Advertisement
ಬೇಸಿಗೆ ಕಾಲದಲ್ಲಿ ಕರಾವಳಿಯಲ್ಲಿ ಸಾಮಾನ್ಯಕ್ಕಿಂತ ತುಸು ಹೆಚ್ಚೇ ಎಂಬಂತೆ ಬಿಸಿ ಬಿಸಿಯ ವಾತಾವರಣವಿರುತ್ತದೆ. ಹಾಗಾಗಿ ರಾತ್ರಿ ಹೊತ್ತಲ್ಲಿ ಊಟ ಮಾಡಿ ಮನೆ ಮುಂದಿನ ಅಡಿಕೆ ತೋಟದ ಕಡೆ ಕಣ್ಣಾಡಿಸುತ್ತಾ ಜಗಲಿ ಕಟ್ಟೆಯ ಮೇಲೆ ವಿಶ್ರಮಿಸಿಕೊಳ್ಳುತ್ತಾ ಕುಳಿತಿದ್ದೆ. ಅದೇ ಸಮಯಕ್ಕೆ ಅಲ್ಲೇ ಕುಳಿತಿದ್ದ ಅಕ್ಕನ ಮಗ ಪ್ರಶಾಂತ್ ಮೊಬೈಲ್‌ನಲ್ಲಿ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ ಮುಂದಿನ ಭಾನುವಾರದ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತಿದ್ದ. ಈಗಿನ ಕಾಲದ ಹುಡುಗರೆಂದರೆ ಕೇಳಬೇಕೇ? ಶನಿವಾರ ಬಂತೆಂದರೆ ವಾರಾಂತ್ಯದ ಮೋಜು ಮಸ್ತಿಯ ನೆಪದಲ್ಲಿ ಪಾರ್ಟಿ ಪಬ್ ಅಂತೆಲ್ಲಾ ಸುತ್ತಾಡುತ್ತಾರೆ. ಅಂದಿನ ಕಾಲದವರಂತೆ ಗಿರಿಶೃಂಗ ಕಂದಕಗಳನ್ನು ಹತ್ತಿ ಇಳಿಯುವ ಸಾಹಸಗಳಿಗೆ ಇಂದಿನ ಹುಡುಗರು ಕೈಹಾಕುವುದಿಲ್ಲ ಎಂದು ಯೋಚಿಸುತ್ತಾ ನನ್ನ ದೃಷ್ಟಿ ಅಡಿಕೆ ತೋಟದೆಡೆಗೆ ನೆಟ್ಟಿದ್ದರೂ ಕಿವಿಗಳು ಪ್ರಶಾಂತ್‌ನ ಮಾತುಗಳನ್ನು ತೀಕ್ಷ್ಣವಾಗಿ ಆಲಿಸುತ್ತಿದ್ದವು. ಭಾನುವಾರದ ಆತನ ಚಾರಣದ ಯೋಜನೆಯ ಕುರಿತ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ತಟ್ಟನೆ ನೆನಪೊಂದು ಮನಸ್ಸಿನಲ್ಲಿ ಮೂಡಿ ಕ್ಷಣ ಕಾಲ ಸ್ಥಬ್ದನಾದೆ. ನನ್ನನ್ನೇ ನಾನು ಮರೆತುಬಿಟ್ಟೆ.
Related Articles
Advertisement
ಕುಮಾರ ಪರ್ವತ ಸಮುದ್ರ ಮಟ್ಟದಿಂದ ಸುಮಾರು 1,712 ಅಡಿ ಎತ್ತರದಲ್ಲಿದ್ದು, ಚಾರಣಿಗರಿಗೆ ಸವಾಲಿನ ಜೊತೆಗೆ ನೆನಪಲ್ಲುಳಿಯುವಂಥ ಹಲವು ದೃಶ್ಯಾವಳಿಗಳನ್ನು ದಯಪಾಲಿಸುತ್ತದೆ. ನಮ್ಮ ಎಂಟು ಮಂದಿಯ ತಂಡವು ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಾನದಲ್ಲಿ ದೇವರ ದರ್ಶನ ಮಾಡಿ ಚಾರಣವನ್ನು ಪ್ರಾರಂಭಿಸಿದೆವು. ಮೊದಲೇ ತಿಳಿದಂತೆ 13 ಕಿ.ಮೀ ಕೇವಲ ಕಾಲ್ನಡಿಗೆಯಲ್ಲೇ ನಾವು ಅರಣ್ಯ ಪ್ರದೇಶದ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು. ಸಾಗುತ್ತಿದ್ದಂತೆ ಊರು ದೂರವಾಗುತ್ತಾ ಕ್ರೂರ ಮೃಗಗಳಿಂದ ಕೂಡಿರುವ ದಟ್ಟಾರಣ್ಯ ಪ್ರದೇಶವನ್ನು ಪ್ರವೇಶಿಸಲಾರಂಭಿಸಿದೆವು. ಆಗಲೇ ಶುರುವಾಗಿದ್ದು ನಮಗೆ ಕುಮಾರ ಪರ್ವತದ ಮೊದಲ ದರ್ಶನ. ದಟ್ಟಾರಣ್ಯವನ್ನು ದಾಟಿಕೊಂಡು ತುಸು ದೂರ ನಡೆದ ನಂತದ ಸಿಗುವುದೇ ಭಟ್ರ ಮನೆ. ಚಾರಣಿಗರೆಲ್ಲರ ಪಾಲಿಗೆ ಇದೊಂದು ರೀತಿ ಇಲ್ಲಿನ ಸರ್ವಧರ್ಮ ಸಹಿಷ್ಣುತೆಯ ಕಾಮಧೇನುವೆಂದೇ ಹೇಳಬಹುದು. ಕುಮಾರ ಪರ್ವತವು ತನ್ನ ಮೊದಲ ಸುತ್ತಿನ ಕಾಠಿಣ್ಯತೆಯನ್ನು ತೋರ್ಪಡಿಸಿದ ನಂತರ ಮುಂಬರುವ ಕಷ್ಟಕರ ಹಾದಿ ಕ್ರಮಿಸುವ ಮುನ್ನ ಭಟ್ರ ಮನೆಯಲ್ಲಿ ವಿರಮಿಸಿದೆವು. ಅಲ್ಲಿ ನಮ್ಮ ತಂಡ ಆಯಾಸವನ್ನು ನೀಗಿಕೊಂಡು, ಭರ್ಜರಿ ಊಟ ಮಾಡಿ ಮತ್ತೆ ನಮ್ಮ ಪ್ರಯಾಣವನ್ನು ಮುಂದುವರೆಸಿತು.
ಇಲ್ಲಿ ಚಾರಣ ಮಾಡಬೇಕೆಂದರೆ ಮೊದಲು ಅರಣ್ಯ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ನಾವು ಅರಣ್ಯ ಇಲಾಖೆಯ ಗೇಟ್‌ನಲ್ಲಿ ಕಾಲೇಜಿನ ಗುರುತು ಚೀಟಿಯನ್ನು ತೋರಿಸಿ ಮುಂದಿನ ವಿಶ್ರಾಂತಿ ತಾಣವಾದ ಕಲ್ಲು ಮಂಟಪದ ಕಡೆಗೆ ಸಾಗಿದೆವು. ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ ಸಾಗುವಾಗ ಸಮಯದ ಪರಿವೆಯೇ ಇರಲಿಲ್ಲ. ನಾವೆಂಟು ಮಂದಿ ಕಲ್ಲು ಮಂಟಪವನ್ನು ತಲುಪಬೇಕಾದರೆ ಅದಾಗಲೇ ಸಂಜೆ ಐದು ಗಂಟೆ. ಸುಸ್ತಾಗಿ ಬಳಲಿ ಬೆಂಡಾಗಿದ್ದ ನಾನು ಮತ್ತು ನನ್ನಿಬ್ಬರು ಗೆಳೆಯರು ದಣಿದಿದ್ದರಿಂದ ನಮ್ಮ ನಡಿಗೆಯ ವೇಗ ಕಡಿಮೆಯಾಗಿತ್ತು. ಉಳಿದವರೆಲ್ಲರೂ ವೇಗವಾಗಿ ನಡೆಯುತ್ತಾ ನಮಗಿಂತ ಮುಂದಕ್ಕೆ ಹೋಗಿಬಿಟ್ಟಿದ್ದರು. ಸ್ವಲ್ಪ ಹೊತ್ತಿನಲ್ಲಿಯೆ ಅವರು ನಮ್ಮ ದೃಷ್ಟಿಗೆ ಸಿಗದಂತೆ ತುಂಬಾ ಮುಂದಕ್ಕೆ ಹೋಗಿದ್ದರು. ಪರ್ವತದ ಮಧ್ಯಭಾಗದಲ್ಲಿ ಇಳಿಸಂಜೆಯ ಹೊತ್ತಲ್ಲಿ ಕಾಡಿನ ಮಧ್ಯ ಸಿಲುಕಿಕೊಂಡು ಬಹಳ ಆತಂಕದಲ್ಲಿದ್ದ ನಾವು ಉಳಿದ ಐದು ಮಂದಿಯ ತಂಡವನ್ನು ಹೇಗಾದರೂ ಸೇರಲೇಬೇಕೆಂಬ ಸಂಕಲ್ಪದೊಂದಿಗೆ ಬಿರುಸಿನ ಹೆಜ್ಜೆ ಹಾಕಲಾರಂಭಿಸಿದರೂ ಅವರು ನಮಗೆ ಸಿಗಲೇ ಇಲ್ಲ. ಅಂತೂ ನಾವು ಕುಮಾರ ಪರ್ವತದ ಶೃಂಗಕ್ಕಿಂತ ಹಿಂದಿನ ಹಂತವಾದ ಶೇಷ ಪರ್ವತದ ಪಕ್ಕದ ದಟ್ಟಾರಣ್ಯದ ಬಳಿ ತಲುಪಿದಾಗ ಸಂಜೆ ಗಂಟೆ 6.30 ಆಗಿತ್ತು. ಮಬ್ಬುಗತ್ತಲು ಆವರಿಸಿದ್ದರಿಂದ ಪ್ರಯಾಣ ನಿಲ್ಲಿಸಲೇಬೇಕಿತ್ತು. ಮುಂದಿನ ದಾರಿ ಹಾಗೂ ಸಾಗಬೇಕಾದ ನಿರ್ದಿಷ್ಟ ಗುರಿಯ ಬಗ್ಗೆ ಯಾವುದೇ ಕಲ್ಪನೆಯೂ ಇಲ್ಲದ ನಾವು ಅಕ್ಷರಶಃ ಕಂಗಾಲಾಗಿದ್ದೆವು.
ಈ ವೇಳೆಗಾಗಲೇ ಉಳಿದ ಐದು ಮಂದಿ ಗೆಳೆಯರು ಪರ್ವತದ ತುದಿಯನ್ನು ತಲುಪಿದರೋ ಇಲ್ಲವೋ ಎನ್ನುವ ಗೊಂದಲದೊಂದಿಗೆ ಹಾಗೂ ಅಳುಕಿನೊಂದಿಗೆ ನಾವು ರಾತ್ರಿ 7.00 ಗಂಟೆಯ ಹೊತ್ತಿಗೆ ವಾಪಾಸು ಕಲ್ಲು ಮಂಟಪದೆಡೆಗೆ ನಿಧಾನವಾಗಿ ಸಾಗಲಾರಂಭಿಸಿದೆವು. ಆ ಸಂದರ್ಭದಲ್ಲಿ ನಮ್ಮ ಬಳಿ ಇದ್ದಿದ್ದು ಸಣ್ಣ ಟಾರ್ಚ್ ಇರುವ ಹಳೆಯ ನೋಕಿಯಾ ಫೋನ್ ಮತ್ತು ಒಂದು ಟಾರ್ಚ್ ಲೈಟ್ ಅಷ್ಟೇ. ಇದರ ಸಹಾಯದಿಂದಲೇ ದಟ್ಟಾರಣ್ಯದಲ್ಲಿ ಭಯ ಹಾಗೂ ಆತಂಕದೊಂದಿಗೆ ದಾರಿಯೂ ಸ್ಪಷ್ಟವಾಗಿ ಕಾಣಿಸದೇ ಒಂದು ಅಂದಾಜಿನ ಲೆಕ್ಕಾಚಾರದಲ್ಲೇ ತೆವಳುತ್ತಾ ಕಾಡಿನಲ್ಲಿ ನಡೆದೆವು. ಪಾಪಿ ಹೋದಲ್ಲಿ ಸಮುದ್ರದಲ್ಲೂ ಮೊಣಕಾಲುದ್ದ ನೀರು ಎಂಬಂತೆ ರಾತ್ರಿ ಗಂಟೆ 9.00 ಆದರೂ ಕಲ್ಲು ಮಂಟಪ ಕಾಣುತ್ತಲೇ ಇಲ್ಲ. ಹದಿಹರೆಯದ ಹುಚ್ಚು ಮನಸ್ಸಿನ ಮಾತು ಕೇಳಿ ಯಾಕಾದರೂ ಚಾರಣಕ್ಕೆ ಬಂದೆವೋ ಎಂದೆನಿಸಿತು. ದಟ್ಟಾರಣ್ಯದ ಕಗ್ಗತ್ತಲಿನಲ್ಲಿ ದಾರಿ ತೋಚದ ಪರಿಸ್ಥಿತಿಯಲ್ಲೊಮ್ಮೆ ಮನೆ ದೇವರಿಗೆ ಹರಕೆ ಹೇಳಿಕೊಂಡಿದ್ದೂ ಸುಳ್ಳಲ್ಲ. ಹತಾಶೆಯೂ ಹಸಿವೂ ನಮ್ಮನ್ನು ಬಾಧಿಸುತ್ತಿತ್ತು. ಕಟ್ಟಿಸಿ ತಂದಿದ್ದ ಆಹಾರ ತಿನ್ನೋಣವೆಂದರೆ ಅದು ಇನ್ನೊಂದು ತಂಡದವರ ಬಳಿಯಿತ್ತು. ಕಡೆಗೆ ನೀರನ್ನೇ ಕುಡಿದು ಮಲಗುವ ಪರಿಸ್ಥಿತಿ ನಮ್ಮದಾಯಿತು. ಕ್ರೂರ ಮೃಗಗಳ ಭಯ ಒಂದೆಡೆಯಾದರೆ, ಬಾವಲಿ ಕೀಟಗಳ ಕರ್ಕಶ ಧ್ವನಿ ಇನ್ನೊಂದೆಡೆ.
ಸುಸ್ತಾಗಿ ಮಲಗಿದ್ದ ಜಾಗದಲ್ಲಿ ಮೆತ್ತಗೆ ಕೈಗೆ ಏನೋ ತಾಗಿದಂತಾಯಿತೆಂದು ಮೊಬೈಲ್‌ನ ಬೆಳಕಿನಲ್ಲಿ ಹುಲ್ಲನ್ನು ಸರಿಸಿ ನೋಡಿದರೆ ಜಂಘಾಬಲವೇ ಕುಸಿದಂತಾಯಿತು. ಆನೆಯ ಲದ್ದಿ ಅಲ್ಲೆಲ್ಲಾ ಬಿದ್ದಿತ್ತು. ಆನೆಗಳು ಓಡಾಡುವ ಜಾಗದಲ್ಲೇ ನಾವು ಮಲಗಿದ್ದೆವು. ಅಲ್ಲೇ ತುಸು ದೂರದಲ್ಲಿ ಆನೆಗಳು ಘೀಳಿಡುವ ಶಬ್ದವೂ ಕೇಳಿಸುತ್ತಿತ್ತು. ಮೈ ಕೊರೆಯುವ ಚಳಿಗಾಳಿಗೆ ಮೈಯೆಲ್ಲಾ ನಿಧಾನವಾಗಿ ಮರಗಟ್ಟುತಲಿತ್ತು. ನಾಳೆಯ ಮುಂಜಾವು ನಮ್ಮ ಪಾಲಿಗೆ ಬರುತ್ತದೆ, ಮತ್ತೆ ನಮ್ಮ ತಂದೆ ತಾಯಂದಿರ ಮುಖವನ್ನು ನೋಡುತ್ತೇವೆ ಎನ್ನುವ ಆತ್ಮವಿಶ್ವಾಸ ಕೊಂಚವೂ ಇರಲಿಲ್ಲ.
ರಾತ್ರಿ ನಾವ್ಯಾರೂ ನಿದ್ದೆ ಮಾಡಲಿಲ್ಲ. ಸೂರ್ಯನ ಬೆಳಕು ಮೂಡಣ ದಿಕ್ಕಿನಲ್ಲಿ ಮೂಡುತ್ತಲೇ, ಹೋದ ಜೀವ ಬಂದಂತಾಗಿ ಒಬ್ಬರನ್ನೊಬ್ಬರು ಮುಟ್ಟಿ ನೋಡಿಕೊಂಡು ಬದುಕಿದ್ದೇವೆಂದು ದೃಢಪಡಿಸಿಕೊಂಡೆವು. ಮುಂದೇನು ಎಂಬ ಯೋಚನೆಯಲ್ಲಿರುವಾಗಲೇ ತಪ್ಪಿಸಿಕೊಂಡಿದ್ದ ನಮ್ಮ ಗೆಳೆಯರು ನಮ್ಮನ್ನು ಸೇರಿಕೊಂಡರು. ಬದುಕುವ ಆಸೆಯನ್ನೇ ಬಿಟ್ಟಿದ್ದ ನಮಗೆ ಅವರನ್ನು ಕಂಡು ದುಃಖ ಉಮ್ಮಳಿಸಿ ಬಂತು. ಮಹಾ ಯುದ್ಧವನ್ನು ಗೆದ್ದ ಭಾವ ಮನದಿ ಮನೆ ಮಾಡಿತು. ಗೆಳೆಯರನ್ನೆಲ್ಲಾ ಮತ್ತೆ ನೋಡಿ ನಮ್ಮ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಷ್ಟೆಲ್ಲಾ ಅನುಭವದ ಪಾಠ ಕಲಿಸಿದ ಕುಮಾರ ಪರ್ವತ ಚಾರಣವು ಸದಾ ಕಾಲ ನೆನಪಿನಲ್ಲುಳಿಯುತ್ತದೆ. ಅದಾದ ಮೇಲೆ ಚಾರಣ ಮಾಡುವಾಗ ಅನುಭವಸ್ಥರ ನಿರ್ದೇಶನ ಪಡೆದುಕೊಂಡೇ ತೆರಳಬೇಕು ಹಾಗೂ ಗುಂಪಾಗಿಯೇ ತೆರಳಬೇಕೆಂಬ ಪಾಠವನ್ನು ಕಲಿತೆವು. ಇಲ್ಲವಾದಲ್ಲಿ ಚಾರಣವು ‘ಕುಟ್ಟಿ ಕುಂದಾಪುರಕ್ಕೆ ಹೋದಂತೆ’ ಆಗುವುದು ಖಂಡಿತಾ.
ಅತೀಶ್ ದೇವಾಡಿಗ ಅರಿಯಡ್ಕಚಿತ್ರಗಳು: ಅತೀಶ್ ದೇವಾಡಿಗ ಅರಿಯಡ್ಕ