಯಾಶೀಲತೆಯಲ್ಲೇ ಜೀವನ
ಕಳೆಯುತ್ತಾರೆ. ತಾಮಸಿಕರು ಅತ್ಯಂತ ನೀಚ ಚಿಂತನೆಯಿಂದ ಸಮಾಜಕ್ಕೂ ಅಹಿತವನ್ನೇ ಮಾಡಿ, ತಾವೂ ಅಧಃಪತನ
ಹೊಂದುತ್ತಾರೆ. ಆದ್ದರಿಂದ ನಮ್ಮನ್ನು ನಾವು ಸಾತ್ವಿಕರನ್ನಾಗಿಸಿಕೊಳ್ಳಬೇಕು.
ಅದನ್ನೇ, ಶ್ರೀರಂಗ ಮಹಾಗುರುಗಳು- “ನಿಮ್ಮ ಹೃದಯ ಕಮಲವನ್ನು ಸದಾ ಅರಳಿದ ಪುಷ್ಪದಂತೆ ಇರಿಸಿಕೊಳ್ಳಿ, ಬಾಡದಂತೆ ನೋಡಿಕೊಳ್ಳಿ’ ಎನ್ನುತ್ತಿದ್ದರು.

Advertisement

ಕೊಳಚೆ ತುಂಬಿದ ಪಾತ್ರೆಯೊಳಕ್ಕೆ ಶುದ್ಧವಾದ ನೀರನ್ನು ತುಂಬಲು ಎರಡು ಮಾರ್ಗವಿದೆ-1. ಕೊಳಚೆಯನ್ನು ಹೊರಕ್ಕೆ ಚೆಲ್ಲಿ, ಪಾತ್ರೆಯನ್ನು ಶುದ್ಧಗೊಳಿಸಿ ಶುದ್ಧ ನೀರನ್ನು ತುಂಬುವುದು. 2. ಶುದ್ಧವಾದ ನೀರನ್ನು ಅತಿ ರಭಸದಿಂದ ಪಾತ್ರೆಯೊಳಕ್ಕೆ
ತುಂಬಿ, ಕೊಳಚೆಯ ಲವಲೇಶವೂ ಪಾತ್ರೆಯೊಳಗಿರದೆ ಶುದ್ಧವಾದ ಜಲವೇ ಉಳಿಯುವಂತೆ ಮಾಡುವುದು.
ಅಂತೆಯೇ ಸನ್ನಡತೆ, ಸದ್ವಿಚಾರಗಳನ್ನು ಹೆಚ್ಚುಹೆಚ್ಚಾಗಿ ನಮ್ಮಲ್ಲಿ ತುಂಬಿಕೊಳ್ಳಬೇಕು. ಸದ್ವಿಚಾರಗಳನ್ನು ಕೇಳಿ, ಮನನ
ಮಾಡಿ, ಮೆಲುಕು ಹಾಕುತ್ತಾ ಅವುಗಳನ್ನೇ ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಾವೆಲ್ಲರೂ ಅಂತಹ ನೆಮ್ಮದಿಯ
ಬದುಕಿಗಾಗಿ ಶ್ರಮಿಸೋಣ.

– ಡಾ. ಯಶಸ್ವಿನಿ ಸಂಸ್ಕೃತಿ ಚಿಂತಕಿ

Advertisement

Udayavani is now on Telegram. Click here to join our channel and stay updated with the latest news.

Next