Advertisement

ಕ್ರೈಮ್‌ ಬೇಧಿಸಲು ಧ್ಯಾನ

06:00 AM Jun 15, 2018 | |

10 ವರ್ಷಗಳ ಹಿಂದೆ ರಾಹುಲ್‌ ಐನಾಪುರ ಅವರಿಗೆ ಒಂದು ಮಾತು ಕೊಟ್ಟಿದ್ದರಂತೆ ಶಿವಗಣೇಶ್‌. “ನಾನು ಗೆದ್ದರೆ, ನಿಮ್ಮನ್ನ ಹೀರೋ ಮಾಡಿ ಒಂದು ಚಿತ್ರ ಮಾಡುತ್ತೀನಿ …’  ಎಂದು ಹೇಳಿದ್ದರಂತೆ. “ಜಿಗರ್‌ ಥಂಡ’ ಚಿತ್ರದ ನಂತರ ಆ ಮಾತು ಅವರಿಗೆ ನೆನಪಾಗಿ, ಈಗ ರಾಹುಲ್‌ ಅಭಿನಯದಲ್ಲಿ “ತ್ರಾಟಕ’ ಎಂಬ ಚಿತ್ರ ಮಾಡಿದ್ದಾರೆ ಶಿವಗಣೇಶ್‌. ಇಲ್ಲಿ ರಾಹುಲ್‌ ಜೊತೆಗೆ ಅಜಿತ್‌ ಜಯರಾಜ್‌ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Advertisement

ಎಲ್ಲಾ ಸರಿ, “ತ್ರಾಟಕ’ ಎಂದರೇನು ಎಂಬ ಪ್ರಶ್ನೆ ಬರದು. “ತ್ರಾಟಕ’ ಎಂದರೆ ಧ್ಯಾನದ ಒಂದು ರೀತಿಯಂತೆ. “ಇಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ಹೇಗೆ ಧ್ಯಾನ ಮಾಡಿ, ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಕ್ರೈಮ್‌ ಬಗೆಹರಿಸುತ್ತಾನೆ ಎಂಬುದೇ ಚಿತ್ರದ ಕಥೆ. ನರು ನಾರಾಯಣ್‌ ಮತ್ತು ಮಹಾಕೀರ್ತಿ ಸ್ಕ್ರಿಪ್ಟ್ ಮಾಡಿಕೊಟ್ಟಿದ್ದಾರೆ. ಕಡಿಮೆ ಬಜೆಟ್‌ನಲ್ಲೇ ಒಂದು ಮರ್ಡರ್‌ ಮಿಸ್ಟ್ರಿ ಮಾಡಿದ್ದೇವೆ. ರಾಹುಲ್‌ ಜೊತೆಗೆ ಅಜಿತ್‌, ಹೃದಯಾ, ದಿಶಾ ಪೂವಯ್ಯ, ಯಶ್‌ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ವಿನೋದ್‌ ಭಾರತಿ ಛಾಯಾಗ್ರಹಣ ಮಾಡಿದರೆ, ಅರುಣ ಸುರದ ಅವರು ಸಂಗೀತ ಸಂಯೋಜಿಸಿದ್ದಾರೆ’ ಎಂದೆಲ್ಲಾ ಮಾಹಿತಿ ಕೊಟ್ಟರು ಶಿವಗಣೇಶ್‌.

ಇನ್ನು ಈ ಚಿತ್ರದಲ್ಲಿ ರಾಹುಲ್‌ ನಾಯಕನಷ್ಟೇ ಅಲ್ಲ, ನಿರ್ಮಾಪಕರು ಕೂಡಾ. ರಾಹುಲ್‌ ಕ್ಯಾಮೆರಾ ಮುಂದೆ ನಿಲ್ಲುವುದಕ್ಕಿಂತ ಮುನ್ನ ಅವರನ್ನು ಹಿರಿಯ ಮೈಮ್‌ ತಜ್ಞ ವಾಲ್ಟರ್‌ ಡಿ’ಸೋಜಾ ಅವರ ಮುಂದೆ ನಿಲ್ಲಿಸಿದರಂತೆ ಶಿವಗಣೇಶ್‌. ವಾಲ್ಟರ್‌ ಅವರ ಗರಡಿಯಲ್ಲಿ ಸುಮಾರು ಮೂರು ತಿಂಗಳ ಕಾಲ ಪಳಗಿದ ನಂತರ ಕ್ಯಾಮೆರಾ ಮುಂದೆ ನಿಲ್ಲಿಸಲಾಯಿತಂತೆ. ನಟನೆ ಅಥವಾ ಚಿತ್ರದ ಬಗ್ಗೆ ರಾಹುಲ್‌ ಏನೂ ಮಾತನಾಡಲಿಲ್ಲ. “ಈ ತಂಡದವರೇ ನನ್ನ ಫ್ಯಾಮಿಲಿ’ ಎಂದು ಭಾವುಕರಾದರು. ಇಲ್ಲಿ ಕಥೆಯೇ ಹೀರೋ ಮಿಕ್ಕವರೆಲ್ಲಾ ಕೇವಲ ಪಾತ್ರಧಾರಿಗಳು ಅಂತ ಅಜಿತ್‌ ಜಯರಾಜ್‌ ಹೇಳಿಕೊಂಡರೆ, ತಮ್ಮ ಪಾಲಿಗೆ ಇದು ಬಹಳ ಒಳ್ಳೆಯ ಕಂಬ್ಯಾಕ್‌ ಎಂದು ನಟಿ ಹೃದಯಾ ಹೇಳಿಕೊಂಡರು.

ಅಂದಹಾಗೆ, ಶಿವಗಣೇಶ್‌ ಮಾತನಾಡಿದ್ದು “ತ್ರಾಟಕ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಇದುವರೆಗೂ “ತ್ರಾಟಕ’ ಬಗ್ಗೆ ಚಿತ್ರತಂಡದವರು ಏನೂ ಮಾತಾಡಿರಲಿಲ್ಲ. ಈಗ ಚಿತ್ರೀಕರಣ ಮುಗಿದಿರುವುದರಿಂದ, ಚಿತ್ರದ ಬಗ್ಗೆ ಮಾತಾಡಿದ ಹಾಗೂ ಆಯಿತು, ಹಾಡುಗಳನ್ನು ಬಿಡುಗಡೆ ಮಾಡಿದಂತೆಯೂ ಆಯಿತು ಎಂದು ಟೂ-ಇನ್‌-ಒನ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಅಂಬರೀಶ್‌ ಬಂದಿದ್ದರು. ಜೊತೆಗೆ ಕೆ. ಮಂಜು, ವಾಲ್ಟರ್‌ ಡಿ’ಸೋಜ, ಸಂತೋಷ್‌ ಆರ್ಯನ್‌ ಮುಂತಾದವರು ಇದ್ದರು.

ಅಂಬರೀಶ್‌ ಅವರು ಹೆಚ್ಚು ಮಾತನಾಡಲಿಲ್ಲ. “ಕನ್ನಡಕ್ಕೆ ಹೊಸ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಬರುತ್ತಿದ್ದಾರೆ. ಹೊಸ ತರಹದ ಚಿತ್ರಗಳನ್ನು ಮಾಡುತ್ತಿದ್ದಾರೆ. ರಾಹುಲ್‌ ಅವರ ತಂದೆ ನನ್ನ ಹಳೆಯ ಫ್ರೆಂಡು. ನಮ್ಮ ಕಾಲ ಮುಗೀತು. ಇನ್ನು ಹೊಸಬರು ಬರಬೇಕು’ ಎಂದರು ಅಂಬರೀಶ್‌. ಅವರಿಗೆ ಬಿಜಾಪುರದ ಶೈಲಿಯಲ್ಲಿ ಖಾಕಿ ಟೋಪಿ ತೊಡಿಸಿ ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next