ಶಿರಸಿ: ನಾನೂ ಮೂಲ ಬಿಜೆಪಿಗನೇ. ಎಲ್ಲೂ ಏನೂ ಸಮಸ್ಯೆ ಇಲ್ಲ. ಎಲ್ಲರೂ ಒಂದಾಗಿ ಬರಲಿರುವ ಚುನಾವಣೆ ಎದುರಿಸುತ್ತೇವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರತಿಪಾದಿಸಿದರು.
ಶಿರಸಿ ಬಿಸಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.ಯಲ್ಲಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಮೂಲ ಬಿಜೆಪಿಗರು, ವಲಸಿಗರ ನಡುವೆ ಗೊಂದಲ ಇದೆ.ಹೇಗೆ ನಿವಾರಿಸುತ್ತೀರಿ ಗೊಂದಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಹೆಬ್ಬಾರ್, ತಾನು ಮೂಲ ಬಿಜೆಪಿಗನೇ ಆಗಿರುವುದರಿಂದ ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿಗ ಎಂಬ
ಯಾವುದೇ ಸಮಸ್ಯೆ ತನಗಿಲ್ಲ ಎಂದು ಪುನರುಚ್ಚರಿಸಿದರು.
ಹಿಂದೆ ಬಿಜೆಪಿ ಜಿಲ್ಲಾ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ವೈಯಕ್ತಿಕ ಹಿತಾಸಕ್ತಿ ಇರುವ ಕಾರ್ಯಕರ್ತರನ್ನು ಸರಿ ಮಾಡಲು ಆಗುತ್ತದೆ ಎಂದು ಹೇಳಲಾಗದು. ಆದರೆ ಸರಿ ಮಾಡಲು ಪ್ರಯತ್ನ ಮಾಡುತ್ತೇವೆ. ರಾಜಕೀಯ ಕಾರಣಕ್ಕೆ ವಿರೋಧಿಸುವವರನ್ನು ಸರಿ ಮಾಡಲು ಸಾಧ್ಯ ಇಲ್ಲ. ಸಂಘಟನೆ ಆಧಾರದ ಮೇಲೆ ತಪ್ಪಿದ್ದರೆ ವಿರೋಧಿಸುವವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದ ಅವರು, ತಪ್ಪಿದ್ದಂತೆ ಪ್ರಾಂಜಲ ಮನಸಿನಿಂದ ತಿದ್ದುಕೊಳ್ಳಲು ಸಿದ್ಧನಿದ್ದೇನೆ. ವಯಕ್ತಿಕ ಆಧಾರದಲ್ಲಿ ವಿರೋಧಿಸುವವರಿಗೆ ದೇವರು ಒಳ್ಳೆದು ಮಾಡಲಿ ಎಂದರು.
ಪಕ್ಷದೊಳಗಿದ್ದವರಿಗೆ ಹಾಗೂ ಹೊರಗಿನವರು ಯಾರೇ ಸಾಹಸ ಮಾಡಲಿ ಅಂತಿಮವಾಗಿ ಮೇಲೆ ಇರುವ ದೇವರು ಹಾಗೂ ನಮ್ಮ ಜನ ನೋಡುವವರಿದ್ದಾರೆ ಎಂದರು.
ಜಿ.ಪಂ. ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ನಾವು ಸಿದ್ದರಿದ್ದೇವೆ. ಚುನಾವಣೆ ಎದುರಿಸುವ ಶಕ್ತಿ ಪಕ್ಷಕ್ಕೆ ಹಾಗು ಸರಕಾರಕ್ಕೆ ಇದೆ. ನಮಗೆ ಯಾವುದೇ ಆತಂಕವಿಲ್ಲ. ಆದರೆ ಗೊತ್ತಿಲ್ಲದೇ ಮಾಡಿದ ಸೀಟು ಹಂಚಿಕೆ. ಮೀಸಲಾತಿಯನ್ನು ಇದನ್ನು ಒಪ್ಪಿಕೊಳ್ಳಲು ಸರಕಾರ ಸಿದ್ದವಿಲ್ಲ ಎಂದ ಹೆಬ್ಬಾರ್, ವಿರೋಧಿ ಪಕ್ಷವಾಗಿ ಆರೋಪಿಸುವದು ಅವರ ಕರ್ತವ್ಯದ ಭಾಗ. ಆಡಳಿತ ಪಕ್ಷ ಎಲ್ಲ ಲೋಪದೋಷಗಳು ಆಗಿದ್ದನ್ನು ಹೇಳಿದರೆ ತಿದ್ದಿಕೊಳ್ಳಬಹುದು. ನಿರಾಧಾರ ಸಹಿಸಲು ಸಾಧ್ಯ ಇಲ್ಲ. ಜಿಲ್ಲಾ ಉಸ್ತುವಾರಿ ಹಂಚಿಕೆ ಪಕ್ಷದ ವರಿಷ್ಠರ ತೀರ್ಮಾನ ಎಂದು ಹೇಳಿದರು.