ಬೆಂಗಳೂರು: ಪುತ್ರನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ 66 ಲಕ್ಷ ರೂ. ಪಡೆದುಕೊಂಡಿದಲ್ಲದೆ, ಅದನ್ನು ವಾಪಸ್ ಕೇಳಿದ ವೈದ್ಯನಿಗೆ ಹನಿ ಟ್ರ್ಯಾಪ್ ಮೂಲಕ ಬೆದರಿಸಿ ಮತ್ತೆ 50 ಲಕ್ಷ ರೂ. ಸುಲಿಗೆ ಮಾಡಿದ್ದ ಕಲಬುರಗಿ ಮೂಲದ ಮೂವರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಲಬುರಗಿಯ ನಾಗರಾಜ್ ಸಿದ್ಧಣ್ಣ ಬರೂಪಿ (36), ಮಧು ಮತ್ತು ಓಂಪ್ರಕಾಶ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಲಬುರಗಿ ಅಳಂದದ ಮೆಂತನಗಲ್ಲಿ ನಿವಾಸಿ ವೈದ್ಯರು ತಮ್ಮ ಊರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದು, ಮೊದಲ ಪುತ್ರ ಪಿಯುಸಿಯಲ್ಲಿ ಶೇ.80ರಷ್ಟು ಅಂಕ ಪಡೆದುಕೊಂಡಿದ್ದ. ಹೀಗಾಗಿ ಆತನಿಗೆ ಬೆಂಗಳೂರನ ವೈದ್ಯಕೀಯ ಸೀಟು ಕೊಡಿಸಬೇಕು ಎಂದು ಸಾಕಷ್ಟು ಕಡೆ ಶೋಧಿಸಿದ್ದಾರೆ. ಎಲ್ಲಿಯೂ ಸಿಕ್ಕಿಲ್ಲ. ಇದೇ ವೇಳೆ 8 ವರ್ಷಗಳಿಂದ ಪರಿಚಯವಿದ್ದ ನಾಗರಾಜ್, ತನಗೆ ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಪರಿಚಯವಿದ್ದು, ತಾನೂ ಕೊಡಿಸುತ್ತೇನೆ ಎಂದು 2021ರ ಫೆಬ್ರವರಿಯಿಂದ ಮಾರ್ಚ್ ವರೆಗೆ ಹಂತ-ಹಂತವಾಗಿ 66 ಲಕ್ಷ ರೂ. ಪಡೆದುಕೊಂಡಿದ್ದ. ವರ್ಷ ಕಳೆದರೂ ಎಂಬಿಬಿಎಸ್ ಸೀಟ್ ಕೊಡಿಸದಿದ್ದಾಗ ವೈದ್ಯರು ಹಣ ವಾಪಸ್ ಕೇಳಿದ್ದಾರೆ.
ಲಾಡ್ಜ್‌ನಲ್ಲಿ ಹನಿಟ್ರ್ಯಾಪ್: ಹಣ ವಾಪಸ್ ಕೊಡುವುದಾಗಿ ನಂಬಿಸಿ ವೈದ್ಯರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ನಾಗರಾಜ್, ಮಧು ಎಂಬಾತನ ಮೂಲದ ಮೆಜೆಸ್ಟಿಕ್‌ನ ಯು.ಟಿ.ಲಾಡ್ಜ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಪಕ್ಕದ ಕೊಠಡಿಯಲ್ಲಿ ಆರೋಪಿ ತಂಗಿದ್ದ. ತಡರಾತ್ರಿ 3.30ರ ಸುಮಾರಿಗೆ ವೈದ್ಯರು ಮಲಗಿದ್ದ ಕೊಠಡಿಯ ಬಾಗಿಲು ಬಡಿದ ಇಬ್ಬರು ಯುವತಿಯರು ಏಕಾಏಕಿ ಒಳಗೆ ನುಗ್ಗಿ ವೈ ದ್ಯರ ಪಕ್ಕ ಕುಳಿತು ಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಪೊಲೀಸ್ ಸಮವಸ್ತ್ರದಲ್ಲಿ ಕೊಠಡಿಗೆ ಬಂದ ಮೂವರು ವ್ಯಕ್ತಿಗಳು, ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 24 ಗಂಟೆಯಲ್ಲಿ ನಟಿಯ ಹತ್ಯೆ ಪ್ರಕರಣ ಭೇದಿಸಿದ ಭದ್ರತಾ ಪಡೆ: ನಾಲ್ವರು ಲಷ್ಕರ್ ಉಗ್ರರ ಹತ್ಯೆ
ಕೊಠಡಿಯಲ್ಲಿ ಉಂಟಾದ ಗಲಾಟೆ ಶಬ್ದ ಕೇಳಿ ಸ್ಥಳಕ್ಕೆ ಬಂದ ನಾಗರಾಜ್, ವೈದ್ಯರ ಪಕ್ಕದಲ್ಲಿ ಯುವತಿಯರನ್ನು ನಿಲ್ಲಿಸಿ ಫೋಟೋ ತೆಗೆದಿದ್ದಾನೆ. ಬಳಿಕ ಪೊಲೀಸ್ ಸಮವಸ್ತ್ರ ದಲ್ಲಿದ್ದ ಮೂವರು ವೈದ್ಯರ ಮೈಮೇಲಿದ್ದ ಚಿನ್ನದ ಸರ, ಉಂಗುರ, 35 ಸಾವಿರ ನಗದು ಕಸಿದುಕೊಂಡಿದ್ದಾರೆ. ಬಳಿಕ ನಾಗರಾಜ್, ಓಂಪ್ರಕಾಶ್ ಎಂಬಾತನನ್ನು ಸ್ಥಳಕ್ಕೆ ಕರೆಸಿಕೊಂಡು, ಈತ ಪೊಲೀಸರ ಬಳಿ ಮಾತನಾಡಿ ಪ್ರಕರಣ ಇತ್ಯರ್ಥ ಪಡಿಸುತ್ತಾನೆ. 50 ಲಕ್ಷ ರೂ. ಕೊಡುವಂತೆ ಸೂಚಿಸಿದ್ದಾನೆ. ಹಣವಿಲ್ಲ ಎಂದ ವೈದ್ಯರು ಊರಿಗೆ ಹೋಗಿ ಕೊಡುವುದಾಗಿ ಹೇಳಿದ್ದರು ಎಂದು ಪೊಲೀಸರು ಹೇಳಿದರು.
ಮನೆ ಅಡಮಾನ: ಕಲಬುರಗಿಗೆ ತೆರಳಿದ ವೈದ್ಯರು ತಮ್ಮ ಮನೆಯ ಆಧಾರ ಪತ್ರಗಳನ್ನು ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡಮಾನ ಇಟ್ಟು 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಬಳಿಕ ಕಲಬುರಗಿಯ ಎಸ್ಪಿ ಕಚೇರಿ ಬಳಿಯೇ ನಾಗರಾಜ್ ವೈದ್ಯರಿಂದ 50 ಲಕ್ಷ ರೂ. ಪಡೆದುಕೊಂಡಿದ್ದಾನೆ. ಕೆಲ ದಿನಗಳ ಬಳಿಕ ಯುವತಿಯರನ್ನು ಬಿಡುಗಡೆ ಮಾಡಿಸಲು 20 ಲಕ್ಷ ರೂ. ಕೊಡುವಂತೆ ದುಂಬಾಲು ಬಿದ್ದಿದ್ದಾನೆ. ಆಗ ಬೇಸತ್ತ ವೈದ್ಯರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಹೆಚ್ಚಿನ ತನಿಖೆಗಾಗಿ ಸಿಸಿಬಿ ವರ್ಗಾವಣೆ ಮಾಡಲಾಗಿತ್ತು. ತನಿಖೆ ಚುರುಕುಗೊಳಿಸಿದ ಸಿಸಿಬಿ ಪೊಲೀಸರು ನಾಗರಾಜ್ ಸೇರಿ ಮೂವರನ್ನು ಬಂಧಿಸಿದ್ದಾರೆ.