Advertisement

ಕಬ್ಬು ಹೇರಲು ಯಂತ್ರ ತಯಾರಿಸಿದ ರೈತ! ಕೂಲಿಯಾಳು ಸಮಸ್ಯೆಗೆ ಸಿಕ್ಕಿತು ಪರಿಹಾರ

12:58 PM Oct 29, 2020 | sudhir |

ತೇರದಾಳ: ಕೃಷಿ ಚಟುವಟಿಕೆಯಲ್ಲಿ ಕೂಲಿಯಾಳುಗಳ ಸಮಸ್ಯೆ ಯಾವಾಗಲೂ ಇದ್ದದ್ದೇ. ಈ ಸಮಸ್ಯೆ ಪರಿಹಾರಕ್ಕೆ ಹಲವಾರು
ಯಂತ್ರಗಳು ಬಂದಿವೆ. ಅಂತಹುಗಳ ಮಾದರಿಯಲ್ಲಿಯೇ ಇಲ್ಲೊಬ್ಬ ರೈತ ಕಬ್ಬು ಹೇರುವ ಯಂತ್ರ ತಯಾರಿಸಿ ಮೆಚ್ಚುಗೆ
ಗಳಿಸಿದ್ದಾರೆ.

Advertisement

ಕಾರ್ಖಾನೆಗಳಿಗೆ ಕಬ್ಬು ಸಾಗಿಸುವಾಗ ಟ್ರಾಕ್ಟರ್‌ಗಳಿಗೆ ಕಬ್ಬು ತುಂಬಿಸುವ ಯಂತ್ರ ತಯಾರಿಸುವ ಮೂಲಕ ಕೂಲಿಕಾರರ ಹಾಗೂ ಸಮಯದ ಉಳಿತಾಯ ಮಾಡಲು ತಾಲೂಕಿನ ಸಸಾಲಟ್ಟಿ ಗ್ರಾಮದ ಬಸಲಿಂಗಪ್ಪ ಬಸಪ್ಪ ಪಟ್ಟಣಶೆಟ್ಟಿ ಅನಕ್ಷರಸ್ಥ ರೈತ ಯಾವ
ಇಂಜಿನಿಯರ್‌ಗೂ ಕಡಿಮೆಯಿಲ್ಲದಂತೆ ಕೆಲಸ ಮಾಡಿದ್ದಾರೆ.

ಟ್ರಾಕ್ಟರ್‌ ಮೂಲಕ ಸುತ್ತಲಿನ ಕಾರ್ಖಾನೆಗಳಿಗೆ 30 ವರ್ಷ ಕಬ್ಬು ಸಾಗಿಸಿದ್ದ ಇವರು ಬರಬರುತ್ತ ಕೂಲಿಕಾರರು ಸಿಗದೆ ಸಮಸ್ಯೆ ಎದುರಿಸತೊಡಗಿದರು. ಕಬ್ಬು ಕಟಾವು ಮಾಡುವ ಗ್ಯಾಂಗ್‌ ನಿರ್ವಹಿಸಲು ಈಗ ಕನಿಷ್ಟವೆಂದರು 20 ಜನ ಕಾರ್ಮಿಕರು ಅಗತ್ಯ. ಒಬ್ಬರಿಗೆ 50 ಸಾವಿರ ರೂ. ಮುಂಗಡ ಹಣ ಬೇಕು. ಇದೆಲ್ಲವನ್ನು ಮನಗಂಡು ಇವರು ಈ ಮಧ್ಯೆ ಗ್ಯಾಂಗ್‌ ನಿರ್ವಹಣೆ, ಕಬ್ಬು ಸಾಗಣೆ ನಿಲ್ಲಿಸಿದ್ದರು. ಇದಲ್ಲದೆ ಈ ವರ್ಷ ಕೊರೊನಾ ಇರುವುದರಿಂದ ಮಹಾರಾಷ್ಟ್ರದಿಂದ ಗ್ಯಾಂಗ್‌(ಗಬಾಳಿ)ಗಳನ್ನು
ಕರೆತರುವ ಸಂಭವವಿಲ್ಲ. ಇವರ ಜಮೀನಿನ ಕಬ್ಬು ಸಾಗಿಸಲು ತೊಂದರೆಯಾಗತೊಡಗಿತು. ಆಗ ಮಕ್ಕಳಾದ ಹೊಳೆಬಸಪ್ಪ ಹಾಗೂ ರಮೇಶ ಏನಾದರು ದಾರಿ ಮಾಡಿ ಎಂದು ಹೇಳಿದರು.

ಆಗಲೇ ಈ ಯಂತ್ರದ ವಿಚಾರ ಹೊಳೆದಿದೆ. ಆಗ ಮಕ್ಕಳು ಹಾಗೂ ಲಕ್ಷ್ಮಣ ಮದಲಮಟ್ಟಿ, ಕುಮಾರ ಉಳ್ಳಾಗಡ್ಡಿ ಇವರ ಮುಂದೆ
ಹೇಳಿದಾಗ ಅವರು ಸಂಪೂರ್ಣ ಬೆಂಬಲ ಸೂಚಿಸಿದ್ದಲ್ಲದೆ ಯಂತ್ರ ತಯಾರಿಸುವ ಮೂರೂವರೆ ತಿಂಗಳು ಕಾಲ ಇವರ ಜತೆ
ಕೆಲಸ ಮಾಡಿ ಯಶಸ್ವಿಗೊಳಿದ್ದಾರೆ. ಬಸಲಿಂಗಪ್ಪ ಅವರು ಸುತ್ತಲಿನ ಹಾರೂಗೇರಿ, ರಾಯಬಾಗ, ಅಥಣಿ, ಮಹಾಲಿಂಗಪುರಗಳ ಗುಜರಿ(ಸ್ಕ್ರಾಪ್‌) ಅಂಗಡಿಗಳನ್ನು ಸುತ್ತಾಡಿ ಬೇಕಾದ ಹಳೆಯ ವಸ್ತುಗಳನ್ನು ಖರೀದಿಸಿ ಯಂತ್ರ ತಯಾರಿಸುವಲ್ಲಿ ಎರಡು ಬಾರಿ ವಿಫಲರಾಗಿ ಮೂರನೇ ಬಾರಿ ಯಶಸ್ಸು ಕಾಣುವಷ್ಟರಲ್ಲಿ 20 ಸಾವಿರ ರೂ. ಮೊತ್ತದ ವಸ್ತುಗಳನ್ನು ಹಾಳು ಮಾಡಿದ್ದಾರೆ.

ಕೊನೆಯದಾಗಿ ಕೊಲ್ಲಾಪುರದಿಂದ ಗೇರ ಬಾಕ್ಸ್‌ ಹಾಗೂ ಡಿಸೈಲ್‌ ಇಂಜಿನ್‌(ಪಿಟರ್‌) ಅಳವಡಿಸಿ ನೆಲದಿಂದ 20 ಅಡಿಗಳಿಗೂ ಅಧಿಕ ಎತ್ತರದ ಟ್ರಾಕ್ಟರ್‌ ಟ್ರೆಲರ್‌ನಲ್ಲಿ ಕಬ್ಬು ಲಿಫ್ಟ್‌ ಮಾಡುವಂತೆ ಮಾಡುವುದರೊಳಗೆ ಇದಕ್ಕಾಗಿದ್ದು ಬರೋಬ್ಬರಿ ಒಂದೂವರೆ ಲಕ್ಷ ರೂ. ಖರ್ಚು.

Advertisement

ಕಬ್ಬು ಹೇರುವ ಯಂತ್ರದಿಂದ ಕೇವಲ 10 ಕೂಲಿ ಕಾರ್ಮಿಕರು ಒಂದೂವರೆ ಗಂಟೆಯಲ್ಲಿ 20 ಟನ್‌ ಕಬ್ಬು ಹೇರುವ ಸಾಮರ್ಥ್ಯ ಹೊಂದಿದ್ದಾರೆ. ಒಂದೂವರೆ ಲೀಟರ್‌ ಡಿಸೈಲ್‌ ಬೇಕಾಗುತ್ತದೆ. ಹೀಗೆ ಕೂಲಿ ಕಾರ್ಮಿಕರು ಹಾಗೂ ಸಮಯ ಉಳಿತಾಯ ಮಾಡುವ ಮೂಲಕ ಕಬ್ಬು ಸಾಗಾಣಿಕೆ ಯಂತ್ರ ಸುತ್ತಮುತ್ತ ಭಾರೀ ಸದ್ದು ಮಾಡಿದ್ದು, ಅದನ್ನು ನೋಡಲು ಹಲವರು ಭೇಟಿ ನೀಡುತ್ತಿದ್ದಾರೆ.

– ಬಿ.ಟಿ. ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next