Advertisement

Udupi;ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ: ಡಿಸಿ ಸೂಚನೆ

11:31 PM Feb 13, 2024 | Team Udayavani |

ಮಣಿಪಾಲ: ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬೇಸಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇರುವ ಪ್ರದೇಶಗಳಿಗೆ ನೀರು ಒದಗಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆಯವರು ಜಿಲ್ಲೆಯ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕು. ಅಳವಡಿಸದಿದ್ದರೆ ಸಮುದ್ರದ ಉಪ್ಪು ನೀರು ಸಿಹಿ ನೀರಿನೊಂದಿಗೆ ಬೆರೆಯಲಿದೆ. ಜಿಲ್ಲೆಯಲ್ಲಿ ಬೇಸಗೆಯಲ್ಲಿ ಅಂತರ್ಜಲ ಮಟ್ಟ ಕುಸಿಯುವುದರ ಜತೆಗೆ ಕಣಿವೆಗಳಲ್ಲಿ ನೀರು ಹರಿವು, ಕೆರೆ, ಜಲಾಶಯಗಳಲ್ಲಿ ನೀರು ಬತ್ತುತ್ತದೆ. ಹೀಗಾಗಿ ನೀರಿನ ಕೊರತೆ ಕೆಲವು ಪ್ರದೇಶಗಳಲ್ಲಿ ಆಗುವ ಸಾಧ್ಯತೆ ಹೆಚ್ಚಿದೆ. ಜನಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಲು ನೀರು ಲಭ್ಯವಿರುವ ಖಾಸಗಿಯವರ ಬಾವಿ, ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಂಡು ಅಗತ್ಯ ಕಂಡುಬಂದಲ್ಲಿ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದರು.

ಮೇವು ಲಭ್ಯ
ಜಿಲ್ಲೆಯಲ್ಲಿ ಪ್ರಸ್ತುತ 21 ವಾರಗಳಿಗೆ ಆಗುವಷ್ಟು 2.25 ಲಕ್ಷ ಮೆಟ್ರಿಕ್‌ ಟನ್‌ ಮೇವು ಲಭ್ಯವಿದೆ. ಸರಕಾರ ಈಗಾಗಲೇ 5 ಲಕ್ಷ ರೂ. ಅನುದಾನವನ್ನು ಮೇವು ಸಂಗ್ರಹಕ್ಕೆ ಬಿಡುಗಡೆ ಮಾಡಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ನೀಡಲಾಗಿರುವ ಮೇವಿನ ಮಿನಿ ಕಿಟ್‌ ಹಾಗೂ ಪ್ರಸ್ತುತ ಬೆಳೆದಿರುವ ಮೇವು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ಮುಂದೇನಾದರೂ ಸಮಸ್ಯೆ ಉಂಟಾದರೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಪಶು ಸಂಗೋಪನೆ ಇಲಾಖೆ ವತಿಯಿಂದ 1,654 ಕಿಟ್‌ ಹಾಗೂ ಕೆಎಂಎಫ್‌ ವತಿಯಿಂದ 3,918 ಕಿಟ್‌ ವಿತರಿಸಲಾಗಿದೆ. ಟಾಸ್ಕ್ ಫೋರ್ ಸಮಿತಿ ಸಭೆ ನಡೆಸಿ ಬರ ನಿರ್ವಹಣೆ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಮಳೆ ನೀರು ಹರಿದುಹೋಗುವಂತೆ ತೋಡು ಹಾಗೂ ಚರಂಡಿಗಳಲ್ಲಿರುವ ಹೂಳು, ತರಗೆಲೆ, ಕಸ ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ನೀರು ನಿಂತಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಆಸ್ಪದವಾಗಿ ರೋಗ ರುಜಿನ ಹರಡುವ ಸಾಧ್ಯತೆ ಇರುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿ, ಶುದ್ಧ ಕುಡಿಯುವ ನೀರಿನ ಬಾವಿಯ ಸ್ವತ್ಛತೆ, ಸರಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿರುವ ಕಸ-ಕಡ್ಡಿಗಳನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು ಎಂದರು.

Advertisement

ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಆಶ್ರಯ ತಾಣಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಆವಶ್ಯಕತೆ ಇದ್ದಲ್ಲಿ ಇವುಗಳ ಬಳಕೆ ಮಾಡಿಕೊಳ್ಳಬೇಕು. ಇವುಗಳ ನಿರ್ವಹಣೆ ಮಾಡಲು ಸಮಿತಿ ರಚಿಸಬೇಕು. 300 ಜನ ಆಪದ್‌ ಮಿತ್ರ ಸ್ವಯಂ ಸೇವಕರಿದ್ದು, ಇದರ ಜತೆಯಲ್ಲಿ ಇನ್ನು ಹೆಚ್ಚು ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಬೇಕು ಎಂದು ಹೇಳಿದರು.

ನೀರಿನ ಮಿತ ಬಳಕೆ
ಸಾರ್ವಜನಿಕರು ನೀರಿನ ಮಿತ ಬಳಕೆ ಮಾಡಬೇಕು, ಪ್ರತೀ ಕಟ್ಟಡ ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊçಲು ಅಳವಡಿಸಿ ನೀರು ಎಲ್ಲಿಯೂ ಪೋಲಾಗದಂತೆ ನೋಡಿಕೊಂಡರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರ ಬಗ್ಗೆ ಒತ್ತು ನೀಡಬೇಕು. ಸ್ಥಳೀಯ ಸಂಸ್ಥೆಗಳು ಕಟ್ಟಡ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಮಳೆ ನೀರಿನ ಕೊçಲು ಅಳವಡಿಸಲು ನಿರ್ದೇಶಿಸಿದರು.

ವಿದ್ಯುತ್‌ ತಂತಿಗಳಿಗೆ ಅಪಾಯಕಾರಿಯಾಗಿರುವಂತಹ ಮರದ ಕೊಂಬೆಗಳನ್ನು ಹಾಗೂ ಗಾಳಿ ಮಳೆಗೆ ಬುಡ ಸಮೇತ ಉರುಳಿ ಬೀಳುವಂತ ಮರಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಅರಣ್ಯ ಇಲಾಖೆಯು ಇತರ ಇಲಾಖೆಯ ಸಂಹಯೋಗದೊಂದಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌, ಉಪ ವಿಭಾಗಾಧಿಕಾರಿ ರಶ್ಮಿ ಎಸ್‌., ಪೌರಾಯುಕ್ತ ರಾಯಪ್ಪ, ತಹಶೀಲ್ದಾರ್‌ಗಳು, ತಾ.ಪಂ. ಇಒಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next