Advertisement

ಬೆಳೆ ಪರಿಹಾರ ಶೀಘ್ರ ವಿತರಿಸಲು ಕ್ರಮ

04:46 PM May 23, 2022 | Niyatha Bhat |

ಶಿವಮೊಗ್ಗ: ಅತಿವೃಷ್ಟಿಯಿಂದ ಬೆಳೆಹಾನಿ ಸಂಭವಿಸಿರುವ ಶಿಕಾರಿಪುರ ತಾಲೂಕಿನ ಅಂಜನಾಪುರ ಹೋಬಳಿಯ ರೈತರ ಹೊಲಗಳಿಗೆ ಜಿಲ್ಲಾಧಿಕಾರಿ ಡಾ| ಆರ್.ಸೆಲ್ವಮಣಿ ಹಾಗೂ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಅತ್ತಿಬೈಲು, ಹಾರೋಗೊಪ್ಪಾ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು.

ಬಳಿಕ ಜಿಲ್ಲಾಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿ, ಬೆಳೆ ಹಾನಿ ಕುರಿತು ಈಗಾಗಲೇ ಅಧಿಕಾರಿಗಳು ಪ್ರಾಥಮಿಕ ಹಾನಿ ವರದಿ ಸಲ್ಲಿಸಿದ್ದಾರೆ. ಬೆಳೆ ಹಾನಿ ಕುರಿತು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಜಂಟಿ ಸರ್ವೇ ಕಾರ್ಯ ಆರಂಭಿಸಿದ್ದಾರೆ. ಸರ್ವೇ ಬಳಿಕ ನಿಖರ ವರದಿ ಪಡೆದು ಆದಷ್ಟು ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಕಾಲಿಕ ಮಳೆಯಿಂದಾಗಿ ರೈತರು ಕಟಾವು ಮಾಡಿ ರಾಶಿ ಹಾಕಿದ್ದ ಮುಸುಕಿನ ಜೋಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಮಳೆಯಿಂದಾಗಿ ಮೊಳೆತು ಉಪಯೋಗಕ್ಕೆ ಬಾರದಂತಾಗಿರುವುದು ಕಂಡು ಬಂದಿದೆ. ಈ ಹಾನಿಗಳಿಗೆ ಯಾವ ರೀತಿಯಲ್ಲಿ ಪರಿಹಾರ ಒದಗಿಸಬಹುದು ಎಂಬುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಭತ್ತದ ಗದ್ದೆಗಳಿಗೆ ಮಳೆ ನೀರು ನುಗ್ಗಿ ಭತ್ತದ ಪೈರಿನಲ್ಲಿ ಕೆಸರು ತುಂಬಿ ಹಾಳಾಗಿದೆ. ಕೆರೆಗಳ ಏರಿಗಳು ಒಡೆಯದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಕೆರೆಗಳ ಅಭಿವೃದ್ಧಿ ಪಡಿಸಲು ಗ್ರಾಮ ಪಂಚಾಯತ್‌ಗಳಿಗೆ ಪೂರ್ಣ ಅಧಿಕಾರವಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ ಗ್ರಾಮಗಳಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ ಎಂದರು.

ಬೆಳೆ ಹಾನಿ ವಿವರ

Advertisement

ಜಿಲ್ಲೆಯಲ್ಲಿ ಮೇ 17ರಿಂದ 21ರವರೆಗೆ ಬಿದ್ದ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 3097 ಹೆಕ್ಟೇರ್‌ ಬೆಳೆ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಇದರಲ್ಲಿ 2518 ಹೆಕ್ಟೇರ್‌ ಮುಸುಕಿನ ಜೋಳ ಮತ್ತು 486 ಹೆಕ್ಟೇರ್‌ ಭತ್ತದ ಬೆಳೆಗಳಿಗೆ ಹಾನಿಯಾಗಿದೆ. ಸುಮಾರು 20 ಹೆಕ್ಟೇರ್‌ ಪ್ರದೇಶದಲ್ಲಿ ಹೂಳು ತುಂಬಿದೆ. ಶಿಕಾರಿಪುರದಲ್ಲಿ 250 ಹೆಕ್ಟೇರ್‌ ಭತ್ತ ಮತ್ತು 1230 ಹೆಕ್ಟೇರ್‌ ಮುಸುಕಿನ ಜೋಳಕ್ಕೆ ಹಾನಿಯಾಗಿದ್ದು, ಸೊರಬ ತಾಲೂಕಿನಲ್ಲಿ 128ಹೆಕ್ಟೇರ್‌ ಭತ್ತ ಮತ್ತು 1244 ಹೆಕ್ಟೇರ್‌ ಮುಸುಕಿನ ಜೋಳಕ್ಕೆ ಹಾನಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕಾರಿಪುರ ತಹಶೀಲ್ದಾರ್‌ ಕವಿರಾಜ್‌, ಕೃಷಿ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next