Advertisement

ಕಾಂಗ್ರೆಸ್‌ ಮುಕ್ತ ಕರ್ನಾಟಕ ನನ್ನಿಂದಲೇ ಆರಂಭ

12:08 PM Mar 12, 2017 | |

ಮೈಸೂರು: ನಂಜನಗೂಡು ಉಪ ಚುನಾವಣೆಯ ಗೆಲುವಿನ ಮೂಲಕ ಕಾಂಗ್ರೆಸ್‌ ಮುಕ್ತ ಕರ್ನಾಟಕದ ಸಂದೇಶ ಕೊಡುತ್ತೇನೆ ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಹೇಳಿದರು. ನಗರದಲ್ಲಿ ಶನಿವಾರ ನಗರ ಬಿಜೆಪಿ ಏರ್ಪಡಿಸಿದ್ದ ಸ್ವಾಭಿಮಾನಿ ಸಮ್ಮಿಲನ ಸಮಾ ವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿದ್ದ ಶೇ.70ರಷ್ಟು ಜನರು ತಮ್ಮ ಜತೆ ಬಂದಾಯ್ತು.

Advertisement

ಇನ್ನು ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರ ಹತ್ತಿರ ಇರುವುದು ಅಧಿಕಾರ ಮತ್ತು ಲೂಟಿ ಮಾಡಿದ ಹಣ ಮಾತ್ರ. ನಂಜನಗೂಡಿನ ಎರಡೂ ಬ್ಲಾಕ್‌ಗಳಿಗೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರನ್ನು ಮಾಡಲಾಗಿಲ್ಲ. ಜತೆಗೆ ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿಯೇ ಇಲ್ಲದೆ ಹೊರಗಿನವರನ್ನು ಕರೆತರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.

ನಂಜನಗೂಡು ಉಪ ಚುನಾವಣೆ ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಚುನಾವಣೆ. ತಾವು ಸೋತರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್‌ ಸೋತರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂಬ ತಮ್ಮ ಪಂಥಾಹ್ವಾನ ನೀಡಿದರೆ ಸ್ವೀಕರಿಸ ಲಾಗದೆ ಶ್ರೀನಿವಾಸಪ್ರಸಾದ್‌ರವರು ಸಕ್ರಿಯ ರಾಜಕಾರಣದಲ್ಲಿರಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಲಾಯನವಾದ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತ ಮಾಡಲು ಬೇರೆಯಾರೂ ಬೇಕಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರ ಮಾತುಗಳನ್ನು ಕೇಳಿದರೇ ಇದು ಗೊತ್ತಾಗುತ್ತದೆ. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಜಾಫ‌ರ್‌ಷರೀಫ್ ಇದು ಕಾಂಗ್ರೆಸ್‌ ಸರ್ಕಾರವೋ? ಸಿದ್ದರಾಮಯ್ಯ ಸರ್ಕಾರವೋ ಎಂದು ಪ್ರಶ್ನಿಸುತ್ತಾರೆ.

ಜನಾರ್ದನ ಪೂಜಾರಿ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಕಾಂಗ್ರೆಸ್‌ಗೆ ಶನಿಕಾಟ ಶುರುವಾಗಿದೆ ಎನ್ನುತ್ತಾರೆ. ಹಿರಿಯ ನಾಯಕರಾದ ಎಸ್‌.ಎಂ.ಕೃಷ್ಣ ಪಕ್ಷದಿಂದ ಹೊರ ನಡೆದಿರುವುದನ್ನು ನೋಡಿದರೆ ಕಾಂಗ್ರೆಸ್‌ನ ಸ್ಥಿತಿ ತಿಳಿಯುತ್ತದೆ. ಇದನ್ನೆಲ್ಲ ಕಂಡು ಕಾಣದಂತಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಕಿವುಡ- ಮೂಗರ ಶಾಲೆಯ ಮೇಷ್ಟ್ರಿದ್ದಂತೆ ಎಂದು ಜರಿದರು.

Advertisement

ಸಿದ್ದರಾಮಯ್ಯ ದಲಿತ ವಿರೋಧಿ, ಖರ್ಗೆ ಸೇರಿದಂತೆ ಎಲ್ಲ ದಲಿತ ನಾಯಕ ರನ್ನೂ ಮುಗಿಸಿದರು. ಮಹದೇವಪ್ಪ, ಸಿದ್ದ ರಾಮಯ್ಯನ ನೆರಳಿದ್ದಂತೆ. ಸಿದ್ದರಾಮಯ್ಯನ ಜತೆ ಬಿಟ್ಟರೆ ಮಹದೇವಪ್ಪನಿಗೆ ಪಂಚಾಯ್ತಿ ಚುನಾವಣೆ ಯನ್ನೂ ಗೆಲ್ಲಲಾಗುವುದಿಲ್ಲ ಎಂದ ಅವರು, ಮುಖ್ಯಮಂತ್ರಿ ಆದವರಿಗೆ ವಿವೇಚನೆ ಇರಬೇಕು. ಸಿದ್ದರಾಮಯ್ಯಗೆ ಸಂಸ್ಕೃತಿ, ನಾಗರಿಕತೆ ಯಾವುದೂ ಗೊತ್ತಿಲ್ಲ. ಉಡಾಫೆಗೆ ಮತ್ತೂಂದು ಹೆಸರೇ ಸಿದ್ದರಾಮಯ್ಯ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ರಾಜ್ಯ ರಾಜಕಾರಣದ ದಿಕ್ಕು ಬದಲಿಸಲಿದೆ. ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಕಿತ್ತೂಗೆದು ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಈ ಚುನಾವಣೆ ದಿಕ್ಸೂಚಿ. ಹೀಗಾಗಿ ಯುದ್ಧ ಶುರುವಾಗಿರುವುದರಿಂದ ಸಣ್ಣಪುಟ್ಟ ಗೊಂದಲಗಳನ್ನು ಬದಿಗಿಟ್ಟು ಪಕ್ಷದ ಗೆಲುವಿಗೆ ಕೆಲಸ ಮಾಡುವಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರ ಬಿಜೆಪಿ ಅಧ್ಯಕ್ಷ ಡಾ. ಬಿ.ಎಚ್‌.ಮಂಜುನಾಥ್‌, ಜಿಲ್ಲಾಧ್ಯಕ್ಷ ಎಂ. ಶಿವಣ್ಣ, ಮಾಜಿ ಸಚಿವ ಎಸ್‌.ಎ.ರಾಮದಾಸ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ, ಎಲ್‌. ನಾಗೇಂದ್ರ, ಎಸ್‌.ವಿ. ಫ‌ಣೀಶ್‌, ಬಿ.ಪಿ. ಮಂಜುನಾಥ್‌, ಕೆ.ಆರ್‌. ಮೋಹನ್‌ಕುಮಾರ್‌ ಉಪಸ್ಥಿತರಿದ್ದರು. ಇದೇ ಸಂದರ್ಭ ದಲ್ಲಿ ಶ್ರೀನಿವಾಸಪ್ರಸಾದ್‌ರ ನೂರಾರು ಬೆಂಬಲಿಗರು ಬಿಜೆಪಿಗೆ ಸೇರ್ಪಡೆ ಯಾದರು.

Advertisement

Udayavani is now on Telegram. Click here to join our channel and stay updated with the latest news.

Next