Advertisement

ಸಾರ್ವಜನಿಕ ಆಕ್ಷೇಪಣೆಗೆ ಮೀನಮೇಷ; ಬಿಬಿಎಂಪಿ ಚುನಾವಣೆ ಮುಂದೂಡುವ ತಂತ್ರವಾ?

12:32 PM Jun 15, 2022 | Team Udayavani |

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಕುರಿತ ವರದಿಯನ್ನು ಅಂತಿಮಗೊಳಿಸಲು ಇನ್ನೊಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಆದರೆ, ಕರಡು ವರದಿ ಸಲ್ಲಿಕೆಯಾಗಿ ವಾರವಾದರೂ ಸರ್ಕಾರ ಮಾತ್ರ ಸಾರ್ವಜನಿಕ ಆಕ್ಷೇಪಣೆಗೆ ಪ್ರಕಟಿಸದೆ ಮೀನಮೇಷ ಎಣಿಸುತ್ತಿದೆ.

Advertisement

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮೇ 20ರಂದು 8 ವಾರಗಳಲ್ಲಿ ಅಂದರೆ ಜುಲೈ 20ರೊಳಗೆ ವಾರ್ಡ್‌ ಮರುವಿಂಗಡಣಾ ವರದಿ ಹಾಗೂ ವಾರ್ಡ್‌ ಮೀಸಲಾತಿ ಪಟ್ಟಿ ಸಿದ್ಧಪಡಿಸಿರಬೇಕು ಎಂದು ಆದೇಶಿಸಿತ್ತು. ಅದರಂತೆ ಜುಲೈ 20ರೊಳಗೆ ಚುನಾವಣೆ ಮಾಡಲು ಸರ್ಕಾರದಿಂದ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರದ ಬಳಿ ಇನ್ನು 34 ದಿನಗಳು ಮಾತ್ರ ಉಳಿದಿದೆ.

ಬಿಬಿಎಂಪಿ ವಾರ್ಡ್‌ ಮರುವಿಂಗಡಣಾ ಕರಡು ವರದಿಯನ್ನು ಸಲ್ಲಿಸಿ ಒಂದು ವಾರಗಳಾಗಿವೆ. ವರದಿ ಸಲ್ಲಿಸಿದ ಸಂದರ್ಭದಲ್ಲಿ ಎರಡು ದಿನಗಳಲ್ಲಿ ಸಾರ್ವಜನಿಕ ಆಕ್ಷೇಪಣೆಗೆ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಇದೀಗ ವಾರವಾದರೂ ಆಕ್ಷೇಪಣೆಗೆ ಪ್ರಕಟಿಸಿಲ್ಲ. ಅದರ ಜತೆಗೆ ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನೂ ಈವರೆಗೆ ಸಿದ್ಧಪಡಿಸಿಲ್ಲ. ಮೀಸಲಾತಿ ಪಟ್ಟಿ ಸಿದ್ಧಪಡಿಸಲು ರಚಿಸಲಾಗಿರುವ ಭಕ್ತವತ್ಸಲ ಸಮಿತಿಯು ಇನ್ನೂ ಸಭೆಗಳನ್ನು ಮಾಡುತ್ತಲಿದೆ. ಯಾವಾಗ ಪಟ್ಟಿ ಸಿದ್ಧವಾಗುತ್ತದೆ ಎಂಬುದನ್ನು ಮಾತ್ರ ತಿಳಿಸುತ್ತಿಲ್ಲ.

ಆಡಳಿತದಲ್ಲಿ ಸುಧಾರಣೆ ತರುವ ದೃಷ್ಟಿಯಿಂದಾಗಿ ಬಿಬಿಎಂಪಿಯ 198 ವಾರ್ಡ್‌ಗಳನ್ನು 243 ವಾರ್ಡ್‌ ಗಳನ್ನಾಗಿ ವಿಂಗಡಿಸಲಾಗುತ್ತಿದೆ. ಆ ಕುರಿತ ಕರಡು ವರದಿ ಈಗಾಗಲೆ ಸಿದ್ಧಗೊಂಡಿದ್ದು ವಾರ್ಡ್‌ ಮರುವಿಂಗಡಣಾ ಸಮಿತಿ ಜೂ. 9ಕ್ಕೆ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದೆ. ಆದರೆ ಈವರೆಗೆ ವರದಿಯನ್ನು ಸಾರ್ವಜನಿಕ ಆಕ್ಷೇಪಣೆಗೆ ಪ್ರಕಟಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿಲ್ಲ. ಹೀಗಾಗಿ ಚುನಾವಣೆ ಮುಂದೂಡಲೆಂದೇ ಸಾರ್ವಜನಿಕ ಆಕ್ಷೇಪಣೆ ಕರೆಯಲು ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕನಿಷ್ಠ 25 ದಿನ ಬೇಕು: ಬಿಬಿಎಂಪಿ ವಾರ್ಡ್‌ ಮರುವಿಂಗಡಣಾ ಕರಡು ವರದಿ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 2 ವಾರ ಅಂದರೆ 14 ದಿನಗಳ ಕಾಲಾವಕಾಶ ನೀಡಬೇಕಿದೆ. ಅದಾದ ನಂತರದ 7ರಿಂದ 10 ದಿನಗಳು ಆಕ್ಷೇಪಣೆಯನ್ನಾಧರಿಸಿ ವರದಿಯನ್ನು ಸರಿಪಡಿಸಬೇಕಿದೆ. ಆಮೇಲೆ ವರದಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆಗೆ ಕನಿಷ್ಠ 25ರಿಂದ 28 ದಿನಗಳು ಬೇಕಾಗಲಿದೆ. ಸರ್ಕಾರ ಹೀಗೆ ವಿಳಂಬ ಮಾಡುತ್ತಿದ್ದರೆ
ಸುಪ್ರೀಂಕೋರ್ಟ್‌ ನೀಡಿದ ಗಡುವಿನಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿಲ್ಲ.

Advertisement

ಸಿಎಂ ಅಂತಿಮಗೊಳಿಸಿಲ್ಲ: ವಾರ್ಡ್‌ ಮರುವಿಂಗಡಣೆ ಕುರಿತ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ. ವರದಿ ಸಲ್ಲಿಕೆಯಾದ ದಿನವೇ ಅದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳು ವರದಿಯನ್ನು ಪರಿಶೀಲಿಸಿದ ನಂತರ ಅದನ್ನು ನಗರಾಭಿವೃದ್ಧಿಗೆ ಕಳುಹಿಸುತ್ತಾರೆ. ಅದಾದ ನಂತರವಷ್ಟೇ ಸಾರ್ವಜನಿಕ ಆಕ್ಷೇಪಣೆಗೆ ಪ್ರಕಟಿಸಲಾಗುತ್ತದೆ. ಹೀಗಾಗಿ ಅಧಿಕಾರಿಗಳು ಕೂಡ ಮುಂದಿನ ಪ್ರಕ್ರಿಯೆ ನಡೆಸಲಾಗದೆ ಅಸಹಾಯಕರಾಗಿದ್ದಾರೆ.

ಬೇಕೆಂದೇ ವಿಳಂಬ?
2020ರ ಸೆಪ್ಟೆಂಬರ್‌ನಲ್ಲೇ ಬಿಬಿಎಂಪಿ ಕಾರ್ಪೋರೆಟರ್‌ಗಳ ಅವಧಿ ಮುಗಿದಿದೆ. ಅದಾದ ನಂತರ ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಹಾಗೂ ಬಿಬಿಎಂಪಿಗೆ ಹೊಸ ಕಾಯ್ದೆ ರಚಿಸಲು ಸರ್ಕಾರ ಮುಂದಾಗಿತ್ತು. ಅದರ ನಡುವೆ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೆಲ ಮಾಜಿ ಕಾರ್ಪೋರೆಟರ್‌ಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ ಕೂಡ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರ ಚುನಾವಣೆ ನಡೆಯದಂತೆ ಮಾಡಲು ಸಾಕಷ್ಟು ಕಸರತ್ತು ಮಾಡಿತ್ತು. ಇದೀಗ ಸರ್ಕಾರ ವಾರ್ಡ್‌ ಮರುವಿಂಗಡಣಾ ವರದಿ ಅಂತಿಮಗೊಳಿಸುವಲ್ಲಿ ವೃಥಾ ಕಾಲಹರಣ ಮಾಡುತ್ತಿದೆ. ಇದನ್ನು ಗಮನಿಸಿದರೆ ಸುಪ್ರೀಂಕೋರ್ಟ್‌ಗೆ ಚುನಾವಣೆ ನಡೆಸಲು ಬೇಕಾದ ಪ್ರಕ್ರಿಯೆಗಳನ್ನೆಲ್ಲ ನಡೆಸುತ್ತಿದ್ದೇವೆ. ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ ಎಂಬುದನ್ನು ತೋರಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಅಲ್ಲದೆ, ವಾರ್ಡ್‌ ಮರುವಿಂಗಡಣಾ ಕರಡು ವರದಿಯನ್ನು ಸಾರ್ವಜನಿಕ
ಆಕ್ಷೇಪಣೆಗೆ ಕರೆಯದೆ ಬೇಕೆಂದೇ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸುಪ್ರೀಂಕೋರ್ಟ್‌ ನೀಡಿದ ಸಮಯದೊಳಗೆ ವಾರ್ಡ್‌ ಮರುವಿಂಗಡಣಾ ವರದಿ ಸೇರಿ ಇನ್ನಿತರ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಬೇಕು. ಅದರೆ ಆಡಳಿತದ ದುರುಪಯೋಗ ಪಡಿಸಿಕೊಂಡು, ಚುನಾವಣೆ ಮುಂದೂಡಲು ವಾರ್ಡ್‌ ಮರುವಿಂಗಡಣಾ ಕರಡು ವರದಿ ಪ್ರಕಟಿಸಲು ವಿಳಂಬ ಮಾಡುತ್ತಿದೆ.
●ಎಂ.ಶಿವರಾಜು, ಬಿಬಿಎಂಪಿ ಮಾಜಿ ಸದಸ್ಯ

●ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next