ಡೆಹ್ರಾಡೂನ್: ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು ಒಂದು ದಿನದ ಧ್ಯಾನಕ್ಕಾಗಿ ಉಳಿದುಕೊಂಡಿದ್ದ ಕೇದಾರನಾಥದ ‘ಧ್ಯಾನ ಗುಹೆ’ಗೆ ಈಗ ಹಿಂದೆಂದೂ ಕಾಣದಂಥ ಡಿಮ್ಯಾಂಡ್ ಬಂದಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್‌ವರೆಗೆ ಎಲ್ಲಾ ದಿನಗಳಿಗೂ ಪ್ರತ್ಯೇಕ ಧ್ಯಾನಾಸಕ್ತರಿಗಾಗಿ ಈ ಗುಹೆ ಮುಂಗಡವಾಗಿ ಕಾಯ್ದಿರಿಸಲಾಗಿದೆ. ಹೊಸ ಬುಕಿಂಗ್ ಮಾಡಲಿಚ್ಛಿಸುವವರು ಅಕ್ಟೋಬರ್‌ವರೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಈ ಗುಹೆಯ ಉಸ್ತುವಾರಿ ಹೊಂದಿರುವ ಗರ್ಹವಾಲ್ ಮಂಡಲ್ ವಿಕಾಸ್ ನಿಗಮ್ ಲಿಮಿಟೆಡ್‌ನ (ಜಿಎಂವಿಎನ್) ಪ್ರಧಾನ ವ್ಯವಸ್ಥಾಪಕರಾದ ಬಿ.ಎಲ್. ರಾಣಾ ತಿಳಿಸಿದ್ದಾರೆ.
ಜಿಎಂವಿಎನ್ ಜಾಲತಾಣಕ್ಕೆ ದೇಶದ ವಿವಿಧ ಭಾಗಗಳ ಜನರು ಪ್ರವಾಹೋಪಾದಿಯಲ್ಲಿ ಭೇಟಿ ನೀಡುತ್ತಿದ್ದು, ಬುಕಿಂಗ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ಮೋದಿ ಬಂದು ಹೋದ ನಂತರ ಈ ಗುಹೆ ಒಂದು ದಿನವೂ ಖಾಲಿ ಇರಲಿಲ್ಲ ಎನ್ನುತ್ತಾರೆ ಜಿಎಂವಿಎನ್ ಅಧಿಕಾರಿ.
ಎಲ್ಲಾ ಮೋದಿ ಮಾಯೆ!: ಮೇ ತಿಂಗಳಿನಲ್ಲಿ ಇಲ್ಲಿ ಧ್ಯಾನಕ್ಕೆ ಬಂದಿದ್ದ ಮೋದಿಯವರು, ಗುಹೆಯಲ್ಲಿ ಕುಳಿತು ಕಾಷಾಯ ವಸ್ತ್ರವನ್ನು ಧರಿಸಿ ಧ್ಯಾನಾಸಕ್ತರಾಗಿದ್ದ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಇದು ಅನೇಕ ಜನರ ಮನಮುಟ್ಟಿದೆ. ಹಾಗಾಗಿ, ಈ ಗುಹೆಯ ಬಗ್ಗೆ ಜನರು ಆಕರ್ಷಿತರಾಗಿದ್ದು, ಹೆಚ್ಚು ಹೆಚ್ಚು ಜನರು ಗುಹೆ ಭೇಟಿಗೆ ಆಗಮಿಸುತ್ತಿದ್ದಾರೆ. ವರ್ಷದ ಹಿಂದೆಯೇ ಗುಹೆಯಲ್ಲಿ ಧ್ಯಾನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಅತ್ತ ಸುಳಿಯಲು ಯಾರೂ ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ, ಮೋದಿಯವರು ಬಂದು ಹೋದ ಮೇಲೆ ಜನರ ಮಹಾಪೂರವೇ ಹರಿದುಬರುತ್ತಿದೆ ಎಂದು ಮಂಗೇಶ್ ತಿಳಿಸಿದ್ದಾರೆ.
ದೇಗುಲಕ್ಕೂ ಜನಜಂಗುಳಿ: ಮೋದಿಯವರ ಮಾಯೆ ಈ ಗುಹೆಗೆ ಮಾತ್ರವಲ್ಲ, ಕೇದಾರನಾಥ ದೇಗುಲದ ಮೇಲೂ ಆವರಿಸಿದೆ ಎಂದ ಮಂಗೇಶ್, ತಮ್ಮ ಪ್ರಧಾನಿ ಹುದ್ದೆಯ ಮೊದಲ ಅಧಿಕಾರಾವಧಿಯಲ್ಲಿ ಮೋದಿಯವರು ಈ ಗುಹೆಗೆ ಒಟ್ಟು ನಾಲ್ಕು ಬಾರಿ ಭೇಟಿ ನೀಡಿದ್ದರು. ಹಾಗೆ ಪ್ರತಿ ಬಾರಿ ಭೇಟಿ ನೀಡಿದಾಗಲೆಲ್ಲಾ ಸನ್ನಿಧಾನದ ಸೌಕರ್ಯಗಳಲ್ಲಿ, ಭದ್ರತೆಯಲ್ಲಿ ಹೆಚ್ಚಳ ಕಾಣತೊಡಗಿತು. ಇದು ಹೆಚ್ಚೆಚ್ಚು ಪ್ರಯಾಣಿಕರನ್ನು ಆಕರ್ಷಿಸಿದ್ದು, ಈ ಬಾರಿ ಕೇವಲ 50 ದಿನದಲ್ಲೇ 7,62,000 ಯಾತ್ರಿಕರು ಈ ದೇಗುಲವನ್ನು ಸಂದರ್ಶಿಸಿದ್ದಾರೆ ಎಂದರು. ಈ ಬಾರಿ ಮೇ 9ರಿಂದ ಈ ದೇಗುಲದ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಸಂಪೂರ್ಣ ಯಾತ್ರೆಯ ಅವಧಿಯಲ್ಲಿ 7,32,000 ಮಂದಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಅಕ್ಟೋಬರ್ ಅಂತ್ಯದ ವೇಳೆಗೆ ಯಾತ್ರೆಗೆ ತೆರೆ ಬೀಳಲಿದ್ದು, ಈ ಬಾರಿ ಯಾತ್ರಿಕರ ಸಂಖ್ಯೆ 10 ಲಕ್ಷ ದಾಟುವ ನಿರೀಕ್ಷೆಯಿದೆ. ಇದು ನಿಜವಾದರೆ, ಕೇದಾರನಾಥದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಯಾತ್ರಿಗಳು ಭೇಟಿ ನೀಡಿದಂತಾಗಲಿದೆ ಎಂದು ಮಂಗೇಶ್ ತಿಳಿಸಿದ್ದಾರೆ.
ಮತ್ತೆ 3 ಗುಹೆಗಳು
ಹಿಮಾಲಯದ ಗರ್ವಾಲ್ ಬೆಟ್ಟದ ಸಾಲುಗಳಲ್ಲಿರುವ ಸುಮಾರು 12,500 ಅಡಿ ಎತ್ತರದ ಈ ಗುಹೆಯಲ್ಲಿ ಧ್ಯಾನಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನೂ ಕಲ್ಪಿಸಲಾಗಿದೆ. ಈಗ ಧ್ಯಾನ ಗುಹೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಅದೇ ಮಾದರಿಯ ಇನ್ನೂ ಮೂರು ಗುಹೆಗಳನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿರುವುದಾಗಿ ರುದ್ರಪ್ರಯಾಗ ಜಿಲ್ಲಾಧಿಕಾರಿ ಮಂಗೇಶ್ ಘಿಲ್ಡಿಯಾಳ್ ತಿಳಿಸಿದ್ದಾರೆ.