Advertisement

ವೈದ್ಯಕೀಯ ವಿಧೇಯಕ: ವೈದ್ಯರ ಮುಷ್ಕರ ಇಂದು

12:24 PM Jun 16, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರವು ಸಾರ್ವಜನಿಕರ ಹಿತದೃಷ್ಠಿಯಿಂದ  ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕಕ್ಕೆ ಖಾಸಗಿ ವೈದ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಸೂದೆಯಲ್ಲಿ ಅಳವಡಿಸಲಾಗುತ್ತಿರುವ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿ ಹಾಗು ಚಿಕಿತ್ಸೆ ವಿಫ‌ಲವಾದರೆ ವೈದ್ಯರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶ ಕಲ್ಪಿಸುವ ವಿವಾದಾತ್ಮಕ ಅಂಶಗಳ ವಿರುದ್ಧ  ರಾಜ್ಯದ ಖಾಸಗಿ ಆಸ್ಪತ್ರೆಗಳ ವೈದ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

Advertisement

ಈ ವಿಧೇಯಕದಲ್ಲಿ ಖಾಸಗಿ ಆಸ್ಪತ್ರೆಯ ಶುಲ್ಕ ನಿಗಧಿ ಅಧಿಕಾವರನ್ನು ಸರ್ಕಾರ ಕಿತ್ತುಕೊಂಡಿದೆ ಮತ್ತು ವೈದ್ಯರು ಚಿಕಿತ್ಸೆ ನೀಡಿದಾಗ ಫ‌ಲಕಾರಿಯಾಗದೇ ಇದ್ದಲ್ಲಿ, ಅಂಥ ವೈದ್ಯರ ವಿರುದ್ಧ ದೂರು ದಾಖಲಿಸುವ ಅವಕಾಶ ನೀಡಿದೆ. ಇದರಿಂದ ಖಾಸಗಿ ಆಸ್ಪತ್ರೆ ಹಾಗೂ ಅಲ್ಲಿನ ವೈದ್ಯರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಸರ್ಕಾರ ಮಂಡಿಸಿದ ವಿಧೇಯಕಕ್ಕೆ ಅಗತ್ಯ ಬದಲಾವಣೆ ತರಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸಲಿದ್ದಾರೆ. 

ಮೆಜೆಸ್ಟಿಕ್‌ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ ತನಕ ಜಾಥ ನಡೆಸಿ, ನಂತರಪ್ರತಿಭಟನಾ ಸಭೆ ನಡೆಸಲಿದ್ದಾರೆ. ರಾಜ್ಯದಾದ್ಯಂತ ವಿವಿಧ ಖಾಸಗಿ ಆಸ್ಪತ್ರೆಯ 15 ಸಾವಿರಕ್ಕೂ ಅಧಿಕ ವೈದ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ವೈದ್ಯರ ಮುಷ್ಕರದಿಂದ ರೋಗಿಗಳು ಭಯಪಡಬೇಕಾಗಿಲ್ಲ. ಆಸ್ಪತ್ರೆಯಲ್ಲಿ  ತುರ್ತು ಸೇವೆ ಲಭ್ಯವಿರುತ್ತದೆ. ರೋಗಿಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ.

ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ. ನಮ್ಮ ಸಂಕಷ್ಟವನ್ನು ಸರ್ಕಾರಕ್ಕೆ ತಿಳಿಸಲಿದ್ದೇವೆ. ಸರ್ಕಾರದ ಈ ನಿಲುವಿನಿಂದ ವೈದ್ಯರಲ್ಲಿ ಹತಾಶೆ ಮೂಡಿದೆ. ಬಡವರ ಸೇವೆಗೆ ನಾವೂ ಬದ್ಧರಿದ್ದೇವೆ. ವೈದ್ಯರಿಗೆ ವಿಧೇಯಕದ ಕುರಿತು ಮಾಹಿತಿ ನೀಡಲು ಹಾಗು ಸರಕಾರದ ಗಮನ ಸೆಳೆಯಲು ಮುಷ್ಕರ ಮಾಡುತ್ತಿದ್ದೇವೆ ಎಂದು ರಾಜ್ಯ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ. ಅಜಯ್‌ ಕುಮಾರ್‌ ಹೇಳಿದರು.

ಮುಖ್ಯಮಂತ್ರಿ ಭೇಟಿ: ವಿಧಾನ ಸಭೆಯಲ್ಲಿ ಮಂಡಿಸಿರುವ ವಿಧೇಯಕದಲ್ಲಿ ಅಗತ್ಯ ಮಾರ್ಪಾಡು ತರುವಂತೆ ಕೋರಿ ರಾಜ್ಯ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಗುರುವಾರ ಸಂಜೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ನಿಮ್ಮ ಎಲ್ಲಾ ಬೇಡಿಕೆಗಳನ್ನು ಲಿಖೀತ ರೂಪದಲ್ಲಿ ಸಲ್ಲಿಸಿ, ಅದನ್ನು ಪರಿಶೀಲಿಸಿ, ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುತ್ತದೆ ಎಂಬ ಭರವಸೆಯನ್ನು ಮುಖ್ಯಮಂತ್ರಿಯವರು ವೈದ್ಯರ ಒಕ್ಕೂಟಕ್ಕೆ ನೀಡಿದ್ದಾರೆ.

Advertisement

ಸಿಎಂ ಭೇಟಿಯ ನಂತರ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಅಜಯ್‌ಕುಮಾರ್‌, ಖಾಸಗಿ ಆಸ್ಪತ್ರೆಗಳ ಸೇವೆಗೆ ಸರ್ಕಾರ ಶುಲ್ಕ ನಿಗದಿ ಮಾಡುವುದರಿಂದ ರೋಗಿಗಳಿಗೆ ಉತ್ತಮ ಸೌಲಭ್ಯ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲಾಗದು. ಸರ್ಕಾರದ ವಿವಿಧ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸರ್ಕಾರವೇ ಶುಲ್ಕ ನಿಗದಿ ಮಾಡುತ್ತಿದೆ. ಇದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಖಾಸಗಿ ರೋಗಿಗಳಿಗೆ ಸರ್ಕಾರ ಶುಲ್ಕ ನಿಗದಿ ಮಾಡುವುದು ಸರಿಯಲ್ಲ ಎಂದರು.

ಕರ್ನಾಟಕದ ಖಾಸಗಿ ಆಸ್ಪತ್ರೆಗಳು ವಿಶ್ವದಲ್ಲೇ ಶ್ರೇಷ್ಠ ಮಟ್ಟದ ಆರೋಗ್ಯ ಸೇವೆ ನೀಡುತ್ತಿವೆ. ಚಿಕಿತ್ಸೆಯ ಜತೆಗೆ ರೋಗಿಗೆ ಭದ್ರತೆ ನೀಡುವುದು ಮುಖ್ಯವಾಗಿದೆ. ಖಾಸಗಿ ಆಸ್ಪತ್ರೆಗಳು ಉತ್ತಮ ಸೇವೆ ನೀಡಲು ಸಿದ್ಧವಿದೆ ಹಾಗೂ ಗುಣಮಟ್ಟದ ಸೇವೆಯನ್ನು ನೀಡುತ್ತಲೇ ಬಂದಿದೆ. ಹೀಗಾಗಿ ಸರ್ಕಾರ ಮಂಡಿಸಿರುವ ವಿಧೇಯಕದಲ್ಲಿ ಯಾವೆಲ್ಲ ತಿದ್ದುಪಡಿ ಮಾಡಬೇಕು ಎಂಬ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಬೆಂಗಳೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಮೈಸೂರು ಹೀಗೆ ವಿವಿಧ ಭಾಗದಲ್ಲಿನ ಆಸ್ಪತ್ರೆಗಳ ಸೇವೆ ವಿಭಿನ್ನವಾಗಿರುತ್ತದೆ. ಏಕರೂಪವಾಗಿ ಶುಲ್ಕ ನಿಗದಿ ಮಾಡಲು ಸಾಧ್ಯವೇ? ಯಾವುದೋ ಒಂದು ಆಸ್ಪತ್ರೆ ಅಥವಾ ಎಲ್ಲೋ ಒಂದಿಬ್ಬರು ವೈದ್ಯರು ತಪ್ಪು ಮಾಡಿದ್ದಾರೆ ಎಂಬ ಮಾತ್ರಕ್ಕೆ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ. ಶೇ.99.99ರಷ್ಟು ವೈದ್ಯರು ಸೇವಾ ಮನೋಭಾವವನ್ನೇ ಹೊಂದಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿ(ಎನ್‌ಎಬಿಎಚ್‌) ನಿಮಯದಂತೆ ಎಲ್ಲಾ ಆಸ್ಪತ್ರೆಗಳು ಶುಲ್ಕ ನಿಗದಿ ಮಾಡುತ್ತಿವೆ. ಅದರ ಪಟ್ಟಿಯನ್ನು ಎನ್‌ಎಬಿಎಚ್‌ಗೆ ಕಳುಹಿಸಿಕೊಡುತ್ತಾರೆ. ಹೀಗಾಗಿ ರಾಜ್ಯ ಸರ್ಕಾರ ಇದರಲ್ಲಿ ಮಧ್ಯಪ್ರವೇಶ ಮಾಡುವುದು ಸರಿಯಲ್ಲ. ಇದರ ಬದಲಾಗಿ ಖಾಸಗಿ ಇನ್ಸೂರೆನ್ಸ್‌ ಸ್ಕೀಮ್‌ ಮಾಡಿ, ಅದನ್ನು ಸಬ್ಸಿಡಿ ರೂಪದಲ್ಲಿ ನೀಡುವ ಕ್ರಮ ಸರ್ಕಾರ ತೆಗೆದುಕೊಳ್ಳಲಿ ಎಂದು ಹೇಳಿದರು.

ಖ್ಯಾತ ವೈದ್ಯರಾದ ಡಾ.ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಈಗ ಮಂಡಿಸಿರುವ ವಿಧೇಯಕದ ಮುಖ್ಯಭಾಗ ಎಂದರೆ ವೈದ್ಯರ ವಿರುದ್ಧ ದೂರು ದಾಖಲಿಸಲು ಅವಕಾಶ ನೀಡಿರುವುದು. ಆ ಪ್ರಕಾರ, ವೈದ್ಯರನ್ನು ಬಂಧಿಸಿ, ಐದು ವರ್ಷ ಜೈಲು ಶಿಕ್ಷೆ ನೀಡಲು ಅವಕಾಶ ಇದೆ. ರೋಗಿಗೆ ಚಿಕಿತ್ಸೆ ನೀಡುವಾಗ ವೈದ್ಯನು ಉದ್ದೇಶ ಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ರೋಗಿ ಸತ್ತಾಗ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳುವುದಾದರೆ ಕಠಿಣವಾದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರೇ ಹಿಂದೇಟು ಹಾಕುತ್ತಾರೆ ಎಂದರು.

ರಾಜ್ಯದ 30 ರಿಂದ 50 ಬೆಡ್‌ ಆಸ್ಪತ್ರೆಗಳಿಗೆ ಇದರ ನೇರ ಪರಿಣಾಮ ಬೀರಲಿದೆ. ಅಲ್ಲದೇ ಆರೋಗ್ಯ ಸೇವೆ ಒದಗಿಸುತ್ತಿರುವ ಶೇ. 70ರಷ್ಟು ಖಾಸಗಿ ಆಸ್ಪತ್ರೆಗಳು ಸೇವೆಯನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು. ಸಂಘದ ಪದಾಧಿಕಾರಿಗಳಾದ ಡಾ.ರವೀಂದ್ರ, ಡಾ.ಅಲೆಕ್ಸಾಂಡರ್‌ ಥಾಮಸ್‌, ಡಾ.ಪ್ರಸನ್ನ ಮೊದಲಾದವರು ಸಿಎಂ ಭೇಟಿಯ  ನಿಯೋಗದಲ್ಲಿದ್ದರು.

ಅಗತ್ಯ ಸೇವೆಗೆ ತೊಂದರೆಯಿಲ್ಲ: ವಿಧೇಯಕದಲ್ಲಿ ಕೆಲವೊಂದು ಅಗತ್ಯ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿಧ ಭಾಗದ ವೈದ್ಯರು ಶುಕ್ರವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಮೆಜೆಸ್ಟಿಕ್‌ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ ತನಕ ಜಾಥಾ ನಡೆಯಲಿದೆ. ರಾಜ್ಯಾದ್ಯಂತ ಆಗಮಿಸುವ 15 ಸಾವಿರಕ್ಕೂ ಅಧಿಕ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದರೆ, ವೈದ್ಯರ ಮುಷ್ಕರದಿಂದ ರೋಗಿಗಳು ಭಯಪಡಬೇಕಾಗಿಲ್ಲ.

ಆಸ್ಪತ್ರೆಯಲ್ಲಿ ತುರ್ತು ಸೇವೆ ಲಭ್ಯವಿರುತ್ತದೆ. ರೋಗಿಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ. ಬದಲಾಗಿ ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸುವುದಾಗಿದೆ. ಬಡವರ ಸೇವೆಗೆ ನಾವೂ ಬದ್ಧರಿದ್ದೇವೆ. ಆದರೆ, ಸರ್ಕಾರದ ಈ ನಿಲುವಿನಿಂದ ವೈದ್ಯರಲ್ಲಿ ಹತಾಶೆ ಮೂಡಿದೆ. ವೈದ್ಯರಿಗೆ ಮಾಹಿತಿ ನೀಡಲು ಮುಷ್ಕರ ಮಾಡುತ್ತಿದ್ದೇವೆ ಎಂದು ಡಾ. ಅಜಯ್‌ ಕುಮಾರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next