Advertisement

ಸೋಡ ಇಲ್ಲದ ಊಟವಿದ್ದಂತೆ!

06:00 AM Jul 06, 2018 | |

“ಜನರು ಸೋಡ ಇಲ್ಲದ ಊಟವನ್ನೇ ಹುಡುಕಿ ಹೋಗುವುದು ಹೆಚ್ಚು. ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೆ, ಮನರಂಜನೆ ಮತ್ತು ಗಟ್ಟಿ ಕಥೆ ಇರುವ ಸಿನಿಮಾ ಹುಡುಕುವುದು ಹೆಚ್ಚು. ನಮ್ಮ ಚಿತ್ರ ಒಂದು ರೀತಿಯ ಸೋಡ ಇಲ್ಲದ ಊಟ ಇದ್ದಂಗೆ…’

Advertisement

– ಹೀಗೆ ಹೇಳಿದ್ದು ನಿರ್ದೇಶಕ ಕೆ.ಎಂ. ರಘು. ಅವರು ಹೇಳಿಕೊಂಡಿದ್ದು ತಮ್ಮ ನಿರ್ದೇಶನದ “ಪರಸಂಗ’ ಚಿತ್ರದ ಕುರಿತು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೇಳಿಕೊಂಡ ರಘು, “ಇದು ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಚಿತ್ರ. ಪಕ್ಕಾ ಹಳ್ಳಿ ಸೊಗಡಿನ ರುಚಿ ಇಲ್ಲಿರಲಿದೆ. ಎಲ್ಲರ ಮನಕಲಕುವ ಚಿತ್ರಣ ಚಿತ್ರದ ಹೈಲೆಟ್‌. ನಂಬಿಕೆಯನ್ನು ಅನುಮಾನದಿಂದ ನೋಡಿದಾಗ, ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಕಥೆಯ ಸಾರಾಂಶ. ಈ ಸಮಾಜಕ್ಕೆ ಮುಖ್ಯವಾಗಿ ಏನೆಲ್ಲಾ ಬೇಕು, ಸಮಾಜ ಹೇಗೆಲ್ಲಾ ಇದೆ ಎಂಬುದನ್ನು ಒಂದು ಹಳ್ಳಿಪರಿಸರದಲ್ಲಿ ಮನರಂಜನೆ ಜೊತೆಗೆ ಹೇಳಿದ್ದೇನೆ. ಇದು ಹಳ್ಳಿಯೊಂದರ ರಿಯಲ್‌ ತಿಮ್ಮನ ಕಥೆ. ಆ ಕಥೆ ಕೇಳಿ, ಸಿನಿಮಾ ಮಾಡಬೇಕೆನಿಸಿತು. ಆ ಪಾತ್ರಕ್ಕೆ ಮಿತ್ರ ಸರಿಹೊಂದುತ್ತಾರೆ ಅಂತ ಆಯ್ಕೆ ಮಾಡಿದ್ದು ಖುಷಿಕೊಟ್ಟಿದೆ. ಯಾಕೆಂದರೆ, ನನ್ನ ಕಲ್ಪನೆ ಮೀರಿ ನಟಿಸಿದ್ದಾರೆ. ಉಳಿದಂತೆ ಪ್ರತಿಯೊಬ್ಬರ ಸಹಕಾರದಿಂದ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಇಂತಹ ಚಿತ್ರಗಳಿಗೆ ನಿರ್ಮಾಪಕರ ಪ್ರೋತ್ಸಾಹವೂ ಇರಬೇಕು. ಕುಮಾರ್‌, ಲೋಕೇಶ್‌ ಮತ್ತು ಮಹದೇವೇಗೌಡ ಅವರು ಚಿತ್ರಕ್ಕೆ ಬೇಕಾದ್ದೆಲ್ಲ ಕೊಟ್ಟು ಒಂದೊಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ. ಜನರು ಸೋಡ ಇಲ್ಲದ ಊಟ ಬಯಸುವಂತೆ, ಮನರಂಜನೆ ಮತ್ತು ಕಥೆ ಇರುವ ಚಿತ್ರ ನೋಡುವ ಮನಸ್ಸುಗಳಿಗೆ “ಪರಸಂಗ’ ಹೇಳಿಮಾಡಿಸಿದ ಚಿತ್ರ’ ಅಂದರು ನಿರ್ದೇಶಕ ರಘು.

“ಪರಸಂಗ’ ತಮ್ಮ ಬದುಕಿನ ಮತ್ತೂಂದು ದಿಕ್ಕು ಬದಲಿಸುವ ಚಿತ್ರ ಎಂದು ಮಾತಿಗಿಳಿದ ಮಿತ್ರ, “ನಾನಿಲ್ಲಿ ತಿಮ್ಮನ ಪಾತ್ರ ನಿರ್ವಹಿಸಿದ್ದೇನೆ. ಅದೊಂದು ಮುಗ್ಧತೆ ಪಾತ್ರ. ನೋಡುಗರಿಗೆ ಕಣ್ಣಂಚಲ್ಲಿ ನೀರು ತುಂಬಿಸುವ ಕಥೆ ಇಲ್ಲಿದೆ. ಹಾಗಂತ ಮನರಂಜನೆ ಇಲ್ಲವೆಂದಲ್ಲ, ಅದಕ್ಕೂ ಜಾಗವಿದೆ. ಒಂದು ಸದಭಿರುಚಿಯ ಚಿತ್ರ ಇದಾಗಲಿದೆ. ಪಕ್ಕಾ ಹಳ್ಳಿ ಭಾಷೆಯ ಚಿತ್ರಣದೊಂದಿಗೆ ಆಪ್ತತೆ ಎನಿಸುವ ಚಿತ್ರ ಇದಾಗಲಿದೆ’ ಎಂದರು ಮಿತ್ರ.

ನಾಯಕಿ ಅಕ್ಷತಾಗೆ ಹೊಸಬಗೆಯ ಪಾತ್ರ ಸಿಕ್ಕ ಖುಷಿ. ನಾಯಕ ಮನೋಜ್‌ಗೆ ಇದು ಹೊಸದೊಂದು ಇಮೇಜ್‌ ತಂದುಕೊಡುವ ಚಿತ್ರವಂತೆ. ನಿರ್ಮಾಪಕರಾದ ಕುಮಾರ್‌, ಲೋಕೇಶ್‌, ಮಹದೇವೇಗೌಡ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ. ಛಾಯಾಗ್ರಾಹಕ ಸುಜಯ್‌ಕುಮಾರ್‌ಗೆ ಇಲ್ಲಿ ಹಳ್ಳಿಯ ಪರಿಸರವನ್ನು ತೋರಿಸಿರುವುದೇ ಚಾಲೆಂಜ್‌ ಅಂತೆ. ಸಂಗೀತ ನಿರ್ದೇಶಕ ಹರ್ಷವರ್ಧನ್‌ ರಾಜ್‌ಗೆ ಇದು ಮೊದಲ ಚಿತ್ರ. ವಿತರಕ ದೀಪಕ್‌ ಸುಮಾರು 120 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next