Advertisement

ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ : ಸಚಿವ ಸುಧಾಕರ್‌

05:59 PM Jul 23, 2021 | Team Udayavani |

ಪ್ರಮುಖಾಂಶಗಳು

  • ಪ್ರವಾಹಪೀಡಿತ ಜಿಲ್ಲಾಡಳಿತಗಳಿಗೆ ಕಟ್ಟೆಚ್ಚರಕ್ಕೆ ತಾಕೀತು
  • ಕಾಳಜಿಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಆರೋಗ್ಯ ಸೇವೆಗೆ ಸೂಚನೆ
  • ಹಿರಿಯ ನಾಗರಿಕರು, ಗರ್ಭಿಣಿ – ಬಾಣಂತಿಯರ ಮತ್ತು ಮಕ್ಕಳ ಬಗ್ಗೆ ಕಾಳಜಿಗೆ ತಾಕೀತು
  • ಕೋವಿಡ್‌ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೇಚ್ಚರಿಕೆ ಕ್ರಮಕ್ಕೆ ಸೂಚನೆ
  • ಕಾಳಜಿಕೇಂದ್ರಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳ ಪಾಲಿಸುವಂತೆ ಆದೇಶ
Advertisement

 ಬೆಂಗಳೂರು : ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವುದರಿಂದ ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ಸೂಚನೆ ನೀಡಿದ್ದಾರೆ.

ಪ್ರವಾಹಪೀಡಿತ ಗ್ರಾಮಗಳು, ಸ್ಥಳಾಂತರಗೊಂಡಿರುವ ಗ್ರಾಮಗಳು, ಸಂತ್ರಸ್ತರಿಗೆ ತೆರೆಯುವ ಕಾಳಜಿ ಕೇಂದ್ರಗಳ ಬಳಿ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಿರುವ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಶುಕ್ರವಾರ ಅಗತ್ಯ ಸೂಚನೆಗಳನ್ನು ನೀಡಿದರು.

ಕಾಳಜಿಕೇಂದ್ರಗಳಲ್ಲಿ ಆಶ್ರಯಪಡೆದಿರುವ ಸಂತ್ರಸ್ತರಿಗೆ ಶುದ್ಧಕುಡಿಯುವ ನೀರು ಮತ್ತು ಗುಣಮಟ್ಟದ ಆಹಾರ ಪೂರೈಸಬೇಕು. ಒಂದು ವೇಳೆ ಶುದ್ಧಕುಡಿಯುವ ನೀರಿನ ಘಟಕಗಳು ಸಮೀಪದಲ್ಲಿ ಇಲ್ಲದಿದ್ದರೆ ಲಭ್ಯವಿರುವ ನೀರನ್ನೇ ಕಾಯಿಸಿ, ಶೋಧಿಸಿ ನೀಡಲು ಸೂಚಿಸಲಾಗಿದೆ. ಕೇಂದ್ರಗಳ ಒಳಗೆ ಮತ್ತು ಹೊರಭಾಗದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಪ್ರತಿದಿನ ರೋಗನಿರೋದಕ ದ್ರಾವಣ ಸಿಂಪಡಿಸಬೇಕು, ಕೇಂದ್ರದಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು ಮತ್ತು ಅವರಿಗೆ ಕೋವಿಡ್‌ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ತಜ್ಞರು ಅರಿವು ಮೂಡಿಸುವ ಕೆಲಸ ಮಾಡಲು ಆದೇಶಿಸಿದರು.

ಇದನ್ನೂ ಓದಿ : ಹಿಂದುಳಿದ ವರ್ಗಕ್ಕೆ ಸಿಎಂ ಸ್ಥಾನ ನೀಡಿ : ಹಿರಿಯ ಹೋರಾಟಗಾರ ಹೆಚ್.ನರಸಿಂಹಪ್ಪ ಒತ್ತಾಯ

Advertisement

ಹಿರಿಯ ನಾಗರಿಕರು, ಬಾಣಂತಿಯರು, ಗರ್ಭಿಣಿಯರು ಮತ್ತು ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ ಅಥವಾ ತಾಲ್ಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಿಶೇಷ ಕಾಳಜಿಯಿಂದ ಅವರನ್ನು ನೋಡಿಕೊಳ್ಳಬೇಕು. ಜ್ವರ ಹಾಗೂ ಇತರೆ ರೋಗಲಕ್ಷಣ ಇದ್ದವರಿಗೆ ತಕ್ಷಣ ಕೋವಿಡ್‌ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಕಾಳಜಿಕೇಂದ್ರಗಳಲ್ಲಿರುವ ಎಲ್ಲರಿಗೂ ಮಾಸ್ಕ್‌ ವಿತರಿಸಬೇಕು, ಸ್ಯಾನಿಟೈಸರ್‌ ನೀಡುವ ಜತೆಗೆ ಶುಚಿತ್ವಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜತೆಗೆ ಕಡ್ಡಾಯವಾಗಿ ಭೌತಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವರು ಎಚ್ಚರಿಕೆ ನೀಡಿದರು.

ಕಳೆದ ವರ್ಷಗಳಿಗೆ ಹೋಲಿಸಿದರೆ ಡೆಂಗ್ಯೂ, ಚಿಕೂನ್‌ಗುನ್ಯಾ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಡಿಮೆ ಪ್ರಮಾಣದಲ್ಲಿದೆ. ಮುಂದಿನ ಎರಡು ತಿಂಗಳಲ್ಲಿ ಅನೇಕ ಹಬ್ಬ ಹರಿದಿನಗಳ ಆಚರಣೆ ಹೆಚ್ಚು. ಈ ಹಿನ್ನೆಲೆಯಲ್ಲಿ ವಿಶೇಷ ಗಮನಹರಿಸಿ ಪರಿಸ್ಥಿತಿ ನಿಭಾಯಿಸುವಂತೆ ಜಿಲ್ಲಾಡಳಿತಗಳ ಜತೆ ಸಮನ್ವಯ ಇಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಕಾಳಜಿ ಕೇಂದ್ರಗಳ ಸಮೀಪದಲ್ಲಿ ಪಿಎಚ್‌ಸಿ ಅಥವಾ ಇತರೆ ಆರೋಗ್ಯ ಸೌಲಭ್ಯಗಳು ಇಲ್ಲದಿದ್ದರೆ ಸಂಚಾರಿ ಆರೋಗ್ಯ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕು. ಚಳಿಗಾಲದ ಜತೆ ಹಬ್ಬಗಳ ಹಿನ್ನೆಲೆ ಇರುವುದರಿಂದ ಕೋವಿಡ್‌ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಇಲಾಖೆಯಿಂದ ಯಾವುದೇ ಲೋಪ ಆಗದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರವಾಹ ಪರಿಸ್ಥಿತಿ ಗಂಭೀರವಾಗಿರುವ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರನ್ನು ಇತರೆ ಇಲಾಖೆಗಳ ಜತೆ ಸಮನ್ವಯ ಕಾಯ್ದುಕೊಳ್ಳಲು ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡುವಂತೆಯೂ ಸಚಿವರು ಆದೇಶ ನೀಡಿದರು. ಸಭೆಯಲ್ಲಿ ಇಲಾಖೆಯ ನಾನಾ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಗತಿ ಪರಿಶೀಲನೆಯನ್ನೂ ಸಚಿವ ಸುಧಾಕರ್‌ ಪರಾಮರ್ಶಿಸಿದರು.

ಆರೋಗ್ಯ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ, ವೈದ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌, ಎನ್‌ಎಚ್‌ಎಂ ವ್ಯವಸ್ಥಾಪಕ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌, ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್‌ ಪಾಟೀಲ್‌ ಹಾಗೂ ನಾನಾ ವಿಭಾಗಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : ಉದ್ಯಮಿಗಳಿಂದ ಅರ್ಜಿ ಆಹ್ವಾನ, ವಿಜೇತ ನವೋದ್ಯಮಗಳಿಗೆ ರೂ 25 ಲಕ್ಷದವರೆಗೆ ಅನುದಾನ

ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಮುಂದೆ ಚಳಿಗಾಲ ಮತ್ತು ಹಬ್ಬದ ದಿನಗಳು ಇರುವುದರಿಂದ ಕೋವಿಡ್‌ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ  ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಜಿಲ್ಲಾಡಳಿತಗಳಿಗೆ ಅಗತ್ಯ ಸೂಚನೆಗಳನ್ನು ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಟ್ಟಾರೆ ಸಂಕಷ್ಟದಲ್ಲಿರುವ ಪ್ರದೇಶಗಳ ಜನರ ಆರೋಗ್ಯ ಸಂರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಲಾಗುವುದುʼ

 ಡಾ. ಕೆ. ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು.

ಇದನ್ನೂ ಓದಿ : ವ್ಯಕ್ತಿತ್ವ ವಿಕಸನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ- ಸಚಿವ ಡಾ‌. ನಾರಾಯಣಗೌಡ

Advertisement

Udayavani is now on Telegram. Click here to join our channel and stay updated with the latest news.

Next