Advertisement

ಬಿಲ್‌ ಕೊಟ್ಟ ಗ್ರಾಹಕರಿಂದ ಹಣಬಂದಿಲ್ಲ; ಹಣ ಕೊಡುವವರಿಗೆ ಬಿಲ್‌ ಇಲ್ಲ

02:50 AM Jun 28, 2018 | Team Udayavani |

ಮಹಾನಗರ: ನೀರಿನ ಬಿಲ್‌ ಬಾಕಿಯನ್ನು ಜನರು ಯಾವಾಗ ಪಾವತಿಸುತ್ತಾರೆ ಎಂದು ಪಾಲಿಕೆ ಒಂದೆಡೆ ಕಾಯುತ್ತಿದ್ದರೆ, ಇನ್ನೊಂದೆಡೆ ತಿಂಗಳ ನೀರಿನ ಬಿಲ್‌ ಗೆ ಸಾರ್ವಜನಿಕರು ಕಾಯುವಂತಾಗಿದೆ! ಆಶ್ಚರ್ಯವಾದರೂ ಇದು ಸತ್ಯ. ನಗರದ ಬಹುತೇಕ ಭಾಗದ ಮನೆಗಳಿಗೆ ಎಪ್ರಿಲ್‌ನಿಂದ ನೀರಿನ ಬಿಲ್‌ ತಲುಪಲೇ ಇಲ್ಲ. ಕಂದಾಯ ಸೋರಿಕೆ ತಡೆಗಟ್ಟಲು ಪಾಲಿಕೆ ಬದ್ಧವಾಗಿದೆ ಎಂದು ಅಧಿಕಾರಿಗಳು ಪದೇ ಪದೆ ಹೇಳುತ್ತಿದ್ದರೂ ಹಲವೆಡೆಗೆ ಇನ್ನೂ ನೀರಿನ ಬಿಲ್‌ ಪಾವತಿ ಮಾಡಲು ಪಾಲಿಕೆಗೆ ಸಾಧ್ಯವಾಗಿಲ್ಲ. ಹೀಗಾಗಿ ಒಂದೇ ಬಾರಿ ಮೂರು-ನಾಲ್ಕು ತಿಂಗಳಿನ ಬಿಲ್‌ ಬಂದರೆ ಸಾರ್ವಜನಿಕರು ಹೊರೆ ಎದುರಿಸಬೇಕಾಗುತ್ತದೆ. ಹತ್ತು ವರ್ಷಗಳ ಹಿಂದೆ ಟೆಂಡರ್‌ ಮೂಲಕ ಖಾಸಗಿ ಸಂಸ್ಥೆಗಳಿಗೆ ಬಿಲ್‌ ನೀಡುವ ಗುರಿ ನೀಡಲಾಗಿತ್ತು. ಆ ಸಂದರ್ಭದಲ್ಲಿಯೂ ಕೆಲವು ಭಾಗಗಳಿಗೆ ನೀರಿನ ಬಿಲ್‌ ಹೋಗುತ್ತಿರಲಿಲ್ಲ ಎಂಬ ಆರೋಪವೂ ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿತ್ತು. ಇದೇ ವೇಳೆ ನೀರಿನ ಬಿಲ್‌ ಸಾರ್ವಜನಿಕರಿಗೆ ನೀಡಲು ಹೊರಗುತ್ತಿಗೆ ನೀಡಿದವರ ಅವಧಿ ಮಾರ್ಚ್‌ಗೆ ಕೊನೆಗೊಂಡಿತು. ಹಾಗಾಗಿ ಸಮಸ್ಯೆ ಇತ್ಯರ್ಥಪಡಿಸುವ ಹಾಗೂ ನೀರಿನ ಸಂಪರ್ಕದ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಪಾಲಿಕೆಯ ಮಲೇರಿಯಾ ನಿಯಂತ್ರಣ ಘಟಕದ ಸಿಬಂದಿಯನ್ನು ನೀರಿನ ಬಿಲ್‌ ನೀಡಲು ನಿಯೋಜಿಸಲಾಗಿತ್ತು. ಆದರೆ, ಆ ವೇಳೆ ಚುನಾವಣೆ ಎದುರಾಗಿದ್ದು ಒಂದೆಡೆಯಾದರೆ, ಹೊಸದಾಗಿ ಕಾರ್ಯನಿರ್ವಹಿಸುವ ಹಿನ್ನೆಲೆಯಲ್ಲಿ ಪಾಲಿಕೆಯ 60 ವಾರ್ಡ್‌ ಗಳಿಗೂ ಭೇಟಿ ನೀಡಿ ಬಿಲ್‌ ನೀಡಲು ಸಾಧ್ಯವಾಗಲಿಲ್ಲ. ಜತೆಗೆ ಎರಡು ತಿಂಗಳು ತರಬೇತಿ ಅವಧಿ ಎಂದು ಪರಿಗಣಿಸಿ, ಜೂನ್‌ ಮೊದಲ ತಾರೀಕಿನಿಂದ ಈಗ ನೀರಿನ ಬಿಲ್‌ ನೀಡಲು ಮನೆ ಮನೆಗೆ ತೆರಳುತ್ತಿದ್ದಾರೆ.

Advertisement


ನೀರಿನ ಸಂಪರ್ಕದ ಸಮೀಕ್ಷೆ/ಬಿಲ್‌ ಪಾವತಿಯನ್ನು ಅನ್ಯಸಂಸ್ಥೆ ವತಿಯಿಂದ ಹೊರ ಗುತ್ತಿಗೆ ಮೂಲಕ ನಿರ್ವಹಿಸಿದರೆ ಮನಪಾಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದರಿಂದ ಮತ್ತು ಈ ಕಾರ್ಯವನ್ನು ಮಲೇರಿಯಾ ನಿಯಂತ್ರಣ ಘಟಕದ ಸಿಬಂದಿ ಮಾಡುವುದರಿಂದ ತಗಲುವ ವೆಚ್ಚವು ಕಡಿಮೆಯಾಗಿ ನೀರಿಗೆ ತೆರಿಗೆ ಸಂಗ್ರಹದಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇರಿಸಲಾಗಿದೆ. ನೀರಿನ ಬಿಲ್‌ ನ ಜತೆಗೆ ಮಲೇರಿಯಾ ಕಾರ್ಯನಿರ್ವಹಣೆ ಜವಾಬ್ದಾರಿಯಂತೆ ಪ್ರತೀ ವಾರ್ಡ್‌ಗೆ ಒಬ್ಬ MPWವನ್ನು ನಿಯುಕ್ತಿಗೊಳಿಸಲಾಗಿದೆ. ಅವರುತಮ್ಮ ವಾರ್ಡ್‌ ವ್ಯಾಪ್ತಿಯ ಎಲ್ಲ ಕಟ್ಟಡಗಳನ್ನು ಭೇಟಿ ನೀಡಿ ಮಲೇರಿಯಾ ನಿಯಂತ್ರಣ ಮತ್ತು ನೀರಿನ ಬಿಲ್‌ ವಿತರಣೆಯನ್ನುನಿರ್ವಹಿಸಲಿದ್ದಾರೆ.

16 ಕೋ.ರೂ.ಬಾಕಿ
ನೀರಿನ ಬಿಲ್‌ ನೀಡಿದ ಅನಂತರವೂ ನಗರದ ವಿವಿಧ ಮೂಲಗಳಿಂದ ಒಟ್ಟು ಸುಮಾರು 16 ಕೋ.ರೂ. ಹಣ ಪಾಲಿಕೆಗೆ ಬರಲು ಬಾಕಿ ಇದೆ. ಬಾಕಿ ವಸೂಲಿ ಬಗ್ಗೆ ಪಾಲಿಕೆ ಎಚ್ಚರಿಕೆ ನೀಡುತ್ತಿ ದ್ದರೂ, ನೀರಿನ ಬಿಲ್‌ನಲ್ಲಿಯೇ ಈ ಬಗ್ಗೆ ಉಲ್ಲೇಖ ವಿದ್ದರೂ ಬಾಕಿ ವಸೂಲಿ ಮಾಡಲು ಪಾಲಿಕೆಗೆ ಇನ್ನೂ ಸಾಧ್ಯವಾಗಿಲ್ಲ. ಇದೇ ಸಮಸ್ಯೆ ಒಂದೆಡೆ ಇರುವಾಗ, ಮತ್ತೂಂದೆಡೆ ಬಿಲ್‌ ಕೊಡದೆ ಕಂದಾಯ ಸಂಗ್ರಹ ಮಾಡುವುದು ಹೇಗೆ ಎಂಬುದಕ್ಕೆ ಪಾಲಿಕೆಯೇ ಉತ್ತರ ನೀಡಬೇಕಿದೆ.

ವಾರ್ಡ್‌ಗೆ ಒಬ್ಬರು
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ, ಡೆಂಗ್ಯೂ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು 2012ರ ಎ. 17ರಂದು ಸ್ಥಳೀಯ ಅಗತ್ಯಕ್ಕನುಸಾರವಾಗಿ 50 ಜನ ವಿವಿಧೋದ್ದೇಶ ಕಾರ್ಯಕರ್ತರು, 7 ಜನ ಮೇಲ್ವಿಚಾರಕರು, 3 ಜನ ಪ್ರಯೋಗಶಾಲಾ ತಂತ್ರಜ್ಞರು, 2 ಜನ ಕೀಟ ಸಂಗ್ರಹಕಾರರು ಮತ್ತು 30 ಜನ ಔಷಧ ಸಿಂಪಡಣೆ ಕಾರ್ಮಿಕರನ್ನು (ಒಟ್ಟು  92 ಸಿಬಂದಿ)ಹೊರಗುತ್ತಿಗೆ ಮೂಲಕ ಪಡೆಯಲಾಗಿತ್ತು. ಇದರಂತೆ ಒಟ್ಟು 60 ವಾರ್ಡ್‌ಗಳಿಗೆ ಒಂದೊಂದು ಕಾರ್ಯಕರ್ತರಂತೆ 60 ಜನರನ್ನು ನೇಮಿಸಲಾಗಿತ್ತು.

ಬಿಲ್‌ ನೀಡಲು ಸೂಕ್ತ ಕ್ರಮ
ನೀರಿನ ಬಿಲ್‌ ಪಾವತಿಗೆ ಸಂಬಂಧಿಸಿ ಇಲ್ಲಿಯವರೆಗೆ ಸ್ವಲ್ಪ  ಗೊಂದಲವಿತ್ತು. ಆದರೆ, ಈಗ MPW ಕಾರ್ಮಿಕರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಅದರಂತೆ 60 ವಾರ್ಡ್‌ಗಳಿಗೆ 60 ಜನರು ತೆರಳಿ ಮಲೇರಿಯಾ ಜಾಗೃತಿ ಹಾಗೂ ನೀರಿನ ಬಿಲ್‌ ನೀಡುವ ಕೆಲಸ ಮಾಡುತ್ತಿದ್ದಾರೆ. ನೀರು ಬಳಕೆ ಮಾಡುವ ಎಲ್ಲರಿಗೂ ಬಿಲ್‌ ನೀಡಿ, ಕಂದಾಯ ವಸೂಲಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
– ಭಾಸ್ಕರ್‌,  ಮೇಯರ್‌ 

Advertisement

ನಾಲ್ಕು ತಿಂಗಳಿನಿಂದ ಬಿಲ್‌ ಬಂದಿಲ್ಲ
ನೀರಿನ ಬಿಲ್‌ ಪಾವತಿಸುವ ಬಗ್ಗೆ ಪಾಲಿಕೆ ನಿತ್ಯ ಸೂಚಿಸುತ್ತದೆ. ಆದರೆ, ನಮ್ಮ ಮನೆಗೆ ನಾಲ್ಕು ತಿಂಗಳಿನಿಂದ ನೀರಿನ ಬಿಲ್‌ ಬಂದಿಲ್ಲ. ಪ್ರತೀ ತಿಂಗಳು ನೀರಿನ ಬಿಲ್‌ ಪಾವತಿ ಮಾಡುವ ನಮಗೆ ಇಂತಹ ಸಮಸ್ಯೆಯಾಗಿದೆ. ಪಾಲಿಕೆ ಆಡಳಿತ ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ.
– ಕಿಶೋರ್‌, ಕಾವೂರು

— ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next