ಬರ್ಹಾಮ್‌ಪುರ(ಒಡಿಶಾ): ಇಲ್ಲಿನ ಸರ್ಕಾರಿ ಸ್ವಾಮ್ಯದ ಎಂಕೆಸಿಜಿ ವೈದ್ಯಕೀಯ ಕಾಲೇಜಿನ ಐವರು ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳನ್ನು ಜೂನಿಯರ್‌ಗಳಿಗೆ ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಈ ಹಿಂದೆ ಐವರು ವಿದ್ಯಾರ್ಥಿಗಳನ್ನು ಆರು ತಿಂಗಳ ಕಾಲ ಕ್ಯಾಂಪಸ್‌ನಿಂದ ವಜಾಗೊಳಿಸಲಾಗಿತ್ತು. ಬುಧವಾರ ನಡೆದ ರ‍್ಯಾಗಿಂಗ್ ವಿರೋಧಿ ಸಮಿತಿ ಸಭೆಯ ನಿರ್ಧಾರದಂತೆ ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ವೈದ್ಯಕೀಯ ಕಾಲೇಜು ಕ್ಯಾಂಪಸ್‌ನಲ್ಲಿ ಮತ್ತಷ್ಟು ರ‍್ಯಾಗಿಂಗ್ ಘಟನೆಗಳನ್ನು ತಡೆಯಲು ರ‍್ಯಾಗಿಂಗ್ ವಿರೋಧಿ ಸಮಿತಿಯು ಇಂತಹ ಕಠಿನ ನಿರ್ಧಾರವನ್ನು ತೆಗೆದುಕೊಂಡಿದೆ” ಎಂದು ಕಾಲೇಜಿನ ರ‍್ಯಾಗಿಂಗ್ ವಿರೋಧಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಎಸ್ಪಿ (ಬರ್ಹಾಮ್‌ಪುರ) ಸರ್ವನ್ ವಿವೇಕ್ ಎಂ. ಹೇಳಿದ್ದಾರೆ. .
ಆದರೆ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ಕಾಲೇಜಿನ ಪ್ರಭಾರಿ ಡೀನ್ ಸುಚಿತ್ರಾ ದಾಸ್ ನಿರಾಕರಿಸಿದ್ದಾರೆ.
ಎಫ್‌ಐಆರ್ ಆಧರಿಸಿ ಈ ವಿದ್ಯಾರ್ಥಿಗಳ ವಿರುದ್ಧ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಶುಕ್ರವಾರ ವಿದ್ಯಾರ್ಥಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬನಿಗೆ ರ‍್ಯಾಗಿಂಗ್ ಮಾಡಿದ್ದಕ್ಕಾಗಿ ವೈದ್ಯಕೀಯ ಕಾಲೇಜು ಅಧಿಕಾರಿಗಳು ನಾಲ್ಕನೇ ವರ್ಷದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಎರಡು ತಿಂಗಳ ಕಾಲ ಅಮಾನತುಗೊಳಿಸಿದ್ದರು.