ವಿಜಯಪುರ : ಎಲ್ಲ ಜಾತಿ, ಧರ್ಮಗಳ ಬಗ್ಗೆ ನಮ್ಮ ಪಕ್ಷ, ಹಾಗೂ ಸರ್ಕಾರಕ್ಕೆ ಕಾಳಜಿ ಇದೆ. ಈ ಕಾರಣಕ್ಕಾಗಿ ರಾಜ್ಯದ ಜನರು ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿ, ಸಿ.ಟಿ. ಅವರನ್ನು ಮನೆಗೆ ಕಳಿಸಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತುರುಗೇಟು ನೀಡಿದ್ದಾರೆ.
ಬುಧವಾರ ನಗರದಲ್ಲಿ ಕೆಡಿಪಿ ಸಭೆಗೆ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದ ಜನರ ಬಗ್ಗೆ ನಮ್ಮ ಸರ್ಕಾರಕ್ಕೆ ಕಾಳಜಿ ಇದೆ. ಜಾತಿ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ನಾಯಕರ ನಡೆ ಸರಿಯಾದ ಕ್ರಮವಲ್ಲ ಎಂದರು.
ಎಸ್ಸಿಪಿ – ಟಿಎಸ್ಪಿ ಯೋಜನೆ ಜಾರಿಗೊಳಿಸಿದವರು ಯಾರು ಎಂದು ಸಿ.ಟಿ.ರವಿ ಅವರನ್ನು ಕೇಳಿ. ಬಜೆಟ್ ಗಿಂತ ಹೆಚ್ಚಾಗಿ 10-20 ಸಾವಿರ ಕೋಟಿ ರೂ. ಹೆಚ್ಚಿನ ವೆಚ್ಚ ಮಾಡಿ ರಾಜ್ಯವನ್ನು ಲೂಟಿ ಹೊಡೆದಿರುವ ಇವರು ರಾಮ ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಇದು ಇವರ ರಾಮ ರಾಜ್ಯವೇ ಎಂದು ಕಿಡಿಕಾರಿದ ಸಚಿವ ಎಂ.ಬಿ.ಪಾಟೀಲ, ಇಂಥ ಬಿಜೆಪಿ ನಾಯಕರಿಂದ ನಾವು ಕಲಿಯುವುದು ಏನೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪುಲ್ವಾಮಾ, ಬಾಲಾಕೋಟ್ ದುರ್ಘಟನೆಗಳ ಹೆಸರಿನಲ್ಲಿ ಚುನಾವಣಾ ರಾಜಕೀಯ ಮಾಡುತ್ತ ಬರುತ್ತಿರುವ ಬಿಜೆಪಿ ನಾಯಕರು ಇದೀಗ ಮತ್ತೆ ರಾಮನ ಹೆಸರಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ ಎಂದು ಕುಟುಕಿದರು.
ವಿಜಯಪುರ ನಗರಕ್ಕೆ ಆಗಮಿಸಿದ್ದ ಕೇಂದ್ರದ ಪ್ರಹ್ಲಾದ ಜೋಶಿ ಅವರು ದೊಡ್ಡ ದೊಡ್ಡ ಮಾತನಾಡಿ ಹೋಗಿದ್ದಾರೆ. ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಮಾಡಲಾಗಿದೆ ಎಂದಿದ್ದಾರೆ. ಮಟ್ಕಾ ಸೇರಿದಂತೆ 18 ಪ್ರಕರಣಗಳು ದಾಖಲಾಗಿರುವ ವ್ಯಕ್ತಿಯ ಬಂಧನವನ್ನು ವಿರೋಧಿಸಿ ಬಿಜೆಪಿ ಹೋರಾಟ ನಡೆಸಿದೆ. ರೌಡಿಶೀಟರ್ ತರಹದ ವ್ಯಕ್ತಿಯನ್ನು ಬೆಳೆಸಲು ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ. ಇತಿಹಾಸ ತಿರುಚುವಂಥದ್ದು ನಾಚಿಕೆಗೇಡಿನ ಸಂಗತಿ ಎಂದು ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ: Yuva Nidhi Scheme: ಜ.12ರಂದು ರಾಜ್ಯದ 5ನೇ ಗ್ಯಾರಂಟಿ ಯೋಜನೆ ‘ಯುವನಿಧಿ’ಗೆ ಚಾಲನೆ