Advertisement

ಮಾಪನ ಇಲಾಖೆಗೆ ಇಲ್ಲ ಕಾನೂನು ಬಲ: ತೂಕ, ಅಳತೆ ವಂಚನೆ; ಕ್ರಮ ದಂಡಕ್ಕಷ್ಟೇ ಸೀಮಿತ

09:22 AM Aug 17, 2022 | Team Udayavani |

ಬೆಂಗಳೂರು: ತೂಕ ಮತ್ತು ಅಳತೆಯಲ್ಲಿ ಗ್ರಾಹಕರಿಗೆ ಮೋಸ ಮಾಡುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯಲ್ಲಾಗಲೀ ನಗರ ಸ್ಥಳೀಯ ಸಂಸ್ಥೆಗಳಲ್ಲಾಗಲೀ ಕಠಿನ ನಿಯಮ ಇಲ್ಲ. ಹೀಗಾಗಿ ವಂಚನೆ ಎಗ್ಗಿಲ್ಲದೆ ನಡೆಯುತ್ತಿದೆ.

Advertisement

ಸ್ಟೀಲ್‌, ಕಬ್ಬಿಣ, ಪೆಟ್ರೋಲ್‌, ರಸಗೊಬ್ಬರ; ಅಕ್ಕಿ, ಸಕ್ಕರೆ, ಬೇಳೆ ಯಂತಹ ದಿನಸಿ ಸಾಮಗ್ರಿಗಳ ಸಹಿತ ದಿನನಿತ್ಯದ ಬಳಕೆ ವಸ್ತುಗಳ ಮಾರಾಟದಲ್ಲಿ ಅತೀ ಹೆಚ್ಚು ತೂಕ -ಅಳತೆ ಮೋಸ ಪ್ರಕರಣ ವರದಿ ಯಾಗುತ್ತಿವೆ. ಮೂರೂವರೆ ವರ್ಷ ಗಳಲ್ಲಿ ಇಲಾಖೆ ರಾಜ್ಯದ 2,58,378 ಕಡೆ ದಾಳಿ ನಡೆಸಿ ವಂಚಕ ವ್ಯಾಪಾರಿಗಳ ವಿರುದ್ಧ 1,04,710 ಪ್ರಕರಣ ದಾಖಲಿಸಿ, 34,52,92,530 ರೂ. ದಂಡ ಸಂಗ್ರಹಿಸಿದೆ.

ಅನಂತರ ಯಾವುದೇ ಕಠಿನ ಕ್ರಮ ಆಗಿಲ್ಲ.ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆ ದಂಡ ಹಾಕಿ ಕೈ ತೊಳೆದುಕೊಳ್ಳುತ್ತಿದೆ. ವಂಚಕ ಅಂಗಡಿ ಅಥವಾ ಮಳಿಗೆಯ ವ್ಯಾಪಾರ ಪರವಾನಿಗೆ ರದ್ದುಪಡಿಸುವ ಅಧಿಕಾರ ಇಲಾಖೆಗಿಲ್ಲ. ಇದನ್ನು ನಗರ ಸ್ಥಳೀಯ ಸಂಸ್ಥೆಗಳು ಮಾಡಬೇಕು. ಆದರೆ ಶೇ. 50ಕ್ಕಿಂತ ಹೆಚ್ಚು ಮಂದಿ ವ್ಯಾಪಾರ ಪರವಾನಿಗೆ ಇಲ್ಲದೆಯೇ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ ಅವರು ಸಿಕ್ಕಿ ಹಾಕಿಕೊಂಡರೂ ದಂಡ ಬಿಟ್ಟು ಯಾವುದೇ ಕ್ರಮ ಕೈಗೊಳ್ಳಲು ಆಗುತ್ತಿಲ್ಲ.

ವಂಚನೆಗೆ ಆರೋಪ ಕೇಳಿ ಬಂದ ಕೂಡಲೇ ಅಂಗಡಿ ಅಥವಾ ಮಳಿಗೆ, ಮಾಲ್‌ ಮೇಲೆ ಅಧಿಕಾರಿಗಳು ದಾಳಿ ನಡೆಸಿ ನೋಟಿಸ್‌ ನೀಡುತ್ತಾರೆ. ನೋಟಿಸ್‌ ಪಡೆದ ಕೂಡಲೇ ದಂಡ ಕಟ್ಟುವ ವ್ಯಾಪಾರಿಗಳು ಮತ್ತೆ ಹಳೆಯ ಚಾಳಿ ಮುಂದುವರಿಸುತ್ತಾರೆ.

ದಾಳಿ ನಡೆಸಿದ 6 ತಿಂಗಳುಗಳೊಳಗೆ ವ್ಯಾಪಾರಿಗಳು ದಂಡ ಪಾವತಿಸದಿದ್ದರೆ ಇಲಾಖೆಯು ಕೋರ್ಟ್‌ ಗಮನಕ್ಕೆ ತರುತ್ತದೆ. ಕೋರ್ಟ್‌ನಲ್ಲಿ ಬಲವಾದ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಪ್ರಕರಣ ಖುಲಾಸೆಯಾಗುತ್ತದೆ.

Advertisement

ವಂಚನೆ ಹೇಗೆ?
ಕೆಲವು ಕಂಪೆನಿಗಳು ಮತ್ತು ಅಂಗಡಿ ಮಾಲಕರು ತೂಕ ಯಂತ್ರಗಳನ್ನು ತಾಂತ್ರಿಕವಾಗಿ ಬದಲಾಯಿಸುತ್ತಾರೆ. ಇದರಿಂದ ತೂಕದಲ್ಲಿ ಭಾರೀ ವ್ಯತ್ಯಾಸ ಕಂಡು ಬರುತ್ತದೆ. ಆದರೆ ಇದು ಗ್ರಾಹಕರು ಗಮನಕ್ಕೆ ಬರುವುದು ಕಡಿಮೆ ಎಂದು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ ದೂರು ನೀಡಿ
ವ್ಯಾಪಾರಿಗಳಿಂದ ವಂಚನೆ ಗಮನಕ್ಕೆ ಬಂದರೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ
//www.emapan.karnataka.gov.in ಗೆ ಭೇಟಿ ನೀಡಿ ಆನ್‌ಲೈನ್‌ ದೂರು ನೀಡಲು ಅವಕಾಶಗಳಿವೆ. ಕೂಡಲೇ ಅಧಿಕಾರಿಗಳು ಆಯಾ ಜಿಲ್ಲೆಗಳಲ್ಲಿರುವ ಅಂಗಡಿಗೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಾರೆ.

ತೂಕ -ಅಳತೆ ಸರಿಯಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಂಡು ಸಾಮಗ್ರಿ ಗಳನ್ನು ಖರೀದಿಸಿದರೆ ವಂಚನೆಗಳಿಗೆ ಕಡಿವಾಣ ಹಾಕಬಹುದು.
– ಡಾ| ರಾಜೇಂದ್ರ ಪ್ರಸಾದ್‌,
ಕಾನೂನು ಮಾಪನ ಶಾಸ್ತ್ರ ನಿಯಂತ್ರಕರು

- ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next