ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ/ ಇನ್‌ಸ್ಟಿಟ್ಯೂಷನಲ್ ಕೋಟಾದ ಪ್ರವೇಶ ಶುಲ್ಕ ಪ್ರಸಕ್ತ ಸಾಲಿನಲ್ಲೇ ಶೇ.15ರಷ್ಟು ಹೆಚ್ಚಳವಾಗಲಿದೆ. ಆದರೆ ಸರ್ಕಾರಿ ವೈದ್ಯ ಹಾಗೂ ದಂತ ವೈದ್ಯ ಕಾಲೇಜುಗಳ ಪ್ರವೇಶ ಶುಲ್ಕ ಏರಿಕೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ.
ವಿಕಾಸಸೌಧದಲ್ಲಿ ಗುರುವಾರ ಸಚಿವ ಇ.ತುಕಾರಾಂ ಅಧ್ಯಕ್ಷತೆಯಲ್ಲಿ ನಡೆದ ಖಾಸಗಿ, ಧಾರ್ಮಿಕ ಮತ್ತು ಭಾಷಾ ಅಲ್ಪ ಸಂಖ್ಯಾತ ಹಾಗೂ ಡೀಮ್ಡ್ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾತನಾಡಿದ ಇ. ತುಕಾರಾಂ, ಖಾಸಗಿ ವೈದ್ಯ ಕಾಲೇಜುಗಳು ಶೇ.20ರಿಂದ ಶೇ. 25ರಷ್ಟು ಶುಲ್ಕ ಹೆಚ್ಚಿಸಲು ಬೇಡಿಕೆ ಇಟ್ಟಿದ್ದವು. ಅಂತಿಮವಾಗಿ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಲಾಯಿತು. ರಾಜ್ಯದಲ್ಲಿ 18 ಸರ್ಕಾರಿ ವೈದ್ಯ ಕಾಲೇಜು ಸೇರಿದಂತೆ ಒಟ್ಟು 51 ವೈದ್ಯಕೀಯ ಕಾಲೇಜುಗಳಿದ್ದು, ಸರ್ಕಾರಿ ಕೋಟಾದಡಿ 7,645 ವೈದ್ಯ ಸೀಟುಗಳಿವೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜಿನಲ್ಲಿ 150 ಸೀಟುಗಳು ಲಭ್ಯ ವಾಗಲಿವೆ. ಕಾರವಾರದ ವೈದ್ಯ ಕಾಲೇಜಿನ ಪ್ರಕರಣ ನ್ಯಾಯಾಲ ಯದಲ್ಲಿದ್ದು, ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ.
ಜೂ. 25ರ ಹೊತ್ತಿಗೆ ಸ್ಪಷ್ಟತೆ ಸಿಗಲಿದೆ. ಮೂರು ಸರ್ಕಾರಿ ದಂತ ವೈದ್ಯ ಕಾಲೇಜು ಸೇರಿದಂತೆ ಒಟ್ಟು 35 ದಂತ ವೈದ್ಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ 2,800 ಸೀಟು ಲಭ್ಯವಾಗಲಿದೆ ಎಂದು ಹೇಳಿದರು.
ಹಿಂದಿನ ವರ್ಷ ಶೇ.8 ಏರಿಕೆ: ಕಳೆದ ವರ್ಷ ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ವೈದ್ಯ ಕೋರ್ಸ್‌ನ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಶುಲ್ಕ ನಿಯಂತ್ರಣ ಸಮಿತಿಯು ಹೆಚ್ಚಳ ಮಿತಿಯನ್ನು ಶೇ.8ಕ್ಕೆ ನಿಗದಿಪಡಿಸಿತ್ತು. ಹಾಗಾಗಿ ವೈದ್ಯ ಕೋರ್ಸ್‌ನ ಪ್ರವೇಶ ಶುಲ್ಕ ಕಳೆದ ವರ್ಷ 70,000 ರೂ.ನಿಂದ 97,350 ರೂ.ಗೆ ಏರಿಕೆಯಾಗಿತ್ತು. ಕಳೆದ ವರ್ಷ ಸರ್ಕಾರಿ ವೈದ್ಯ ಕಾಲೇಜುಗಳಲ್ಲಿನ ವೈದ್ಯ ಕೋರ್ಸ್ ಪ್ರವೇಶ ಶುಲ್ಕ 15,000 ರೂ.ನಿಂದ 50,000 ರೂ.ಗೆ ಏರಿಕೆಯಾಗಿತ್ತು. ಹಾಗಾಗಿ ಈ ಬಾರಿ ಶುಲ್ಕ ಹೆಚ್ಚಿಸದಿರಲು ಸರ್ಕಾರ ನಿರ್ಧರಿಸಿದೆ.